ADVERTISEMENT

ಶಾಸಕ ಯತ್ನಾಳ್ ಆರೋಪಗಳಿಗೆ ಈಶ್ವರಪ್ಪ ಅಧಿಕೃತ ಮುದ್ರೆ: ಕಾಂಗ್ರೆಸ್

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2021, 12:43 IST
Last Updated 1 ಏಪ್ರಿಲ್ 2021, 12:43 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಮುಖ್ಯಮಂತ್ರಿ ಯಡಿಯೂರಪ್ಪನವರು ನನ್ನ ಇಲಾಖೆಯಲ್ಲಿ ಅನಗತ್ಯವಾಗಿ ಹಸ್ತಕ್ಷೇಪ ಮಾಡುತ್ತಿದ್ದಾರೆ’ ಎಂದು ಆಕ್ಷೇಪಿಸಿ ಸಚಿವ ಈಶ್ವರಪ್ಪ ಅವರು ರಾಜ್ಯಪಾಲ ವಜುಭಾಯಿ ವಾಲಾ ಮತ್ತು ಬಿಜೆಪಿ ವರಿಷ್ಠರಿಗೆ ಪತ್ರ ಬರೆದಿರುವುದು ಕಾಂಗ್ರೆಸ್‌– ಬಿಜೆಪಿ ನಡುವೆ ರಾಜಕೀಯ ಕೆಸರೆರೆಚಾಟಕ್ಕೆ ಕಾರಣವಾಗಿದೆ.

ಬಿಜೆಪಿ ವಿರುದ್ಧ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ‘ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಮಾಡುತ್ತಿದ್ದ ಆರೋಪಗಳಿಗೆ ಈಶ್ವರಪ್ಪ ಅಧಿಕೃತ ಮುದ್ರೆ ಒತ್ತಿದ್ದಾರೆ. ಈ ಸರ್ಕಾರದಲ್ಲಿ ಭ್ರಷ್ಟಾಚಾರ, ಸ್ವಜನಪಕ್ಷಪಾತ ದುರಾಡಳಿತದಲ್ಲಿ ರಾಜ್ಯ ಅನಾಥವಾಗಿದೆ’ ಎಂದು ಆರೋಪಿಸಿದೆ.

‘ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ, ಸ್ವಜನಪಕ್ಷಪಾತ ದುರಾಡಳಿತದಲ್ಲಿ ರಾಜ್ಯ ಅನಾಥವಾಗಿದೆ. ಬಿಎಸ್‌ವೈ ಮುಕ್ತ ಬಿಜೆಪಿ ಪ್ರಯತ್ನದ ಬಣ, ಸಹಿ ಸಂಗ್ರಹಕ್ಕೆ ಪೆನ್ನು, ಪೇಪರ್ ಹಿಡಿದ ಮತ್ತೊಂದು ಬಣದ ಬಿಜೆಪಿ vs ಬಿಜೆಪಿ ಕಿತ್ತಾಟ! ಇದನ್ನು ಸಾಕು ಮಾಡಿ. ಬಿಜೆಪಿಯವರೇ ಸರ್ಕಾರ ವಿಸರ್ಜಿಸಿ’ ಎಂದು ಕಾಂಗ್ರೆಸ್‌ ಆಗ್ರಹಿಸಿದೆ.

‘ಕೊರೊನಾ ಸೋಂಕಿನಲ್ಲಿ ಭ್ರಷ್ಟಾಚಾರ, ಬಿಡಿಗಾಸಿನ ನೆರೆ ಪರಿಹಾರದಲ್ಲಿ ಭ್ರಷ್ಟಾಚಾರ, ವರ್ಗಾವಣೆಯಲ್ಲಿ ಭ್ರಷ್ಟಾಚಾರ, ಅನುದಾನ ಬಿಡುಗಡೆಯಲ್ಲಿ ಭ್ರಷ್ಟಾಚಾರ, ಆಪರೇಷನ್ ಕಮಲದ ಭ್ರಷ್ಟಾಚಾರ ನಡೆದಿದೆ. ಬಿಜೆಪಿ ಸರ್ಕಾರದಲ್ಲಿ ಲೂಟಿಯೇ ಯೋಜನೆಯಾಗಿದೆ. ಹೊರತು ಜನಹಿತಕ್ಕಾಗಿ ಒಂದೂ ಯೋಜನೆ ಇಲ್ಲ. ಬಿಜೆಪಿಯವರ ಕಿತ್ತಾಟದಲ್ಲಿ ರಹಸ್ಯ ಹೊರಬೀಳುತ್ತಿವೆ’ ಎಂದು ಕಿಡಿಕಾರಿದೆ.

‘ಬಿಜೆಪಿಯವರೇ ನಿಮ್ಮ ಮನೆಯ ಮಾಳಿಗೆಯೇ ಸೋರುತ್ತಿದೆ. ಕುಸಿದು ಬೀಳುವ ಹಂತದಲ್ಲಿದೆ ಪಕ್ಕದ ಮನೆಯ ಮಾಳಿಗೆಯನ್ನೇಕೆ ಹಿಣುಕುವಿರಿ!?. ಸುಧಾಕರ್ vs ರೇಣುಕಾಚಾರ್ಯ, ಆರ್.ಅಶೋಕ್ vs ಅಶ್ವತ್ಥ ನಾರಾಯಣ, ಯಡಿಯೂರಪ್ಪ vs ಈಶ್ವರಪ್ಪ, ತಲೆಮರೆಸಿಕೊಂಡ ಬೆನ್ನೆಲುಬಿಲ್ಲದ ನಳಿನ್ ಕುಮಾರ್ ಕಟೀಲ್ ಅವರಿಗೆ ಮೊದಲು ಬಿಜೆಪಿ vs ಬಿಜೆಪಿ ಕಿತ್ತಾಟ ನಿಭಾಯಿಸಲು ಹೇಳಿ’ ಎಂದು ಕಾಂಗ್ರೆಸ್‌ ವ್ಯಂಗ್ಯವಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.