ADVERTISEMENT

ಸಾರಿಗೆ ಮುಷ್ಕರದ ಕಾವು ಶುರು: ಪರದಾಡುತ್ತಿರುವ ಪ್ರಯಾಣಿಕರು

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2021, 13:20 IST
Last Updated 6 ಏಪ್ರಿಲ್ 2021, 13:20 IST
ಬೆಂಗಳೂರಿನ ಮೆಜೆಸ್ಟಿಕ್‌ ಬಸ್‌ ನಿಲ್ದಾಣ
ಬೆಂಗಳೂರಿನ ಮೆಜೆಸ್ಟಿಕ್‌ ಬಸ್‌ ನಿಲ್ದಾಣ   

ಬೆಂಗಳೂರು: ಸಾರಿಗೆ ನೌಕರರ ಮುಷ್ಕರದ ಕಾವು ಮಂಗಳವಾರ ಮಧ್ಯಾಹ್ನದ ನಂತರವೇ ಶುರುವಾಗಿದ್ದು, ಬಸ್‌ಗಳ ಸಂಚಾರ ವಿರಳವಾಗಿದೆ.

ಬೆಳಿಗ್ಗೆ ಜನರಲ್ ಶಿಫ್ಟ್‌ನಲ್ಲಿ ಕರ್ತವ್ಯ ಆರಂಭಿಸಿರುವ ಬಸ್‌ಗಳು ಮಾತ್ರ ಕಾರ್ಯಾಚರಣೆಯಲ್ಲಿದ್ದು, ಸೆಕೆಂಡ್ ಶಿಫ್ಟ್‌ ಅಂದರೆ ರಾತ್ರಿ ತಂಗಬೇಕಾದ ಕರ್ತವ್ಯದ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿಲ್ಲ. ಹೀಗಾಗಿ, ಮಧ್ಯಾಹ್ನದ ನಂತರ ಬಸ್‌ಗಳ ಕಾರ್ಯಾಚರಣೆ ಆರಂಭವಾಗಿಲ್ಲ. ಡಿಪೋಗಳಲ್ಲಿ ಬಸ್‌ಗಳು ನಿಂತಲ್ಲೇ ನಿಂತಿವೆ. ಬಸ್‌ ನಿಲ್ದಾಣಗಳಲ್ಲಿ ಬಸ್‌ಗಳಿಲ್ಲದೆ ಪ್ರಯಾಣಿಕರು ಪರದಾಡುತ್ತಿದ್ದಾರೆ.

ಬಿಎಂಟಿಸಿಯ 6 ಸಾವಿರಕ್ಕೂ ಹೆಚ್ಚು ಬಸ್‌ಗಳು ಸೇರಿ ನಾಲ್ಕು ನಿಗಮಗಳ ಸುಮಾರು 20 ಸಾವಿರ ಬಸ್‌ಗಳ ಕಾರ್ಯಾಚರಣೆ ಬುಧವಾರ ಸ್ಥಗಿತವಾಗಲಿದೆ. ಬಿಎಂಟಿಸಿಯ 30 ಲಕ್ಷ ಪ್ರಯಾಣಿಕರು ಸೇರಿ 1 ಕೋಟಿಯಷ್ಟು ಪ್ರಯಾಣಿಕರು ತೊಂದರೆ ಅನುಭವಿಸಲಿದ್ದಾರೆ ಎಂದು ಅಂದಾಜಿಸಲಾಗಿದೆ.

ADVERTISEMENT

ಈ ನಡುವೆ ಪ್ರಯಾಣಿಕರಿಗೆ ತೊಂದರೆ ಆಗದಂತೆ ಪರ್ಯಾಯವಾಗಿ ಖಾಸಗಿ ಬಸ್‌ಗಳ ಕಾರ್ಯಾಚರಣೆ ಆರಂಭಿಸಲಾಗುವುದು. ಖಾಸಗಿ ಬಸ್‌ಗಳು ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ ನಿಲ್ದಾಣಕ್ಕೆ ಬರಲು ಅನುಮತಿ ನೀಡಲಾಗಿದೆ. ನಗರದಲ್ಲಿ ಸುಮಾರು 3 ಸಾವಿರ ಖಾಸಗಿ ಬಸ್‌ಗಳ ಕಾರ್ಯಾಚರಣೆ ಆರಂಭಿಸಲು ಸಜ್ಜಾಗಿದೆ. ಅಲ್ಲದೇ ತರಬೇತಿ ಅವಧಿಯಲ್ಲಿರುವ 2 ಸಾವಿರ ಸಿಬ್ಬಂದಿಯನ್ನು ಬಳಸಿಕೊಂಡು ಬಸ್‌ಗಳ ಕಾರ್ಯಾಚರಣೆ ನಡೆಸಲು ಆಲೋಚಿಸಿದೆ. ಅಲ್ಲದೇ ಕರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿಗೆ ರಕ್ಷಣೆ ನೀಡಲಾಗುವುದು ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ತಿಳಿಸಿದ್ದಾರೆ.

ಮುಷ್ಕರದ ನೇತೃತ್ವ ವಹಿಸಿರುವ ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಬಿಎಂಟಿಸಿ ನೌಕರ ತ್ಯಾಗರಾಜ್ ಎಂಬುವರು ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ ಅವರಿಗೆ ದೂರು ನೀಡಿದ್ದಾರೆ.

‘ಸಾರ್ವಜನಿಕರಿಗೆ ಸೇವೆ ನೀಡುವುದು ನಮ್ಮ ಧ್ಯೇಯ. ಮುಷ್ಕರದ ವೇಳೆ ಅಹಿತಕರ ಘಟನೆಗಳು ನಡೆದರೆ ಕೋಡಿಹಳ್ಳಿ ಚಂದ್ರಶೇಖರ್ ಅವರೇ ಹೊಣೆ’ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಇನ್ನಷ್ಟು ಓದು–

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.