ಬೆಂಗಳೂರು: ಸರ್ಕಾರಿ ಸ್ಥಳಗಳಲ್ಲಿ ಶಾಖೆ, ಸಾಂಘಿಕ್ ಅಥವಾ ಬೈಠಕ್ ಹೆಸರಿನಲ್ಲಿ ಆರ್‌ಎಸ್‌ಎಸ್ ನಡೆಸುವ ಎಲ್ಲ ಬಗೆಯ ಚಟುವಟಿಕೆಗಳಿಗೂ ನಿಷೇಧ ಹೇರಬೇಕೆಂಬ ವಿಚಾರ ಆಡಳಿತಾರೂಢ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ರಾಜಕೀಯ ಜಟಾಪಟಿಗೆ ಕಾರಣವಾಗಿದೆ.
‘ಬಿಜೆಪಿ ಹೇಳೋದು ಮಾತ್ರ ಆಚಾರ, ನಡೆದುಕೊಳ್ಳುವುದೆಲ್ಲ ಅನಾಚಾರವೇ. ಶಾಲೆ, ಸರ್ಕಾರಿ ಆವರಣಗಳು ಶಿಕ್ಷಣೇತರ ಚಟುವಟಿಕೆಗಳಿಂದ ದೂರ ಇರಬೇಕೆಂದು ತಮ್ಮದೇ ಸರ್ಕಾರದ ಅವಧಿಯಲ್ಲೇ ಆದೇಶ ಮಾಡಿರುವುದನ್ನು ಬಿಜೆಪಿಗರು ಮರೆತಂತಿದೆ’ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.
‘ಇದು ಬಿಜೆಪಿಯವರ ಜಾಣ ಕುರುಡಾ? ಇಲ್ಲ ಸರ್ಕಾರದ ಗಮನಕ್ಕೆ ಬಾರದೇ ಇಂತಹ ಆದೇಶಗಳಾಗುವುದು ಕೇಶವ ಕೃಪಾದಲ್ಲಾ’ ಎಂದು ಅವರು ಪ್ರಶ್ನಿಸಿದ್ದಾರೆ.
‘ಸಂವಿಧಾನವನ್ನು ಒಪ್ಪಿಕೊಂಡವರು ಸರ್ಕಾರದ ನೀತಿ, ನಿಯಮಗಳನ್ನು ಪಾಲಿಸಬೇಕಾದ್ದೂ ಮೊದಲ ಕರ್ತವ್ಯ. ಪ್ರಜೆಗಳು ಮಾತ್ರವಲ್ಲ, ಯಾವ ಸಂಘ ಸಂಸ್ಥೆಗಳು ಕೂಡ ಕಾನೂನುಗಳನ್ನು ಮೀರಿ ವರ್ತನೆ ಮಾಡುವಂತಿಲ್ಲ. ಆರ್‌ಎಸ್ಎಸ್‌ನವರು ಕಾನೂನನ್ನೂ ಮೀರಿದವರೇ? ದೇಶದ ಯಾವ ನೀತಿ, ನಿಯಮ, ಕಾನೂನುಗಳು ಸಂಘ ಪರಿವಾರಕ್ಕೆ ಅನ್ವಯಿಸುವುದಿಲ್ಲವೇ’ ಎಂದು ಹರಿಪ್ರಸಾದ್ ಟೀಕಿಸಿದ್ದಾರೆ.
‘ಸಂವಿಧಾನವನ್ನು ಒಪ್ಪದವರು, ಸಂವಿಧಾನವನ್ನು ಪಾಲಿಸದವರಿಂದ ಶಾಂತಿ, ಸೌಹಾರ್ದತೆ, ಸಹಬಾಳ್ವೆ ನಿರೀಕ್ಷಿಸಲು ಸಾಧ್ಯವಿಲ್ಲ. ಅನೈತಿಕ, ಅಕ್ರಮ ಚಟುವಟಿಕೆಗಳನ್ನು ನಡೆಸುವ ಉದ್ದೇಶಕ್ಕಾಗಿಯೇ ಆರ್‌ಎಸ್ಎಸ್ ಸಂಘಟನೆ ನೋಂದಣಿ ಮಾಡಿಕೊಂಡಿಲ್ಲ ಎಂಬುದು ಸ್ಪಷ್ಟ. ಈ ಕಾರಣಕ್ಕಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಭೂಗತವಾಗಿಯೇ ತನ್ನ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತಿದೆ’ ಎಂದು ಅವರು ಗುಡುಗಿದ್ದಾರೆ.
ಇಂತಹ ಸಮಾಜ ಘಾತುಕ ಸಂಘಟನೆಗಳ ಉಪಟಳಕ್ಕೆ ಕಡಿವಾಣ ಹಾಕಲೇಬೇಕು. ಸರ್ಕಾರ ಕೂಡಲೇ ಮತ್ತಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸುತ್ತೇನೆ ಎಂದು ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್ ನಡೆಸುವ ಎಲ್ಲ ಬಗೆಯ ಚಟುವಟಿಕೆಗಳಿಗೂ ನಿಷೇಧ ಹೇರಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅ. 4ರಂದು ಪತ್ರ ಬರೆದಿದ್ದರು.
ಈ ಹಿನ್ನೆಲೆಯಲ್ಲಿ ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳಿಗೆ ನಿಷೇಧ ಹೇರುವ ಕುರಿತಂತೆ ಪರಿಶೀಲಿಸಿ, ಕೂಡಲೇ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದರು.
ಆರ್‌ಎಸ್‌ಎಸ್ ಸಂಘಟನೆಗೆ ನೂರು ವರ್ಷ ತುಂಬಿದ ಸಂಭ್ರಮಾಚರಣೆ ಸಂದರ್ಭದಲ್ಲೇ ರಾಜ್ಯದಲ್ಲಿ ಅದರ ಚಟುವಟಿಕೆಗೆ ಅಂಕುಶ ಹಾಕುವಂತೆ ಪ್ರಿಯಾಂಕ್ ಬರೆದ ಪತ್ರ ಮತ್ತು ಮುಖ್ಯಮಂತ್ರಿ ನೀಡಿರುವ ಸೂಚನೆ ಬಿಜೆಪಿ ನಾಯಕರನ್ನು ಕೆರಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.