ADVERTISEMENT

ಹೂಡಿಕೆ ಆಕರ್ಷಣೆಗೆ ತಜ್ಞರ ಮೊರೆ: 1 ಟ್ರಿಲಿಯನ್ ಆರ್ಥಿಕತೆ ಗುರಿ ತಲುಪಲು ಸಂಕಲ್ಪ

ಆರು ಕ್ಷೇತ್ರಗಳಿಗೆ ಪರಿಣಿತರು

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 15:26 IST
Last Updated 6 ಆಗಸ್ಟ್ 2025, 15:26 IST
<div class="paragraphs"><p>ಸಾಂಕೇತಿಕ ಚಿತ್ರ</p></div>

ಸಾಂಕೇತಿಕ ಚಿತ್ರ

   

ಬೆಂಗಳೂರು: ರಾಜ್ಯದಲ್ಲಿ ಹೊಸ ತಲೆಮಾರಿನ ತಂತ್ರಜ್ಞಾನದ ಉದ್ಯಮ ಕ್ಷೇತ್ರದಲ್ಲಿ ಹೂಡಿಕೆಯನ್ನು ಆಕರ್ಷಿಸಲು ತಾಂತ್ರಿಕ ವೃತ್ತಿಪರರನ್ನು ನೇಮಕ ಮಾಡಿಕೊಳ್ಳಲು ಕೈಗಾರಿಕಾ ಇಲಾಖೆಯ ಅಧೀನ ಸಂಸ್ಥೆ ‘ಇನ್ವೆಸ್ಟ್‌ ಕರ್ನಾಟಕ ಫೋರಂ’ ಮುಂದಾಗಿದೆ.

ಒಟ್ಟು ಆರು ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಆರು ಮಂದಿ ತಾಂತ್ರಿಕ ಪರಿಣಿತರನ್ನು ನೇಮಕ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ. ಇವರನ್ನು ಮೂರು ವರ್ಷಗಳ ಅವಧಿಗೆ ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗುವುದು. ಪ್ರತಿಯೊಬ್ಬರಿಗೂ ವರ್ಷಕ್ಕೆ ₹20 ಲಕ್ಷದಿಂದ ₹45 ಲಕ್ಷದವರೆಗೆ ಸಂಭಾವನೆ ನಿಗದಿ ಮಾಡಲಾಗಿದೆ. ಈ ಪ್ರಸ್ತಾವಕ್ಕೆ ಹಣಕಾಸು ಇಲಾಖೆಯೂ ಒಪ್ಪಿಗೆ ನೀಡಿದೆ.

ADVERTISEMENT

ಆಯಾ ಕ್ಷೇತ್ರಗಳ ತಾಂತ್ರಿಕ ಪರಿಣಿತರು ದೇಶ– ವಿದೇಶಗಳ ಹೂಡಿಕೆದಾರರನ್ನು ಗುರುತಿಸಿ, ರಾಜ್ಯಕ್ಕೆ ಕರೆತಂದು ಹೂಡಿಕೆ ಮಾಡಿಸುವ ಜವಾಬ್ದಾರಿ ಹೊಂದಿರುತ್ತಾರೆ. ಇದಕ್ಕೆ ಪೂರಕವಾಗಿ ಸರ್ಕಾರಕ್ಕೆ ಅಗತ್ಯ ಸಲಹೆ ಸೂಚನೆಗಳನ್ನೂ ನೀಡುತ್ತಾರೆ.

ತಾಂತ್ರಿಕ ಪರಿಣಿತರ ನೇಮಕಕ್ಕಾಗಿ ಇನ್ವೆಸ್ಟ್‌ ಕರ್ನಾಟಕ ವೆಬ್‌ಸೈಟ್‌ ಮೂಲಕ ಬಯೋಡೇಟಾಗಳನ್ನು ಆಹ್ವಾನಿಸಲಾಗಿದೆ. ಈವರೆಗೆ ಒಟ್ಟು 69 ಮಂದಿ ಅರ್ಜಿ ಸಲ್ಲಿಸಿದ್ದು, ಅವುಗಳನ್ನು ಆಮೂಲಾಗ್ರವಾಗಿ ಪರಿಶೀಲಿಸಿ ಒಟ್ಟು 18 ಅರ್ಜಿದಾರರ ಪಟ್ಟಿ ಸಿದ್ಧಪಡಿಸಲಾಗಿದೆ. ವಿವಿಧ ಹಂತಗಳ ಸಂದರ್ಶನ ನಡೆಸಿ, ಅಂತಿಮವಾಗಿ ಆರು ಮಂದಿಯನ್ನು ಆಯ್ಕೆ ಮಾಡಲಾಗುವುದು. ಈ ಪ್ರಕ್ರಿಯೆಯನ್ನು ಹೂಡಿಕೆ ಕ್ಷೇತ್ರದಲ್ಲಿ ಪಳಗಿರುವ ಏಜೆನ್ಸಿಯೊಂದು ನಡೆಸುತ್ತಿದೆ. ಸರ್ಕಾರದ ಹಸ್ತಕ್ಷೇಪವಿಲ್ಲದೆ ಎಲ್ಲವೂ ಪಾರದರ್ಶಕವಾಗಿ ನಡೆಯುತ್ತಿದೆ ಎಂದು ಕೈಗಾರಿಕಾ ಇಲಾಖೆ ಮೂಲಗಳು ತಿಳಿಸಿವೆ.

‘ಕರ್ನಾಟಕವನ್ನು ಒಂದು ಟ್ರಿಲಿಯನ್ ಆರ್ಥಿಕತೆಯ ರಾಜ್ಯವಾಗಿಸುವ ಗುರಿ ಹೊಂದಿದ್ದೇವೆ. ಮುಖ್ಯವಾಗಿ ಮಾರ್ಕೆಟಿಂಗ್‌ ಇಂಟಲಿಜೆನ್ಸ್‌ ಮತ್ತು ಅನಾಲಿಟಿಕ್ಸ್‌, ಇಎಸ್‌ಡಿಎಂ– ಸೆಮಿಕಂಡಕ್ಟರ್‌, ಇ ಮೊಬಿಲಿಟಿ, ಆಟೊ, ಆಟೊ ಕಾಂಪೊನೆಂಟ್‌, ವೈಮಾನಿಕ ಮತ್ತು ರಕ್ಷಣಾ ಕ್ಷೇತ್ರಕ್ಕೆ ದೊಡ್ಡ ಮಟ್ಟದ ಉತ್ತೇಜನ ನೀಡಲು ತೀರ್ಮಾನಿಸಿದ್ದೇವೆ. ನೆರೆಯ ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳು ಈ ಕ್ಷೇತ್ರಗಳಲ್ಲಿ ದಾಪುಗಾಲಿಡುತ್ತಿದ್ದು, ಕರ್ನಾಟಕ ಹಿಂದುಳಿಯಲು ಸಾಧ್ಯವಿಲ್ಲ. ಇದಕ್ಕಾಗಿ ಸೂಕ್ತ ಹೂಡಿಕೆದಾರರನ್ನು ಗುರುತಿಸಿ, ಹೂಡಿಕೆ ಮಾಡಿಸಲು ಪರಿಣಿತರ ಅಗತ್ಯವಿದೆ’ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ತಿಳಿಸಿದರು.

‘ಸೆಮಿಕಂಡಕ್ಟರ್‌, ಮ್ಯಾನ್ಯುಫ್ಯಾಕ್ಚರಿಂಗ್‌, ಇವಿ, ಕ್ವಾಂಟಂ ಕ್ಷೇತ್ರದಲ್ಲಿ ನೆರೆಯ ರಾಜ್ಯಗಳು ತೀವ್ರ ಪೈಪೋಟಿ ನೀಡುತ್ತಿವೆ. ಆ ರಾಜ್ಯಗಳನ್ನು ಹಿಂದಿಕ್ಕಿ ನಾವು ಮುನ್ನಡೆಯಬೇಕಾಗಿದೆ. ಸರ್ಕಾರ ನೇಮಿಸಿಕೊಳ್ಳುವ ತಾಂತ್ರಿಕ ಪರಿಣಿತರು ಕರ್ನಾಟಕದ ಉದ್ಯಮ ಕ್ಷೇತ್ರವನ್ನು ಅಧ್ಯಯನ ಮಾಡಿ, ಇಲ್ಲಿಗೆ ಸರಿ ಹೊಂದುವ ಉದ್ಯಮಗಳಲ್ಲಿ ಹೂಡಿಕೆ ಮಾಡಲು ಸರ್ಕಾರಕ್ಕೆ ಅಗತ್ಯ ಸಲಹೆಗಳನ್ನು ನೀಡುತ್ತಾರೆ. ಅದಕ್ಕೆ ಪೂರಕವಾಗಿ ಉದ್ಯಮ ನೀತಿಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಬೇಕಾಗುತ್ತದೆ’ ಎಂದು ಹೇಳಿದರು.

‘ಲ್ಯಾಟರಲ್‌ ಎಂಟ್ರಿ ವ್ಯವಸ್ಥೆಗೂ ನಮ್ಮ ವ್ಯವಸ್ಥೆಗೂ ಸಂಬಂಧವಿಲ್ಲ. ತಮಿಳುನಾಡಿನಲ್ಲೂ ನಮ್ಮ ರೀತಿಯಲ್ಲೇ ತಜ್ಞರನ್ನು ನೇಮಿಸಿಕೊಂಡು ಹೂಡಿಕೆ ಆಕರ್ಷಿಸುವ ವ್ಯವಸ್ಥೆ ಜಾರಿಯಲ್ಲಿದೆ. ಐಎಎಸ್‌ ಅಧಿಕಾರಿಗಳು ಸರ್ಕಾರದ ಇತರ ಕೆಲಸ ಮಾಡಬೇಕಾಗಿದೆ. ತಜ್ಞರ ಕೆಲಸವನ್ನು ಅವರು ಮಾಡಲು ಸಾಧ್ಯವಾಗದು’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.