ADVERTISEMENT

ಬೊಜ್ಜು ಕರಗಿಸಲು ಪೊಲೀಸರಿಗೆ ಪಾಠ: ರಾಜ್ಯದ ಆರು ಕಡೆ ಚಿಕಿತ್ಸೆ, ತರಬೇತಿ

ಶಿವಪ್ರಸಾದ್ ರೈ
Published 26 ಫೆಬ್ರುವರಿ 2026, 23:30 IST
Last Updated 26 ಫೆಬ್ರುವರಿ 2026, 23:30 IST
ಮೈಸೂರಿನ ಸರ್ಕಾರಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವೈದ್ಯಕೀಯ ಕಾಲೇಜಿನಲ್ಲಿ ಪೊಲೀಸರಿಗೆ ಧ್ಯಾನದ ಪಾಠ. 
ಮೈಸೂರಿನ ಸರ್ಕಾರಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವೈದ್ಯಕೀಯ ಕಾಲೇಜಿನಲ್ಲಿ ಪೊಲೀಸರಿಗೆ ಧ್ಯಾನದ ಪಾಠ.    

ಮೈಸೂರು: ಕೇಂದ್ರ ಸಶಸ್ತ್ರ ಪಡೆ ಹಾಗೂ ಪೊಲೀಸ್ ಸಿಬ್ಬಂದಿಯ ಬೊಜ್ಜಿನ ಸಮಸ್ಯೆ ನೀಗಿಸಲು ಕೇಂದ್ರ ಸರ್ಕಾರವು ಪ್ರಕೃತಿ ಚಿಕಿತ್ಸೆಯ ಮೊರೆ ಹೋಗಿದೆ.

ಕೇಂದ್ರದ ಆಯುಷ್‌ ಸಚಿವಾಲಯದಡಿ ಕಾರ್ಯನಿರ್ವಹಿಸುವ, ನವದೆಹಲಿಯ ಕೇಂದ್ರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಸಂಶೋಧನಾ ಪರಿಷತ್ತು ಇದಕ್ಕಾಗಿ ವಿನೂತನ ಯೋಜನೆಯನ್ನು ರೂಪಿಸಿದೆ. ಪ್ರಕೃತಿ ಚಿಕಿತ್ಸೆ ಆಸ್ಪತ್ರೆಗಳಲ್ಲಿ ಸಿಬ್ಬಂದಿಗೆ ತರಬೇತಿ ನೀಡುವುದರ ಜೊತೆಗೆ ಬೊಜ್ಜು ನಿವಾರಣೆಯ ಕುರಿತ ಸಂಶೋಧನೆಯನ್ನೂ ನಡೆಸುತ್ತಿದೆ.

ಸಂಶೋಧನೆಗಾಗಿ ದೇಶದ 20 ಪ್ರಕೃತಿ ಚಿಕಿತ್ಸೆ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜುಗಳನ್ನು ಆಯ್ಕೆ ಮಾಡಿದ್ದು, ₹1 ಲಕ್ಷ ಅನುದಾನ ನೀಡಲಾಗಿದೆ. ಮೈಸೂರಿನ ಸರ್ಕಾರಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವೈದ್ಯಕೀಯ ಕಾಲೇಜು, ಉಜಿರೆಯ ಎಸ್‌ಡಿಎಂ ಪ್ರಕೃತಿ ಚಿಕಿತ್ಸಾ ಕಾಲೇಜು, ಮೂಡಬಿದಿರೆಯ ಆಳ್ವಾಸ್‌ ಪ್ರಕೃತಿ ಚಿಕಿತ್ಸಾ ಕಾಲೇಜು, ದಾವಣಗೆರೆಯ ತಪೋವನ ಪ್ರಕೃತಿ ಚಿಕಿತ್ಸಾ ಕಾಲೇಜು ಮತ್ತು ಎಂಆರ್‌ಆರ್‌ ಪ್ರಕೃತಿ ಚಿಕಿತ್ಸಾ ಕಾಲೇಜು ಹಾಗೂ ಮಂಗಳೂರಿನ ಯೆನೊಪೋಯಾ ಕಾಲೇಜುಗಳು ಸಂಶೋಧನೆಗಾಗಿ ಆಯ್ಕೆಯಾಗಿರುವ ರಾಜ್ಯದ ಕಾಲೇಜುಗಳು.

ADVERTISEMENT

ಇಳಿದ ತೂಕ:

ಮೈಸೂರಿನ ಸರ್ಕಾರಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವೈದ್ಯಕೀಯ ಕಾಲೇಜಿನಲ್ಲಿ 30 ಪೊಲೀಸರಿಗೆ ಇದೇ ತಿಂಗಳು ಹಮ್ಮಿಕೊಂಡಿದ್ದ 18 ದಿನದ ಶಿಬಿರವು ಮುಕ್ತಾಯವಾಗಿದ್ದು, ಕೆಲವರ ದೇಹ ತೂಕ 5ರಿಂದ 6 ಕೆ.ಜಿಯಷ್ಟು ಇಳಿದಿದೆ.

ಮೈಸೂರಿನ ಸರ್ಕಾರಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವೈದ್ಯಕೀಯ ಕಾಲೇಜಿನಲ್ಲಿ ಪೊಲೀಸರ ಯೋಗಾಭ್ಯಾಸ

ವೈದ್ಯರು ಆರಂಭದಲ್ಲಿ ಪೊಲೀಸ್‌ ಅಧಿಕಾರಿ, ಸಿಬ್ಬಂದಿಯನ್ನು ಭೇಟಿಯಾಗಿ ಅವರೊಂದಿಗೆ ಆಪ್ತ ಸಮಾಲೋಚನೆ ನಡೆಸಿದ್ದು, ಚಿಕಿತ್ಸೆಯ ಉದ್ದೇಶ ಮತ್ತು ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ನಂತರ ತಪಾಸಣೆ ನಡೆಸಿ ಚಿಕಿತ್ಸೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ.

ಮುಂಜಾನೆ ಒಂದು ಗಂಟೆ ಯೋಗಾಭ್ಯಾಸದಲ್ಲಿ ಸೂರ್ಯ ನಮಸ್ಕಾರ, ಆಳವಾದ ವಿಶ್ರಾಂತಿ ತಂತ್ರಗಳ ಅಭ್ಯಾಸದ ಜೊತೆಗೆ, ಪ್ರಕೃತಿ ಚಿಕಿತ್ಸೆಯ ಭಾಗವಾಗಿ ಜಲ ಚಿಕಿತ್ಸೆ, ಅಂಡರ್‌ ವಾಟರ್‌ ಮಸಾಜ್‌, ಎನಿಮಾ, ಮಡ್‌ ಪ್ಯಾಕ್‌, ಡಯಟ್‌ ಥೆರಪಿ ಮಾಡಿಸುತ್ತಿದ್ದಾರೆ. 

ಬೊಜ್ಜು ಕರಗಲು ಆಹಾರ ಪದ್ಧತಿಗಳನ್ನು ರೂಪಿಸಿ, ಹಸಿ ತರಕಾರಿ ಸೇವನೆಯಂತಹ ಪಥ್ಯ ಮಾಡಿಸಲಾಗುತ್ತಿದೆ. ಡೆಕ್ಸಾ ಫ್ಯಾಟ್‌ ಸ್ಕ್ಯಾನ್‌ ಮಾಡಿ ಪೊಲೀಸರಲ್ಲಿ ಆಗುವ ಬದಲಾವಣೆಯನ್ನು ದಾಖಲು ಮಾಡಿಕೊಳ್ಳಲಾಗುತ್ತಿದೆ. 

ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವೈದ್ಯಕೀಯ ಕಾಲೇಜಿನಲ್ಲಿ ಪೊಲೀಸರ ಯೋಗಾಭ್ಯಾಸ

‘ಶಿಬಿರದಲ್ಲಿ ಭಾಗವಹಿಸಿದ ಬಳಿಕ ಉಲ್ಲಾಸ ಹೆಚ್ಚಿದೆ. ಆಯಾಸ ಕಡಿಮೆಯಾಗಿದೆ. ದೇಹ ಹಗುರವಾದ ಭಾವನೆ ಮೂಡಿದೆ. ಕೆಲಸದ ಸಮಯದಲ್ಲಿ ಹೆಚ್ಚು ಉತ್ಸಾಹದಿಂದ ಇರಲು ಸಾಧ್ಯವಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಕೊಬ್ಬಿನ ಪ್ರಮಾಣ ಹೆಚ್ಚಿರುವ 30 ಪೊಲೀಸ್‌ ಸಿಬ್ಬಂದಿಗೆ 10 ದಿನ ತರಬೇತಿ ನೀಡಲಾಗುತ್ತಿದೆ. ಹೆಚ್ಚಿನ ಪೊಲೀಸರ ತೂಕದಲ್ಲಿ ಇಳಿಮುಖವಾಗಿದೆ. ತರಬೇತಿ ಮುಗಿದ ಬಳಿಕ ಪರಿಣಾಮವನ್ನು ಗಮನಿಸಿ ಅವಶ್ಯಕತೆ ಇರುವವರುಗೆ ತರಬೇತಿ ಮುಂದುವರಿಸುವ ಬಗ್ಗೆ ಚಿಂತಿಸುತ್ತಿದ್ದೇವೆ
ಕೆ.ಎಸ್‌.ಸುಂದರ್‌ರಾಜ್‌, ಮೈಸೂರು ನಗರ ಡಿಸಿಪಿ
ಕೆ.ಎಸ್‌.ಸುಂದರ್‌ರಾಜ್‌
‘ಅಡ್ಡ ಪರಿಣಾಮ ಇರದು’ 
‘ಔಷಧಿಗಳನ್ನು ನೀಡದೆ ಆಹಾರ ಪದ್ಧತಿಯಲ್ಲಿ ಬದಲಾವಣೆ ತಂದಿದ್ದೇವೆ. ಪ್ರಕೃತಿ ಚಿಕಿತ್ಸೆಯಲ್ಲಿ ಅಡ್ಡ ಪರಿಣಾಮ ಇರುವುದಿಲ್ಲ. ಶಿಬಿರದಲ್ಲಿ ಭಾಗವಹಿಸಿದವರು 5–6 ಕೆ.ಜಿ ತೂಕ ಇಳಿಸಿಕೊಂಡಿದ್ದಾರೆ’ ಎಂದು ಮೈಸೂರಿನ ಸರ್ಕಾರಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವೈದ್ಯಕೀಯ ಕಾಲೇಜಿನ ಡಾ.ಎಸ್‌. ಸಂದೀಪ್‌ ‘ಪ್ರಜಾವಾಣಿ’ಗೆ ತಿಳಿಸಿದರು. ‘ಪೊಲೀಸರಿಗಿರುವ ಕೆಲಸದ ಒತ್ತಡ ಆಹಾರ ಪದ್ಧತಿಯಲ್ಲಿ ಅಶಿಸ್ತು ಆಯಾಸ ಸ್ಥೂಲಕಾಯ ಸಮಸ್ಯೆ ಹೆಚ್ಚಲು ಕಾರಣ. ಅದರಿಂದ ಮಧುಮೇಹ ಅಧಿಕ ರಕ್ತದೊತ್ತಡ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಆಸಕ್ತಿಯುಳ್ಳ ಪೊಲೀಸರು ಸಂಪರ್ಕಿಸಿದರೆ ಚಿಕಿತ್ಸೆ ನೀಡಲಾಗುವುದು’ ಎಂದರು.
ಡಾ.ಸಂದೀಪ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.