ADVERTISEMENT

ಔತಣ ‘ರಾಜಕೀಯ’ಕ್ಕೆ ಹೈಕಮಾಂಡ್‌ ಬ್ರೇಕ್: ಸಚಿವ ಪರಮೇಶ್ವರ ಆಯೋಜಿಸಿದ್ದ ಸಭೆ ರದ್ದು

​ಪ್ರಜಾವಾಣಿ ವಾರ್ತೆ
Published 7 ಜನವರಿ 2025, 22:49 IST
Last Updated 7 ಜನವರಿ 2025, 22:49 IST
   

ಬೆಂಗಳೂರು: ಕಾಂಗ್ರೆಸ್‌ನಲ್ಲಿ ‘ಅಧಿಕಾರ ಹಂಚಿಕೆ’ ವಿಚಾರವಾಗಿ ಆರಂಭಗೊಂಡಿದ್ದ ‘ಔತಣ ರಾಜಕೀಯ’ಕ್ಕೆ ಪಕ್ಷದ ವರಿಷ್ಠರು ಬ್ರೇಕ್‌ ಹಾಕಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವರಿಷ್ಠರಿಗೆ ನೀಡಿದ ದೂರಿನ ಅನ್ವಯ ಗೃಹ ಸಚಿವ ಜಿ.ಪರಮೇಶ್ವರ ಅವರು ಬುಧವಾರ ಹಮ್ಮಿಕೊಂಡಿದ್ದ ಔತಣ ಸಭೆ ರದ್ದಾಗಿದೆ.

ಕಳೆದ ವಾರ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರ ಮನೆಯಲ್ಲಿ ನಡೆದಿದ್ದ ಔತಣ ಕೂಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಆಪ್ತ ಬಳಗದ ಸಚಿವರಾದ ಎಚ್‌.ಸಿ.ಮಹದೇವಪ್ಪ, ಕೆ.ಎನ್‌.ರಾಜಣ್ಣ, ಜಿ.ಪರಮೇಶ್ವರ ಭಾಗವಹಿಸಿದ್ದರು.  ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ವಿದೇಶ ಪ್ರವಾಸದಲ್ಲಿದ್ದಾಗ ನಡೆದ ಈ ಕೂಟ–‌ ಸಭೆ ಪಕ್ಷದ ವಲಯದಲ್ಲಿ ನಾನಾ ಚರ್ಚೆಯನ್ನು ಹುಟ್ಟು ಹಾಕಿತ್ತು. 

ಆ ಸಭೆಯ ಬಳಿಕ ಜಿ.ಪರಮೇಶ್ವರ ಅವರು ಕುಟುಂಬ ಸಮೇತ ಮಲೇಷ್ಯಾಕ್ಕೆ ತೆರಳಿದ್ದರು. ಅಲ್ಲಿಂದ ಸೋಮವಾರ ಹಿಂದಿರುಗಿದ ಅವರು ದಲಿತ ಶಾಸಕರು ಮತ್ತು ಸಚಿವರಿಗೆ ಭೋಜನ ಕೂಟ  ಏರ್ಪಡಿಸುವ ವಿಚಾರವನ್ನು ಮಂಗಳವಾರ ಪ್ರಕಟಿಸಿದರು. ಇದಕ್ಕೆ ದೆಹಲಿಯಲ್ಲಿ ಡಿ.ಕೆ.ಶಿವಕುಮಾರ ಆಕ್ಷೇಪ ವ್ಯಕ್ತಪಡಿಸಿದರು. 

ADVERTISEMENT
ಸಿದ್ದರಾಮಯ್ಯ ಪರ ಒತ್ತಡ
ಬಜೆಟ್‌ ಮಂಡನೆ ಬಳಿಕ ಮುಖ್ಯಮಂತ್ರಿ ಸ್ಥಾನ ಬದಲಾವಣೆಯೂ ಸೇರಿದಂತೆ ‘ಅಧಿಕಾರ ಹಂಚಿಕೆ’ ಆಗಬೇಕೆಂಬ ಕೂಗು ಜೋರಾಗುವ ಲಕ್ಷಣಗಳು ಕಾಣಿಸಿವೆ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಯಾವುದೇ ಕಾರಣಕ್ಕೂ ಬದಲಾಯಿಸಬಾರದೆಂದು ಹೈಕಮಾಂಡ್‌ ಮೇಲೆ ಒತ್ತಡ ಹೇರಲು ಅವರ ಆಪ್ತ ಬಣ ಈಗಾಗಲೇ ರಂಗಕ್ಕಿಳಿದಿದೆ. ಬದಲಾಯಿಸುವುದಾದರೆ ಸಿದ್ದರಾಮಯ್ಯ ಅವರೂ ಒಪ್ಪುವ ಸರ್ವಸಮ್ಮತ ವ್ಯಕ್ತಿಗೆ ಹುದ್ದೆ ನೀಡಬೇಕೆಂದು ಪಟ್ಟು ಹಿಡಿಯಲು ಕೂಡಾ ಈ ಬಳಗ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ಸತೀಶ ಜಾರಕಿಹೊಳಿಯವರ ನಿವಾಸದಲ್ಲಿ ನಡೆದ ಸಭೆ ಅದರ ಮುಂದುವರಿದ ಭಾಗ ಎಂದೂ ಹೇಳಲಾಗಿದೆ. ಅಧಿಕಾರ ಹಂಚಿಕೆ ಸೂತ್ರದ ಅನ್ವಯ ಸಿ.ಎಂ ಸ್ಥಾನಕ್ಕೆ ಡಿ.ಕೆ. ಶಿವಕುಮಾರ್‌ ಪಟ್ಟು ಹಿಡಿಯುವುದು ಖಚಿತ. ‘ದಲಿತ ಮುಖ್ಯಮಂತ್ರಿ’ ವಿಚಾರ ಮುನ್ನೆಲೆಗೆ ಬರುವ ಸಾಧ್ಯತೆಯೂ ಇದೆ. ದಲಿತವರ್ಗಕ್ಕೆ ಅವಕಾಶ ಬಂದರೆ ಪರಮೇಶ್ವರ ಹೆಸರು ಮುಂಚೂಣಿಗೆ ಬರಬಹುದು. ಆಪ್ತ ಎಚ್‌.ಸಿ. ಮಹದೇವಪ್ಪ ಬದಲು ಪರಮೇಶ್ವರ ಪರ ಸಿದ್ದರಾಮಯ್ಯ ಹೆಚ್ಚುಒಲವು ವ್ಯಕ್ತಪಡಿಸಬಹುದು.

ಈ ನಿರೀಕ್ಷೆಯಿಂದ ಪರಮೇಶ್ವರ ಅವರ ತಮ್ಮವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಔತಣಕೂಟ ನಡೆಸಲು ತೀರ್ಮಾನಿಸಿದ್ದರು ಎಂದೂ ವಿಶ್ಲೇಷಿಸಲಾಗಿದೆ.

ಸಂಜೆ ನಿರ್ಣಯ ಬದಲು:

‘ಪಕ್ಷದ ವ್ಯಾಪ್ತಿಯಲ್ಲಿಯೇ ಅನುಮತಿ ಪಡೆದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಚಿವರು, ಶಾಸಕರಿಗೆ ಔತಣಕೂಟ ಸಭೆ ಏರ್ಪಡಿಸಿದ್ದೇನೆ’ ಎಂದು ಸುದ್ದಿಗಾರರಿಗೆ ಮಂಗಳವಾರ ಬೆಳಿಗ್ಗೆ ಮಾಹಿತಿ ನೀಡಿದ್ದ ಗೃಹ ಸಚಿವ ಜಿ. ಪರಮೇಶ್ವರ ಅವರು, ಸಂಜೆ ವೇಳೆಗೆ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರ ಸೂಚನೆ ಮೇರೆಗೆ ಈ ಸಭೆ ಮುಂದೂಡಿರುವುದಾಗಿ ಪ್ರಕಟಿಸಿದರು.

ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಬೆಳಿಗ್ಗೆ ಮಾತನಾಡಿದ್ದ ಪರಮೇಶ್ವರ, ‘ನಗರದ ರ‍್ಯಾಡಿಸನ್‌ ಬ್ಲೂ ಹೋಟೆಲ್‌ನಲ್ಲಿ ಬುಧವಾರ ಸಂಜೆ 7 ಗಂಟೆಗೆ ಸಭೆ ಕರೆದಿದ್ದೇನೆ. ಎಸ್​ಸಿ, ಎಸ್​ಟಿ ಸಚಿವರು, ಶಾಸಕರನ್ನಷ್ಟೆ ಈ ಸಭೆಗೆ ಆಹ್ವಾನಿಸಿದ್ದೇನೆ. ಬೇರೆಯವರು ಬರಬಾರದು ಎಂದಲ್ಲ. ಈ ಹಿಂದೆ ಚಿತ್ರದುರ್ಗದಲ್ಲಿ ನಡೆದಿದ್ದ ಎಸ್​​ಸಿ, ಎಸ್​ಟಿ ಸಮಾವೇಶದಲ್ಲಿ ತೆಗೆದುಕೊಂಡಿದ್ದ ನಿರ್ಣಯಗಳ ಕುರಿತು ಈ ಸಭೆಯಲ್ಲಿ ಚರ್ಚೆ ಮಾಡುತ್ತೇವೆ’ ಎಂದಿದ್ದರು.

‘ಮುಂದೆ ಎಸ್‌ಸಿ, ಎಸ್​ಟಿ ಸಮಾವೇಶ ಮಾಡಬೇಕು ಅಂದುಕೊಂಡಿದ್ದೇವೆ. ಈ ಉದ್ದೇಶದಿಂದ ಸಮುದಾಯದ ಎಲ್ಲ ಸಚಿವರು, ಶಾಸಕರನ್ನು ಕರೆದಿದ್ದೇನೆ. ನಾನು ಔತಣ ಮಾತ್ರ ಕೊಡುತ್ತಿದ್ದೇನೆ. ಔತಣಕೂಟ ಅಲ್ಲ. ಚಿತ್ರದುರ್ಗದಲ್ಲಿ ಸಮಾವೇಶ ಮಾಡಿದ ಬಳಿಕ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದೆ. ಆ ನಂತರ ಒಂದೆಡೆ ಸೇರಲು ನಮಗೆ ಆಗಿರಲಿಲ್ಲ. ಆದ್ದರಿಂದ ಸೇರುತ್ತಿದ್ದೇವೆ. ಮುಂದಿನ ಸಮಾವೇಶ ಎಲ್ಲಿ ಮಾಡಬೇಕು ಎಂದೂ ಚರ್ಚೆ ಮಾಡುತ್ತೇವೆ’ ಎಂದೂ ಹೇಳಿದ್ದರು.

ಪರಮೇಶ್ವರ ಆಯೋಜಿಸಿದ ಸಭೆಯ ಕುರಿತು ಮಂಗಳವಾರ ಮಧ್ಯಾಹ್ನ ಪ್ರತಿಕ್ರಿಯಿಸಿದ್ದ ಸಮಾಜ ಕಲ್ಯಾಣ ಸಚಿವ ಎಚ್‌.ಸಿ. ಮಹದೇವಪ್ಪ, ‘ಊಟಕ್ಕೆ ಸೇರೋಣ ಎಂದು ಪರಮೇಶ್ವರ ಹೇಳಿದ್ದಾರೆ. ಸಮುದಾಯ ಸೇರಿದ ಮೇಲೆ ನಾನೂ ಹೋಗುತ್ತೇನೆ. ಸಮುದಾಯದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುತ್ತೇವೆ’ ಎಂದಿದ್ದರು.

ಮೊದಲೇ ತೀರ್ಮಾನವಾಗಿದ್ದ ಸಭೆ?:

ಸತೀಶ ಜಾರಕಿಹೊಳಿ ಅವರ ನಿವಾಸದಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿಯೇ ಮುಖ್ಯಮಂತ್ರಿಯ ಸಲಹೆಯಂತೆ ಪರಮೇಶ್ವರ ನೇತೃತ್ವದಲ್ಲಿ ದಲಿತ ಸಚಿವರು, ಶಾಸಕರ ಸಭೆ ಆಯೋಜಿಸಲು ತೀರ್ಮಾನಿಸಲಾಗಿತ್ತು. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ‘ಅಧಿಕಾರ ಹಂಚಿಕೆ’ ಕುರಿತ ಸುಳಿ ಇನ್ನಷ್ಟು ಬಿರುಸು ಪಡೆಯುವ ಸಾಧ್ಯತೆಯಿದ್ದು, ಅದರ ಮುಂದುವರಿದ ಭಾಗವಾಗಿ ಸತೀಶ ಜಾರಕಿಹೊಳಿ ನಿವಾಸದಲ್ಲಿ ಮುಖ್ಯಮಂತ್ರಿ ಆಪ್ತ ಸಚಿವರ ಸಭೆ ನಡೆದಿತ್ತು. ಅಲ್ಲದೆ, ಪರಮೇಶ್ವರ ನೇತೃತ್ವದಲ್ಲಿ ದಲಿತ ಸಮುದಾಯದ ಸಚಿವರು, ಶಾಸಕರ ಸಭೆ ಆಯೋಜಿಸಲೂ ನಿರ್ಧರಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಔತಣಕೂಟ: ಹೈಕಮಾಂಡ್‌ಗೆ ಡಿಕೆಶಿ ದೂರು

ನವದೆಹಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಆಪ್ತ ಸಚಿವರ ಜತೆಗೆ ನಡೆಸಿದ ಔತಣಕೂಟದ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೈಕಮಾಂಡ್‌ಗೆ ದೂರು ನೀಡಿದ್ದಾರೆ. ಸಿದ್ದರಾಮಯ್ಯ ಬೆಂಬಲಿಗರು ನಡೆಸುತ್ತಿರುವ ಇಂತಹ ಚಟುವಟಿಕೆಗೆ ಕಡಿವಾಣ ಹಾಕುವಂತೆ ಆಗ್ರಹಿಸಿದ್ದಾರೆ. 

ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್‌ ಅವರನ್ನು ಸೋಮವಾರ ರಾತ್ರಿ ಭೇಟಿಯಾದ ಅವರು, ಸುಮಾರು 45 ನಿಮಿಷ ಸಮಾಲೋಚನೆ ನಡೆಸಿದರು. ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರಿಗೂ ರಾಜ್ಯದ ಬೆಳವಣಿಗೆಗಳ ಕುರಿತು ಮಾಹಿತಿ ನೀಡಿದರು.  

ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ನಡೆಸಿದ ಔತಣಕೂಟದ ಬಗ್ಗೆ ರಾಷ್ಟ್ರೀಯ ನಾಯಕರಲ್ಲಿ ಪ್ರಸ್ತಾಪಿಸಿದ ಅವರು, ‘ಸಿದ್ದರಾಮಯ್ಯ ಅವರಿಗೆ ಎಲ್ಲ ಸಹಕಾರ ನೀಡುತ್ತಿದ್ದೇನೆ. ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಂಕಷ್ಟಕ್ಕೆ ಸಿಲುಕಿದ್ದಾಗ ಬಂಡೆಯಂತೆ ಬೆನ್ನಿಗೆ ನಿಂತಿದ್ದೇನೆ. ಆದರೆ, ಸಿದ್ದರಾಮಯ್ಯ ಬೆಂಬಲಿಗರು ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ಸಿದ್ದರಾಮಯ್ಯ ಪರೋಕ್ಷವಾಗಿ ಕುಮ್ಮಕ್ಕು ನೀಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

‘ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಹಾಗೂ ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ಕುರಿತು ಸಿದ್ದರಾಮಯ್ಯ ಬೆಂಬಲಿಗರು ಹೇಳಿಕೆ ನೀಡುತ್ತಿದ್ದಾರೆ. ಇಂತಹ ಹೇಳಿಕೆ ನೀಡದಂತೆ ನಿರ್ದೇಶನ ನೀಡಬೇಕು’ ಎಂದು ಹೈಕಮಾಂಡ್‌ ನಾಯಕರಿಗೆ ಮನವಿ ಮಾಡಿದರು ಎಂದು ಮೂಲಗಳು ತಿಳಿಸಿವೆ. 

ಆಯ್ದ ನಾಯಕರ ಜೊತೆ ಮುಖ್ಯಮಂತ್ರಿ ಆಗಾಗ ಸಭೆ ನಡೆಸುವುದರಿಂದ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಯಾಗಲಿದ್ದು, ಸರ್ಕಾರದ ವರ್ಚಸ್ಸಿಗೆ ಧಕ್ಕೆಯಾಗಲಿದೆ ಎಂದು ಶಿವಕುಮಾರ್ ಅವರು ವೇಣುಗೋಪಾಲ್‌ ಗಮನಕ್ಕೆ ತಂದರು. 

ಸುದ್ದಿಗಾರರ ಜತೆಗೆ ಮಾತನಾಡಿದ ಶಿವಕುಮಾರ್‌, ‘ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ರಾಜ್ಯದ ರಾಜಕೀಯ ಬೆಳವಣಿಗೆಗಳ ಕುರಿತು ಮಾಹಿತಿ ನೀಡಿದ್ದೇನೆ’ ಎಂದರು. ಭೇಟಿಯ ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿದರು. 

‘ಡಿನ್ನರ್‌ ಪಾರ್ಟಿಯಿಂದ ಬದಲಾವಣೆ ಅಸಾಧ್ಯ’
ಮಂಡ್ಯ:‘ಡಿನ್ನರ್ ಪಾರ್ಟಿಯಲ್ಲಿ ಸಿಎಂ ಬದಲಾವಣೆ ಮಾಡಲು ಆಗಲ್ಲ. ಅದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ’ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ಹೇಳಿದರು. ಮಾಧ್ಯಮದವರೊಂದಿಗೆ ಅವರು ಮಾತನಾಡಿ, ‘ಡಿನ್ನರ್ ಪಾರ್ಟಿ ಮಾಡೋದ್ರಲ್ಲಿ ತಪ್ಪಿಲ್ಲ ಎಂದು ಸಿಎಂ ಹೇಳಿದ್ದಾರೆ. ನಾವು ಮಂತ್ರಿಗಳಿಗೆ ಊಟ ಕೊಡ್ತಿದ್ದೀವಿ ಅಷ್ಟೇ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.