ADVERTISEMENT

ಮಾಜಿ ಸಿಎಂ ಕುಮಾರಸ್ವಾಮಿ ಬಳಿ ಕ್ಷಮೆಯಾಚಿಸಿದ ಪುನೀತ್ ಕೆರೆಹಳ್ಳಿ: ಯಾಕೆ ಗೊತ್ತಾ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಡಿಸೆಂಬರ್ 2023, 10:14 IST
Last Updated 10 ಡಿಸೆಂಬರ್ 2023, 10:14 IST
<div class="paragraphs"><p>ಬಿಜೆಪಿ ಶಾಸಕ ಬಸನಗೌಡ ಯತ್ನಾಳ್‌, ಎಚ್‌.ಡಿ.ಕುಮಾರಸ್ವಾಮಿ, ಕಲ್ಲಡ್ಕ ಪ್ರಭಾಕರ ಭಟ್‌, ಸದಾಶಿವ ಸ್ವಾಮೀಜಿ ಸೇರಿದಂತೆ ಅನೇಕರು ವೇದಿಕೆಯಲ್ಲಿದ್ದಾರೆ.</p></div>

ಬಿಜೆಪಿ ಶಾಸಕ ಬಸನಗೌಡ ಯತ್ನಾಳ್‌, ಎಚ್‌.ಡಿ.ಕುಮಾರಸ್ವಾಮಿ, ಕಲ್ಲಡ್ಕ ಪ್ರಭಾಕರ ಭಟ್‌, ಸದಾಶಿವ ಸ್ವಾಮೀಜಿ ಸೇರಿದಂತೆ ಅನೇಕರು ವೇದಿಕೆಯಲ್ಲಿದ್ದಾರೆ.

   

ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರ ಬಳಿ ರಾಷ್ಟ್ರರಕ್ಷಣಾ ಪಡೆ ಸಂಘಟನೆ ಮುಖಂಡ ಪುನೀತ್ ಕೆರೆಹಳ್ಳಿ ಕ್ಷಮೆಯಾಚಿಸಿದ್ದಾರೆ.

ಈ ಕುರಿತು ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಜೈ ಶ್ರೀ ರಾಮ್ ಹೇಳಿದ ಕುಮಾರಸ್ವಾಮಿ ಅವರು ಧರ್ಮದ ಪರ ನಿಂತಿದ್ದಾರೆ. ಅವರನ್ನು ಟೀಕಿಸುವ ಗುಲಾಮರಿಗೆ ನಾವು ತಕ್ಕ ಉತ್ತರ ಕೊಡುತ್ತೇವೆ. ನಿಮ್ಮ (ಎಚ್‌ಡಿಕೆ) ಬಗ್ಗೆ ನಾವು ಏನಾದರೂ ತಿಳಿಯದೆ ಮನಸ್ಸಿಗೆ ನೋವಾಗುವಂತೆ ಮಾತನಾಡಿದ್ದರೆ ಕ್ಷಮೆ ಕೋರುತ್ತೇವೆ’ ಎಂದು ಬರೆದುಕೊಂಡಿದ್ದಾರೆ.

ADVERTISEMENT

ಧರ್ಮದ ಪರ ನಿಂತವರ ಹಿಂದೆ ಖಂಡಿತ ನಾವೆಲ್ಲ ಇರುತ್ತೇವೆ ಎಂದು ಪುನೀತ್ ಕೆರೆಹಳ್ಳಿ ತಿಳಿಸಿದ್ದಾರೆ.

ಬಂಟ್ವಾಳದ ಕಲ್ಲಡ್ಕ ಶ್ರೀ ರಾಮ ವಿದ್ಯಾ ಕೇಂದ್ರದಲ್ಲಿ ಶನಿವಾರ ರಾತ್ರಿ ನಡೆದ ಹೊನಲು ಬೆಳಕಿನ ವಾರ್ಷಿಕ ಕ್ರೀಡೋತ್ಸವದಲ್ಲಿ ಶಾಲೆ ಸಂಸ್ಥಾಪಕ, ಆರ್‌ಎಸ್‌ಎಸ್ ಮುಖಂಡ ಡಾ. ಎ.ಪ್ರಭಾಕರ ಭಟ್ ಕಲ್ಲಡ್ಕ ಅವರೊಂದಿಗೆ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಶಾಸಕ ಬಸನಗೌಡ ಆರ್.ಯತ್ನಾಳ ಸೇರಿದಂತೆ ಅನೇಕರು ವೇದಿಕೆ ಹಂಚಿಕೊಂಡಿದ್ದರು.

ಮುಂಬರುವ ಲೋಕಸಭೆ ಚುನಾವಣೆಗಾಗಿ ಬಿಜೆಪಿ –ಜೆಡಿಎಸ್‌ ಪಕ್ಷಗಳು ಮೈತ್ರಿ ಮಾಡಿಕೊಂಡಿವೆ. ಮೈತ್ರಿ ಬೆನ್ನಲ್ಲೇ ಕುಮಾರಸ್ವಾಮಿ ಅವರು ಆರ್‌ಎಸ್‌ಎಸ್‌ ಮುಖಂಡರನ್ನು ಭೇಟಿಯಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.

ನನ್ನಲ್ಲಿ ಪರಿವರ್ತನೆಯಾಗಿದೆ: ಎಚ್‌ಡಿಕೆ

‘ದೇಶದ ಸಂಸ್ಕೃತಿ ಜೊತೆಗೆ ಗುರು ಹಿರಿಯರನ್ನು ಗೌರವಿಸುವ ಮಾನವೀಯ ಗುಣ, ರಾಷ್ಟ್ರಭಕ್ತಿಯನ್ನು ವಿದ್ಯಾರ್ಥಿಗಳಲ್ಲಿ ಮೈಗೂಡಿಸಲು ಇಂತಹ ಶಿಕ್ಷಣ ಸಂಸ್ಥೆಗಳ ಅಗತ್ಯವಿದೆ. ವಿಶ್ವದಲ್ಲಿ ಆರ್ಥಿಕ ಚಟುವಟಿಕೆ ಯಲ್ಲಿ ಭಾರತ 3ನೇ ಸ್ಥಾನಕ್ಕೆ ಏರಿದೆ. ಡಾ. ಪ್ರಭಾಕರ ಭಟ್ ಬಗ್ಗೆ ನನಗೆ ಅಷ್ಟು ತಿಳಿದಿರಲಿಲ್ಲ. ಇಲ್ಲಿಗೆ ಬಾರದಿದ್ದರೆ ನನಗೆ ಬಹು ದೊಡ್ಡ ನಷ್ಟ ಉಂಟಾಗುತ್ತಿತ್ತು. ಸರ್ಕಾರದ ಕಣ್ಣು ತೆರೆಸುವ ಕೆಲಸ ಮಾಡುತ್ತಿರುವ ಭಟ್ಟರ ಬಗ್ಗೆ ತಪ್ಪು ಮಾಹಿತಿಯಿಂದ ಏನಾದರೂ ತಪ್ಪು ಮಾತನಾಡಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ. ನನ್ನಲ್ಲಿ ಪರಿವರ್ತನೆ ಆಗಿದೆ’ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.