ADVERTISEMENT

ಹೊಸ ವರ್ಷದ ಸಂಭ್ರಮಾಚರಣೆ: ಡಿಸೆಂಬರ್ 31ರಂದು ₹193 ಕೋಟಿ ಮೌಲ್ಯದ ಮದ್ಯ ಮಾರಾಟ

​ಪ್ರಜಾವಾಣಿ ವಾರ್ತೆ
Published 2 ಜನವರಿ 2024, 0:28 IST
Last Updated 2 ಜನವರಿ 2024, 0:28 IST
   

ಬೆಂಗಳೂರು: ರಾಜ್ಯದಲ್ಲಿ ಹೊಸ ವರ್ಷದ ಸಂಭ್ರಮಾಚರಣೆಯ ದಿನವಾದ ಭಾನುವಾರ (ಡಿ. 31) ಒಂದೇ ದಿನ ₹ 193 ಕೋಟಿ ಮೌಲ್ಯದ ಮದ್ಯ ಮಾರಾಟವಾಗಿದೆ.

ಬೆಲೆ ಏರಿಕೆ ಮಧ್ಯೆಯೂ ಪಾನಪ್ರಿಯರು ದೊಡ್ಡ ಸಂಖ್ಯೆಯಲ್ಲಿ ಮದ್ಯ ಖರೀದಿಸಿದ್ದಾರೆ. ದೇಶೀಯವಾಗಿ ತಯಾರಾದ (ಐಎಂಎಲ್‌) ಒಟ್ಟು 26.61 ಲಕ್ಷ ಲೀಟರ್‌ ಮದ್ಯ (3.07 ಲಕ್ಷ ಬಾಕ್ಸ್), 15.21 ಲಕ್ಷ ಲೀಟರ್‌ ಬಿಯರ್‌ (1.95 ಲಕ್ಷ ಬಾಕ್ಸ್) ಮಾರಾಟವಾಗಿದೆ ಎಂದು ಅಬಕಾರಿ ಇಲಾಖೆ ಮಾಹಿತಿ ನೀಡಿದೆ.

2023ರಲ್ಲಿ ಮದ್ಯದ ಬೆಲೆ ಹೆಚ್ಚಾದರೂ, ಮಾರಾಟದಲ್ಲಿ ಗಣನೀಯವಾಗಿ ಏರಿಕೆಯಾಗಿದೆ. 2022ಕ್ಕೆ ಹೋಲಿಸಿದರೆ 2023ರಲ್ಲಿ 86.04 ಲಕ್ಷ ಲೀಟರ್‌ ಮದ್ಯ, 39.56 ಲಕ್ಷ ಲೀಟರ್‌ ಬಿಯರ್‌ ಹೆಚ್ಚು ಮಾರಾಟವಾಗಿದೆ. ಒಟ್ಟು ₹3,496 ಕೋಟಿ ಹೆಚ್ಚುವರಿ ಮಾರಾಟ ನಡೆದಿದೆ. 2022ರಲ್ಲಿ ₹26,982 ಕೋಟಿ ಮೌಲ್ಯದ ಮಾರಾಟ ನಡೆದಿತ್ತು. 2023 ₹30,620 ಕೋಟಿಗೆ ತಲುಪಿದೆ. 

ADVERTISEMENT

ರಾಜ್ಯದಲ್ಲಿ 12,614 ಮದ್ಯ ಮಾರಾಟ ಮಳಿಗೆಗಳಿವೆ. ಸರ್ಕಾರ ಪ್ರಸಕ್ತ ವರ್ಷ ಅಬಕಾರಿ ಇಲಾಖೆಗೆ ₹ 36 ಸಾವಿರ ಕೋಟಿ ಆದಾಯದ ಗುರಿಯನ್ನು ನಿಗದಿಪಡಿಸಿದೆ. 

ಕಡಿಮೆ ಬೆಲೆಯ ಮದ್ಯಕ್ಕೆ ಒಲವು: ‘ಮದ್ಯದ ಬೆಲೆ ಹೆಚ್ಚಳದ ಕಾರಣ ಬಹುತೇಕ ಜನರು ದುಬಾರಿ ಬೆಲೆಯ ಮದ್ಯಗಳಿಗಿಂತ ಕಡಿಮೆ ದರದ ಮದ್ಯಗಳನ್ನೇ ಹೆಚ್ಚಾಗಿ ಖರೀದಿಸಿದ್ದಾರೆ. ಬೆಲೆಯ ಕಾರಣಕ್ಕಾಗಿ ಚಳಿಯ ನಡುವೆಯೂ ಹೆಚ್ಚಿನ ಜನರು ಬಿಯರ್‌ಗಳತ್ತ ಒಲವು ತೋರಿದ್ದಾರೆ’ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.