ಬೆಂಗಳೂರು: ವರ್ಷದ ಕೊನೆ ದಿನವಾದ ಮಂಗಳವಾರ 67 ಐಎಎಸ್, 65 ಐಪಿಎಸ್ ಮತ್ತು 21 ಐಎಫ್‌ಎಸ್ ಅಧಿಕಾರಿಗಳಿಗೆ ಬಡ್ತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಇವರಲ್ಲಿ ಕೆಲವು ಐಪಿಎಸ್ ಮತ್ತು ಐಎಫ್‌ಎಸ್ ಅಧಿಕಾರಿಗಳಿಗೆ ಬಡ್ತಿಯೊಂದಿಗೆ ವರ್ಗಾವಣೆಯನ್ನೂ ಮಾಡಲಾಗಿದೆ.
ಐಪಿಎಸ್ ಅಧಿಕಾರಿಗಳಾದ ವಿಕಾಶ್ ಕುಮಾರ್ ವಿಕಾಶ್ ಅವರನ್ನು ಬಡ್ತಿಯೊಂದಿಗೆ ಬೆಂಗಳೂರು ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಹುದ್ದೆಗೆ, ರಮಣ ಗುಪ್ತ ಅವರನ್ನು ಬೆಂಗಳೂರು ನಗರ ಗುಪ್ತದಳದ ಹೆಚ್ಚುವರಿ ಕಮಿಷನರ್ ಆಗಿ ಮತ್ತು ಚೇತನ್ ಸಿಂಗ್ ರಾಥೋಡ್ ಅವರನ್ನು ಬೆಳಗಾವಿ ಉತ್ತರ ವಲಯದ ಐಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ.
ಬಡ್ತಿ ಹೊಂದಿದ ಇತರರಲ್ಲಿ ವಂಶಿಕೃಷ್ಣ (ಐಜಿಪಿ ನೇಮಕಾತಿ), ಕಾರ್ತಿಕ್ ರೆಡ್ಡಿ (ಡಿಐಜಿ, ಆಡಳಿತ, ಕೇಂದ್ರ ಕಚೇರಿ), ಕುಲದೀಪ್ ಕುಮಾರ್ ಜೈನ್ (ಜಂಟಿ ಆಯುಕ್ತ(ಆಡಳಿತ), ಬೆಂಗಳೂರು ನಗರ), ಜಿ.ಸಂಗೀತಾ (ಡಿಐಜಿ, ಅರಣ್ಯ ಕೋಶ, ಅಪರಾಧ ತನಿಖಾ ವಿಭಾಗ) ಮತ್ತು ರೇಣುಕಾ ಕೆ. ಸುಕುಮಾರ್ ಅವರನ್ನು ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಡಿಐಜಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
ಐಎಫ್‌ಎಸ್ ಬಡ್ತಿ, ವರ್ಗಾವಣೆ: 21 ಐಎಫ್‌ಎಸ್ ಅಧಿಕಾರಿಗಳಿಗೆ ಬಡ್ತಿ ನೀಡಲಾಗಿದ್ದು, ಬಡ್ತಿ ಪಡೆದ ಆರು ಮಂದಿ ಸೇರಿದಂತೆ ಒಟ್ಟು ಎಂಟು ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.
ಕೋಲಾರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು ಅವರಿಗೆ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗೆ ಬಡ್ತಿಯೊಂದಿಗೆ ಹಾಸನ ವಿಭಾಗಕ್ಕೆ ವರ್ಗಾಯಿಸಲಾಗಿದೆ. ಎಪಿಸಿಸಿಎಫ್ ಹುದ್ದೆಗೆ ಬಡ್ತಿ ಪಡೆದ ಕೊಡಗು ವೃತ್ತದ ಸಿಸಿಎಫ್ ಮನೋಜ್‌ಕುಮಾರ್ ತ್ರಿಪಾಠಿ ಅವರನ್ನು ಬೆಂಗಳೂರಿನ ಅರಣ್ಯ ಜಮೀನುಗಳ ದಾಖಲೆ ವಿಭಾಗಕ್ಕೆ, ಚಿಕ್ಕಮಗಳೂರು ವೃತ್ತದ ಸಿಸಿಎಫ್ ಯು.ಪಿ. ಸಿಂಗ್ ಅವರನ್ನು ಸಾಮಾಜಿಕ ಅರಣ್ಯ ಮತ್ತು ಯೋಜನಾ ವಿಭಾಗಕ್ಕೆ, ಭದ್ರಾ ಹುಲಿ ಸಂರಕ್ಷಿತ ಅರಣ್ಯದ ಕ್ಷೇತ್ರ ನಿರ್ದೇಶಕ ಯಶ್‌ಪಾಲ್ ಕ್ಷೀರಸಾಗರ್ ಅವರನ್ನು ಚಿಕ್ಕಮಗಳೂರು ವೃತ್ತಕ್ಕೆ ವರ್ಗಾವಣೆ ಮಾಡಲಾಗಿದೆ.
ಡಿಸಿಎಫ್‌ಗಳಾದ ಪ್ರಭಾಕರ್ ಪ್ರಿಯದರ್ಶಿನಿ ಅವರನ್ನು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಿಂದ ಯಾದಗಿರಿ ವಿಭಾಗಕ್ಕೆ, ಕಾಜೋಲ್ ಅಜಿತ್ ಪಾಟೀಲ್ ಅವರನ್ನು ಯಾದಗಿರಿ ವಿಭಾಗದಿಂದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ, ಎಸಿಎಫ್ ವಿ. ಅಭಿಷೇಕ್ ಅವರನ್ನು ಎಚ್.ಡಿ. ಕೋಟೆ ವಿಭಾಗದಿಂದ ಕಾಡುಗೋಡಿಗೆ, ಪುಲ್‌ಕಿತ್ ಮೀನಾ ಅವರನ್ನು ಹಾಸನ ವಿಭಾಗದಿಂದ ಭದ್ರಾ ಹುಲಿ ಸಂರಕ್ಷಿತ ಅರಣ್ಯ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.
ಕೇಂದ್ರ ಭಾರಿ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಆಪ್ತ ಕಾರ್ಯದರ್ಶಿಯಾಗಿ ನೇಮಕವಾಗಿರುವ ತಕತ್ ಸಿಂಗ್ ರಣಾವತ್ ಅವರಿಗೆ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಯಿಂದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗೆ ಬಡ್ತಿ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.