
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ
ಚಿತ್ರ ಕೃಪೆ: ಪ್ರಜಾವಾಣಿ, ಎಕ್ಸ್
ಬೆಂಗಳೂರು: 'ಕರ್ನಾಟಕದ ಜನರಿಗೆ ನಾವು ಕೊಟ್ಟ ಮಾತು ಘೋಷವಾಕ್ಯವಷ್ಟೇ ಅಲ್ಲ. ಅದೇ ನಮ್ಮ ಪ್ರಪಂಚ'
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ, ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷಿ 'ಶಕ್ತಿ ಯೋಜನೆ'ಯು 600 ಕೋಟಿ ಟ್ರಿಪ್‌ಗಳನ್ನು ಪೂರೈಸಿದೆ ಎಂಬುದಾಗಿ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ರೀತಿ ಬರೆದುಕೊಂಡಿದ್ದಾರೆ.
ಆ ಮೂಲಕ ಅವರು, ವಿಧಾನಸಭಾ ಚುನಾವಣೆಗೂ ಮುನ್ನ ಜನರಿಗೆ 'ಕೊಟ್ಟ ಮಾತನ್ನು' ಸ್ಮರಿಸಿಕೊಂಡಿದ್ದಾರೆ.
'ಶಕ್ತಿ ಯೋಜನೆಯು ರಾಜ್ಯದ ಮಹಿಳೆಯರಿಗೆ 600 ಕೋಟಿಗೂ ಅಧಿಕ ಉಚಿತ ಟ್ರಿಪ್‌ಗಳನ್ನು ನೀಡಿದೆ ಎಂಬುದನ್ನು ಘೋಷಿಸಲು ಹೆಮ್ಮೆಯಾಗುತ್ತಿದೆ. ಸರ್ಕಾರ ರಚನೆಯಾದ ಮೊದಲ ತಿಂಗಳಿನಿಂದಲೇ, ಗ್ಯಾರಂಟಿ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದ್ದೇವೆ. ಮಾತಿನಲ್ಲಿ ಮಾತ್ರವಲ್ಲ; ವಾಸ್ತವದಲ್ಲಿ ಜಾರಿಗೊಳಿಸಿದ್ದೇವೆ' ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಅವರು, ಕಾಂಗ್ರೆಸ್ ಪಕ್ಷವು ಚುನಾವಣೆಗೂ ಮೊದಲು ಘೋಷಿಸಿದ್ದ ಐದು ಗ್ಯಾರಂಟಿ ಯೋಜನೆಗಳ ಕುರಿತಾಗಿಯೂ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಶಕ್ತಿ ಯೋಜನೆ: ದುಡಿಯುವ ಮಹಿಳೆಯರ ಘನತೆ ಹಾಗೂ ಚಲನಶೀಲತೆಯನ್ನು ಪುನಃಸ್ಥಾಪಿಸುವ ನಿಟ್ಟಿನಲ್ಲಿ 600 ಕೋಟಿಗೂ ಅಧಿಕ ಉಚಿತ ಪ್ರಯಾಣ
ಗೃಹ ಲಕ್ಷ್ಮಿ: ಮಹಿಳೆಯರ ನೇತೃತ್ವದ 1.24 ಕೋಟಿ ಕುಟುಂಬಗಳ ಸಬಲೀಕರಣ
ಯುವ ನಿಧಿ: 3 ಲಕ್ಷಕ್ಕೂ ಹೆಚ್ಚು ಯುವಕರಿಗೆ ಭದ್ರತೆ ಹಾಗೂ ಭರವಸೆ
ಅನ್ನ ಭಾಗ್ಯ 2.0: 4.08 ಕೋಟಿ ನಾಗರಿಕರಿಗೆ ಆಹಾರ ಭದ್ರತೆ
ಗೃಹ ಜ್ಯೋತಿ: 1.64 ಕೋಟಿ ಕುಟುಂಬಗಳಿಗೆ ಉಚಿತ ವಿದ್ಯುತ್ ನೀಡಲಾಗಿದೆ ಎಂಬುದನ್ನು ತಿಳಿಸಿದ್ದಾರೆ.
'ನಾನು ಮುಖ್ಯಮಂತ್ರಿಯಾಗಿದ್ದ (2013–2018) ಮೊದಲ ಅವಧಿಯಲ್ಲಿ, ಪಕ್ಷ ನೀಡಿದ್ದ 165 ಭರವಸೆಗಳ ಪೈಕಿ 157 ಅನ್ನು ಅಂದರೆ ಶೇ 95ಕ್ಕೂ ಹೆಚ್ಚಿನವುಗಳನ್ನು ಈಡೇರಿಸಲಾಗಿತ್ತು. ಈ ಅವಧಿಯಲ್ಲಿ, 593 ಭರವಸೆಗಳ ಪೈಕಿ, ಈಗಾಗಲೇ 243ಕ್ಕೂ ಹೆಚ್ಚಿನವನ್ನು ಪೂರೈಸಿದ್ದೇವೆ. ಬಾಕಿ ಇರುವವನ್ನೂ ಬದ್ಧತೆ, ವಿಶ್ವಾಸಾರ್ಹತೆ ಹಾಗೂ ಕಾಳಜಿಯಿಂದ ಈಡೇರಿಸಲಾಗುವುದು' ಎಂದು ಸ್ಪಷ್ಟಪಡಿಸಿದ್ದಾರೆ.
ಮುಂದುವರಿದು, 'ರಾಜ್ಯದ ಜನರು ನೀಡಿರುವ ಜನಾದೇಶವು ಅತ್ಯಲ್ಪವಾದುದಲ್ಲ. ಬದಲಾಗಿ, ಐದು ವರ್ಷಗಳವರೆಗೂ ಇರುವ ಜವಾಬ್ದಾರಿಯಾಗಿದೆ. ನನ್ನನ್ನೂ ಒಳಗೊಂಡಂತೆ ಕಾಂಗ್ರೆಸ್ ಪಕ್ಷವು, ಜನರಿಗಾಗಿ ಸಹಾನುಭೂತಿಯಿಂದ, ಸ್ಥಿರವಾಗಿ ಮತ್ತು ಧೈರ್ಯದಿಂದ ನಡೆದುಕೊಳ್ಳಲಿದೆ' ಎಂದು ಹೇಳಿದ್ದಾರೆ.
ಡಿಕೆಶಿಗೆ ತಿರುಗೇಟು?
ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಬದಲಾವಣೆ ಕುರಿತ ಚರ್ಚೆ ಕಾವೇರಿದೆ. ಸರ್ಕಾರ ರಚನೆ ಸಂದರ್ಭದಲ್ಲಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಡುವೆ ಅಧಿಕಾರ ಹಂಚಿಕೆ ಮಾತುಕತೆ ನಡೆದಿದೆ. ಅದರಂತೆ, ಮುಖ್ಯಮಂತ್ರಿ ಬದಲಾವಣೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಸಿಎಂ ಹಾಗೂ ಡಿಸಿಎಂ ಬೆಂಬಲಿಗರು, ಇಬ್ಬರನ್ನೂ ಬಲವಾಗಿ ಸಮರ್ಥಿಸಿಕೊಳ್ಳುತ್ತಿದ್ದಾರೆ. ಏತನ್ಮಧ್ಯೆ, ಇಂದು (ಗುರುವಾರ) ಬೆಳಿಗ್ಗೆ ಡಿ.ಕೆ. ಶಿವಕುಮಾರ್ ಮಾಡಿರುವ ಟ್ವೀಟ್‌ವೊಂದು ಸಂಚಲನ ಮೂಡಿಸಿದೆ.
'ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ!' ಎಂಬುದಾಗಿ ಡಿಸಿಎಂ ಬರೆದುಕೊಂಡಿದ್ದಾರೆ.
ಈ ಟ್ವೀಟ್ ಕುರಿತು ರಾಜಕೀಯ ಕಣದಲ್ಲಿ ತರಹೇವಾರಿ ಚರ್ಚೆಯಾಗುತ್ತಿದೆ. 'ಸರ್ಕಾರ ರಚನೆ ವೇಳೆ ಅಧಿಕಾರ ಹಂಚಿಕೆ ಮಾತುಕತೆಯಾಗಿದೆ. ಸಿಎಂ ಸ್ಥಾನ ಬಿಟ್ಟುಕೊಡುವ ಕುರಿತು ತೀರ್ಮಾನವಾಗಿರಬಹುದು. ಅದ್ನನೇ ಡಿಸಿಎಂ ನೆನಪಿಸಿದ್ದಾರೆ' ಎಂದು ಪ್ರತಿಪಾದಿಸಲಾಗುತ್ತಿದೆ.
ಅದಕ್ಕೆ ಪ್ರತಿಯಾಗಿಯೇ, ಇದೀಗ ಸಿಎಂ ಟ್ವೀಟ್ ಮಾಡಿದ್ದಾರೆ. ಡಿಕೆಶಿಗೆ ತಿರುಗೇಟು ನೀಡಿದ್ದಾರೆ ಎಂದೂ ವಿಶ್ಲೇಷಿಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.