ADVERTISEMENT

ಕುಮಾರಣ್ಣನ ಜೊತೆ ಇದ್ದು ಬೆನ್ನಿಗೆ ಚೂರಿ ಹಾಕಿದರು: ಎಚ್‌.ಡಿ. ರೇವಣ್ಣ ಆಕ್ರೋಶ

ಜೆಡಿಎಸ್‌ ಪ್ರಮುಖರ ಸಭೆಯಲ್ಲಿ ಕಾಂಗ್ರೆಸ್‌– ಬಿಜೆಪಿ ವಿರುದ್ಧ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2020, 10:36 IST
Last Updated 28 ನವೆಂಬರ್ 2020, 10:36 IST
ಎಚ್‌.ಡಿ. ರೇವಣ್ಣ
ಎಚ್‌.ಡಿ. ರೇವಣ್ಣ   

ಬೆಂಗಳೂರು: ‘ಕುಮಾರಸ್ವಾಮಿ ಐದು ವರ್ಷ ಮುಖ್ಯಮಂತ್ರಿ ಆಗಿರಬಹುದಾಗಿತ್ತು. ಆದರೆ, ಕೆಲವರು ಕುಮಾರಣ್ಣ ಜೊತೆ ಇದ್ದು ಬೆನ್ನಿಗೆ ಚೂರಿ ಹಾಕಿದರು’ ಎಂದು ಜೆಡಿಎಸ್‌ ಶಾಸಕ ಎಚ್‌.ಡಿ. ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.

ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ನಡೆಯುತ್ತಿರುವ ‍ಪಕ್ಷದ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ‘ಕುಮಾರಸ್ವಾಮಿಗೆ ಹದಿನಾಲ್ಕು ತಿಂಗಳು ಕೊಡಬಾರದ ಕಿರುಕುಳ ಕೊಟ್ಟರು. ಇದನ್ನು ಎಲ್ಲಿ ಬೇಕಾದರೂ ಹೇಳುತ್ತೇನೆ. ಕುತಂತ್ರ ಮಾಡಿ ಕುಮಾರಣ್ಣನನ್ನು ಅಧಿಕಾರದಿಂದ ಕೆಳಗಿಳಿಸಿದರು’ ಎಂದು ದೂರಿದರು.

‘2022ಕ್ಕೆ ಇಲ್ಲವೇ 23 ಯಾವಾಗ ಚುನಾವಣೆ ಬರುತ್ತೊ ಗೊತ್ತಿಲ್ಲ. ನಾವು ಈಗಿನಿಂದಲೇ ಸಜ್ಜಾಗಬೇಕಿದೆ. ದೇವೇಗೌಡರು ಬದುಕಿರುವಾಗಲೇ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕು’ ಎಂದು ಪಕ್ಷದ ಪದಾಧಿಕಾರಿಗಳಿಗೆ ಮನವಿ ಮಾಡಿದರು.

ADVERTISEMENT

‘ಬಿಜೆಪಿಗೆ 105 ಸ್ಥಾನ ರಾಜ್ಯದ ಜನತೆ ಕೊಟ್ಟಿಲ್ಲ. ಇದು ಕಾಂಗ್ರೆಸ್ ಪಕ್ಷದ ಕೊಡುಗೆ ಅಷ್ಟೇ. ಕೋಮುವಾದಿಗಳ ವಿರುದ್ಧ ಎಲ್ಲರೂ ಒಂದಾಗಬೇಕು ಎಂದು ಹೇಳುತ್ತಾರೆ. ನಮ್ಮನ್ನು ಬಿಜೆಪಿಯ ಬಿ ಟೀಂ ಎಂದು ಅಪವಾದ ಹೊರಿಸಿ ಕರೆಯುತ್ತಾರೆ. ಅದೇ ಕಾರಣಕ್ಕೆ‌ ಕಳೆದ ಚುನಾವಣೆಯಲ್ಲಿ ಹಲವು ಸ್ಥಾನಗಳನ್ನು ನಾವು ಕಳೆದುಕೊಳ್ಳುವಂತಾಯಿತು’ ಎಂದರು.

‘ನಾವೇನು ಕೋಮುವಾದಿಗಳ ಜೊತೆ ಹೋಗಿದ್ದೇವಾ. ಕಾಂಗ್ರೆಸ್, ಬಿಜೆಪಿಗೆ ನಮ್ಮ ಪಕ್ಷವವನ್ನು ಮುಗಿಸುವುದೇ ಗುರಿಯಾಗಿದೆ. ನಮ್ಮ ಕಾರ್ಯಕರ್ತರು ತುಂಬಾ ನೋವು ಅನುಭವಿಸುತ್ತಿದ್ದಾರೆ. ಕುಮಾರಣ್ಣ ಅವರು ಕ್ಷೇತ್ರದ ಕೆಲಸದ ಕಾರಣ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದಾರೆ. ಅದರಲ್ಲಿ ತಪ್ಪೇನಿದೆ. ಕಾಂಗ್ರೆಸ್, ಬಿಜೆಪಿ ಮಧ್ಯೆ ಹೊಂದಾಣಿಕೆ ಆಗಿದೆ’ ಎಂದು ದೂರಿದರು.

‘ಬಿಹಾರದಲ್ಲಿ ಲಾಲೂ ಪ್ರಸಾದ್ ಯಾದವ್ ವಿರುದ್ಧ ಕುತಂತ್ರ ನಡೆದಿದೆ. ಅವರು ಇನ್ನೂ ಜೈಲಿನಿಂದ ಹೊರಗಡೆ ಬರಲು ಸಾಧ್ಯವಾಗಿಲ್ಲ. ಅವರು ಹೊರಗಡೆ ಇದ್ದಿದ್ದರೆ ಈಗಿನ ಪರಿಸ್ಥಿತಿ ಬರುತ್ತಿತ್ತಾ? ತೇಜಸ್ವಿ ಯಾದವ್ ಅವರು ತಮ್ಮ ವರ್ಚಸ್ಸಿನಿಂದ ಎಷ್ಟೊಂದು ಸ್ಥಾನಗಳನ್ನು ಗೆದ್ದಿದ್ದಾರೆ. ಲಾಲೂ ಪ್ರಸಾದ್ ಯಾದವ್ ಹೊರಗಡೆ ಇದ್ದಿದ್ದರೆ ಇನ್ನೂ ಹೆಚ್ಚಿನ ಸ್ಥಾನಗಳನ್ನು ಗೆಲ್ಲುತ್ತಿದ್ದರು. ನಾಯಕರನ್ನು ಜೈಲಲ್ಲಿ‌ ಇಟ್ಟು ರಾಜಕೀಯ ಮಾಡೋದೆ ಕುತಂತ್ರ. ಎರಡೂ ರಾಷ್ಟ್ರೀಯ ಪಕ್ಷಗಳು ಸೇರಿ ನಿಖಿಲ್, ದೇವೇಗೌಡರನ್ನು ಸೋಲಿಸಿದವು. ಅವರಿಗೆ ಒಂದೇ ಅಜೆಂಡಾ. ಕುಮಾರಸ್ವಾಮಿ, ದೇವೇಗೌಡ ಅವರನ್ನು ಸೋಲಿಸಲೇಬೇಕೆಂಬುದು’ ಎಂದೂ ಹೇಳಿದರು.

ಮಾಜಿ ಶಾಸಕ ವೈಎಸ್‌ವಿ ದತ್ತಾ ಮಾತನಾಡಿ, ‘ಬಿಜೆಪಿ ಜೊತೆ ನಮ್ಮ ಪಕ್ಷ (ಜೆಡಿಎಸ್‌) ಹೊಂದಾಣಿಕೆ ಮಾಡಿಕೊಂಡಿದೆ ಎಂಬ ಅಪವಾದ ಬಂದಿದೆ. ಅದೇ ಕಾರಣಕ್ಕೆ ಸತತ ಸೋಲು ಕಾಣುತ್ತಿದ್ದೇವೆ. ಜೊತೆಗೆ ಅಲ್ಪಸಂಖ್ಯಾರನ್ನು ಕಳೆದುಕೊಂಡಿದ್ದೇವೆ. ಮುಸ್ಲಿಂ ಸಮುದಾಯ ನಮ್ಮಿಂದ ದೂರ ಹೋಗಿದೆ. ಕೆಲವರ ಅಪಪ್ರಚಾರದಿಂದ ಪಾರಂಪರಿಕ ಮತಗಳು ದೂರ ಸರಿಯುವಂತಾಗಿದೆ’ ಎಂದರು.

‘ಬಿಹಾರದಲ್ಲಿ ತೇಜಸ್ವಿ ಯಾದವ್ ಪ್ರಧಾನಿ ನರೇಂದ್ರ ಮೋದಿಗೆ ನೀರು ಕುಡಿಸಿದ. ಆ ಮಟ್ಟಕ್ಕೆ ಹೋರಾಟ ಕೊಟ್ಟ ತೇಜಸ್ವಿ ಯಾದವ್. ನಮ್ಮ ಪಕ್ಷವೂ ಸ್ಪಷ್ಟ ಸಿದ್ಧಾಂತದೊಂದಿಗೆ ಹೋಗಬೇಕಿದೆ. ಹೆಚ್ಚು ಹೆಚ್ಚು ಯುವಕರನ್ನು ಸೆಳೆಯಬೇಕಿದೆ. ಮೊದಲು ನಾವು ತತ್ವ, ಸಿದ್ದಾಂತಕ್ಕೆ ಬದ್ಧರಾಗಿರಬೇಕು. ಯುವಕರು, ಮಹಿಳೆಯರು, ಜಾತ್ಯತೀತತೆ ಮುಂದಿಟ್ಟುಕೊಂಡು ಹೋಗಬೇಕು. ನಮ್ಮ ತತ್ವ, ಸಿದ್ದಾಂತ ಬಿಟ್ಟುಕೊಡದೆ ಹೋಗಬೇಕು. ಕಾಂಗ್ರೆಸ್, ಬಿಜೆಪಿ ದೆಹಲಿಯ ಗುಲಾಮ ಪಕ್ಷಗಳು. ಜೆಡಿಎಸ್ ಮಾತ್ರ ಇಲ್ಲಿನ ಸೊಗಡು ಹೊಂದಿರುವ ಪ್ರಾದೇಶಿಕ ಪಕ್ಷ. ನಮ್ಮಲ್ಲಿ ಸಾಮಾಜಿಕ ಜಾಲತಾಣ ಸಕ್ರಿಯವಾಗ’ ಎಂದು ಪಕ್ಷದ ನಾಯಕರಿಗೆ ಅವರು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.