ವಿಧಾನ ಪರಿಷತ್ ಕಲಾಪದಲ್ಲಿ ಎಚ್ ವಿಶ್ವನಾಥ್ ಮತ್ತು ಎಂ.ಟಿ.ಬಿ ನಾಗರಾಜ್ ಜೊತೆ ಮಾತುಕತೆಯಲ್ಲಿ ತೊಡಗಿದ್ದ ಛಲವಾದಿ ನಾರಾಯಣ ಸ್ವಾಮಿ
–ಪ್ರಜಾವಾಣಿ ಚಿತ್ರ/ ರಂಜು ಪಿ
ಬೆಂಗಳೂರು: ‘ಕಲಬುರಗಿ ಜಿಲ್ಲೆಯ ಚಿತ್ತಾಪುರಕ್ಕೆ ಹೋಗಿದ್ದಾಗ ಗೂಂಡಾಗಳು ತಮ್ಮನ್ನು ಕೂಡಿಹಾಕಿದ್ದರು’ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಹೇಳಿದ ಮಾತು ವಿಧಾನ ಪರಿಷತ್ತಿನ ಸೋಮವಾರದ ಕಲಾಪದ ಬಹುಪಾಲು ಸಮಯವನ್ನು ನುಂಗಿ ಹಾಕಿತು.
ಅರಣ್ಯ ಪ್ರದೇಶ ಒತ್ತುವರಿ ತೆರವಿಗೆ ಸಂಬಂಧಿಸಿದ ವಿಷಯವನ್ನು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿದ ಛಲವಾದಿ ನಾರಾಯಣಸ್ವಾಮಿ ಅವರು, ಚಿತ್ತಾಪುರದ ಗಲಾಟೆಯತ್ತ ವಿಷಯ ಹೊರಳಿಸಿದರು. ಈ ವೇಳೆ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೆಸರು ಪ್ರಸ್ತಾಪಿಸಿ ಗೂಂಡಾಗಳು ತಮ್ಮನ್ನು ಕೂಡಿಹಾಕಿದ್ದರು ಎಂದರು. ಇದಕ್ಕೆ ಕಾಂಗ್ರೆಸ್‌ನ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕಾರಣ, ಸಭಾಧ್ಯಕ್ಷರು ಕಲಾಪವನ್ನು ಮಧ್ಯಾಹ್ನ 3.30ರವವರೆಗೆ ಮುಂದೂಡಿದರು.
ಮಧ್ಯಾಹ್ನ ಕಲಾಪ ಆರಂಭವಾದಾಗಲೂ ನಾರಾಯಣಸ್ವಾಮಿ ಅವರು ಚಿತ್ತಾಪುರದ ವಿಷಯ ಪ್ರಸ್ತಾಪಕ್ಕೆ ಮುಂದಾದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಭಾಧ್ಯಕ್ಷ ಬಸವರಾಜ ಹೊರಟ್ಟಿ ಅವರು, ‘ನೀವು ದೂರು ನೀಡಿದ್ದೀರಿ. ಅದು ಹಕ್ಕುಚ್ಯುತಿ ಸಮಿತಿ ಮುಂದಿದೆ’ ಎಂದರು. ತಾವು ವಿಷಯ ಪ್ರಸ್ತಾಪಿಸಲೇಬೇಕು ಎಂದು ನಾರಾಯಣಸ್ವಾಮಿ ಅವರು ಪಟ್ಟು ಹಿಡಿದ ಕಾರಣ, ಸಭಾಧ್ಯಕ್ಷರು ಅನುಮತಿ ನೀಡಿದರು.
ನಾರಾಯಣಸ್ವಾಮಿ ಅವರು, ‘ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ‘ಶ್ವಾನ ಬೊಗಳಿದರೆ ಆನೆ ಹೆದರುವುದೇ’ ಎಂದು ಗಾದೆ ಮಾತು ಹೇಳಿದ್ದೆ. ಆನಂತರ ಚಿತ್ತಾಪುರಕ್ಕೆ ತೆರಳಿದೆ. ಅಲ್ಲಿ ಐದೇ ನಿಮಿಷದಲ್ಲಿ ಗೂಂಡಾಗಳು ಸೇರಿ ನನ್ನನ್ನು ಕೂಡಿ ಹಾಕಿದರು’ ಎನ್ನುತ್ತಿದ್ದಂತೆಯೇ ಕಾಂಗ್ರೆಸ್ ಸದಸ್ಯರು ಆಕ್ಷೇಪ ಎತ್ತಿದರು.
‘ವಿರೋಧ ಪಕ್ಷದ ನಾಯಕರು ಸತ್ಯವನ್ನು ಮುಚ್ಚಿಡುತ್ತಿದ್ದಾರೆ. ಸಚಿವರಿಗೆ ಅಂತಹ ಎಂಬ ಪದಬಳಕೆ ಮಾಡಿದ್ದಾರೆ. ಅವರು ಕ್ಷಮೆ ಕೇಳಬೇಕು’ ಎಂದು ಪಟ್ಟು ಹಿಡಿದರು.
‘ತನ್ನನ್ನು ಕೂಡಿ ಹಾಕಿಸಿದ ಸಚಿವರು ಮುಖ್ಯಮಂತ್ರಿ ಸಮ್ಮುಖದಲ್ಲಿ ಉತ್ತರ ನೀಡಬೇಕು ಇಲ್ಲವೇ ರಾಜೀನಾಮೆ ನೀಡಬೇಕು’ ಎಂದು ನಾರಾಯಣಸ್ವಾಮಿ ಪಟ್ಟು ಬದಲಿಸಿದರು. ‘ಸಚಿವರನ್ನು ನಾಯಿ ಎನ್ನಬಹುದೇ’ ಎಂದು ಕಾಂಗ್ರೆಸ್ ಸದಸ್ಯರು ಪ್ರಶ್ನೆಹಾಕಿದರು.
‘ನಾನು ತಪ್ಪು ಮಾಡಿದ್ದರೆ, ದೂರು ನೀಡಬೇಕಿತ್ತು. ಕೂಡಿಹಾಕಿ ಶಿಕ್ಷೆ ನೀಡುವ ಅಧಿಕಾರವನ್ನು ಕಾಂಗ್ರೆಸ್‌ಗೆ ನೀಡಿದವರು ಯಾರು? ಅದು ಗೂಂಡಾಗಿರಿ’ ಎಂದು ನಾರಾಯಣಸ್ವಾಮಿ ಕೂಗಿದರು. ತಕ್ಷಣವೇ ಆಡಳಿತ ಮತ್ತು ವಿರೋಧ ಪಕ್ಷದ ಎಲ್ಲ ಸದಸ್ಯರು, ‘ನೀವು ಗೂಂಡಾ, ನಿಮ್ಮದು ಗೂಂಡಾಗಿರಿ’ ಎಂದು ಪರಸ್ಪರ ಬೈದುಕೊಂಡರು.
ಒಂದು ಹಂತದಲ್ಲಿ ನಾರಾಯಣಸ್ವಾಮಿ ಅವರು, ‘ನೀವು ನಾಯಿ ಎಂದು ಕರೆದದ್ದು ಪ್ರಿಯಾಂಕ್ ಖರ್ಗೆ ಅವರನ್ನೇ ಎಂದು ಪತ್ರಕರ್ತರು ಪ್ರಶ್ನಿಸಿದ್ದರು. ಅದಕ್ಕೆ ನಾನು ಹೌದು ಎಂದು ಉತ್ತರಿಸಿದ್ದೆ’ ಎಂದರು. ಗದ್ದಲದ ಮಧ್ಯೆಯೇ ಸಿ.ಟಿ.ರವಿ ಅವರು, ‘ನಾವು ಬೀದಿನಾಯಿಗಳಂತೆ ಹೀಗೆ ಬೊಗಳುತ್ತಿದ್ದರೆ, ನಾಯಿಗಳೇ ಅನ್ನಬೇಕಾಗುತ್ತದೆ’ ಎಂದರು.
ಸಭಾಧ್ಯಕ್ಷರ ಪೀಠದಲ್ಲಿದ್ದ ಬೋಜೇಗೌಡ ಅವರು, ‘ಸದನಕ್ಕೆ ಗೌರವವಿದೆ. ಅಂತಹ ಪದಗಳನ್ನು ಬಳಸಬಾರದು’ ಎಂದು ತಾಕೀತು ಮಾಡಿದರು. ‘ವಿರೋಧ ಪಕ್ಷದ ನಾಯಕರು ನೀಡಿರುವ ದೂರು ಹಕ್ಕುಚ್ಯುತಿ ಸಮಿತಿ ಮುಂದಿದೆ. ಅದರ ವರದಿ ಬಂದ ನಂತರ ಚರ್ಚೆ ನಡೆಸೋಣ’ ಎಂದು ಗದ್ದಲಕ್ಕೆ ತಡೆ ಹಾಕಿದರು. ಸಚಿವರ ಹೆಸರು ಹೇಳಿ ಗೂಂಡಾ ಎಂದ ಮಾತನ್ನು ಕಡತದಿಂದ ತೆಗೆದುಹಾಕುವಂತೆ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.