
ಬೆಂಗಳೂರು: ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಶುಕ್ರವಾರವೂ ಮುಂದುವರಿದಿದೆ.
‘ಡಿ.ಕೆ.ಶಿವಕುಮಾರ್ ಇದೇ ನವೆಂಬರ್‌ನಲ್ಲೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ’ ಎಂಬ ವಿಷಯದ ಕುರಿತ ಪ್ರಶ್ನೆಗೆ ಸಿಟ್ಟಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪತ್ರಕರ್ತರ ಮೇಲೆ ಹರಿಹಾಯ್ದಿದ್ದಾರೆ.
‘ಯಾರ್ ಹೇಳಿದ್ದು? ನಿನಗೆ ಯಾರ್ ಹೇಳಿದ್ರು, ನಿಂಗೆ ಹೇಗೆ ಗೊತ್ತಾಯ್ತು’ ಎಂದು ಸಿದ್ದರಾಮಯ್ಯ ವರದಿಗಾರರನ್ನು ಏರಿದ ಧ್ವನಿಯಲ್ಲಿ ಪ್ರಶ್ನಿಸಿದರು.
ಶಿವಕುಮಾರ್ ನವೆಂಬರ್‌ನಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸುತ್ತಾರೆ ಎಂದು ಪತ್ರಿಕೆಯೊಂದರಲ್ಲಿ ಪ್ರಕಟವಾದ ವರದಿ ಕುರಿತ ಸುದ್ದಿಗಾರರ ಪ್ರಶ್ನಿಸುತ್ತಿದ್ದಂತೆ ಸಿದ್ದರಾಮಯ್ಯ ಕೆಂಡಾಮಂಡಲರಾದರು.
‘ಯಾರು ಹೇಳಿದ್ದು’ ಎಂದು ಸಿದ್ದರಾಮಯ್ಯ ಅವರು ಪ್ರಶ್ನಿಸಿದಾಗ ‘ಪತ್ರಿಕೆಯಲ್ಲಿ ಪ್ರಕಟವಾಗಿದೆ’ ಎಂದು ಸುದ್ದಿಗಾರರು ಪ್ರತಿಕ್ರಿಯಿಸಿದರು. ‘ಯಾವ ಪತ್ರಿಕೆ? ಯಾವ ಪತ್ರಿಕೆ ನೋಡಿದೆ ನೀನು? ನಾನು ಎಲ್ಲ ಪತ್ರಿಕೆ ಓದುತ್ತೇನೆ. ಯಾವುದರಲ್ಲೂ ಬಂದಿಲ್ಲ’ ಎಂದರು.
ಚಿತ್ರದುರ್ಗದ ಕಾರ್ಯಕ್ರಮವೊಂದರಲ್ಲಿ ಯುವಕರೊಬ್ಬರು ಮುಂದಿನ ಡಿಸಿಎಂ (ಉಪಮುಖ್ಯಮಂತ್ರಿ) ಜಮೀರ್ ಅಹಮದ್ ಎಂದು ಕೂಗಿದ್ದಾರೆ. ತಕ್ಷಣವೇ ಖುಷಿಗೊಂಡ ಜಮೀರ್, ಘೋಷಣೆ ಕೂಗಿದವರ ಗಲ್ಲಕ್ಕೆ ಮುತ್ತು ಕೊಟ್ಟಿದ್ದಾರೆ.
ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಸದ್ಯ ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ. 2028ರವರೆಗೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ. ನವೆಂಬರ್‌ನಲ್ಲಿ ಯಾವ ಕ್ರಾಂತಿಯೂ ಆಗುವುದಿಲ್ಲ. ಸಂಪುಟ ಪುನರ್ ರಚಿಸುವ ಚಿಂತನೆ ಇದ್ದು, ಅದನ್ನು ಹೈಕಮಾಂಡ್ ನಿರ್ಧಾರಿಸುತ್ತದೆ’ ಎಂದರು.
‘ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತಾರೆ ಎಂಬುದು ಊಹಾಪೋಹ. ನಾನಾದರೂ ಜೆಡಿಎಸ್‌ನಿಂದ ಬಂದಿದ್ದೇನೆ. ಆದರೆ, ಶಿವಕುಮಾರ್ ಅವರದ್ದು ಕಾಂಗ್ರೆಸ್ ರಕ್ತ, ರಕ್ತವನ್ನು ಬದಲಾಯಿಸಲು ಸಾಧ್ಯವಿಲ್ಲ. ಅವರು ಪಕ್ಷ ತೊರೆಯುವ ಪ್ರಶ್ನೆಯೇ ಇಲ್ಲ’ ಎಂದರು.
‘ಕರ್ನಾಟಕದಲ್ಲಿ ದಲಿತ ಸಿ.ಎಂ ಸಾಧ್ಯವಿಲ್ಲವೆಂದು ಯಾರು ಹೇಳಿದ್ದಾರೆ? ಈ ವಿಷಯದಲ್ಲಿ ಅಳುವ ಪರಿಸ್ಥಿತಿಯಂತೂ ಇಲ್ಲ’ ಎಂದು ಸಮಾಜಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಹೇಳಿದರು.
‘ಕರ್ನಾಟಕದಲ್ಲಿ ದಲಿತ ಮುಖ್ಯಮಂತ್ರಿ ಸಾಧ್ಯವಾಗುವುದಿಲ್ಲ ಎಂದು ಹೇಳಿದವರು ಯಾರು? ಸೂಕ್ತ ಸಮಯಕ್ಕೆ ಕಾಯುತ್ತಿರಬಹುದು. ಶೋಷಿತ ವರ್ಗಗಳಿಗೆ ಶಕ್ತಿ ತುಂಬಬೇಕು ಎಂಬುದೇ ಅಂಬೇಡ್ಕರ್ ಅವರ ಹೋರಾಟ, ಸಿದ್ದಾಂತ. ನೂರು ವರ್ಷಗಳ ಹಿಂದಿನಿಂದ ಈ ಹೋರಾಟ ಇದೆ. ದಲಿತ ಮುಖ್ಯಮಂತ್ರಿ ಹೋರಾಟವೂ ನಿರಂತರವಾಗಿದ್ದು, ಸೂಕ್ತ ಸಮಯದಲ್ಲಿ ಹೈಕಮಾಂಡ್ ನಿರ್ಧರಿಸಲಿದೆ’ ಎಂದರು.
‘ಅಸ್ಪೃಶ್ಯರ ನೋವು ಅಸ್ಪೃಶ್ಯರಿಗೆ ಮಾತ್ರ ಅರ್ಥವಾಗುತ್ತದೆ. ಅವರ ನೋವು– ಸಂಕಟ ಬೇರೆಯವರಿಗೆ ಅರ್ಥವಾಗುವುದಿಲ್ಲ. ದಲಿತರ ಪರವಾಗಿ ಮಾಡಬಾರದು ಅಂತ ಯಾರು ಹೇಳುವುದಿಲ್ಲ. ನಮ್ಮ ಹೈಕಮಾಂಡ್ ದಲಿತರ ಪರವಾಗಿ ಇದೆ. ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಬಗ್ಗೆ ಹೆಮ್ಮೆ ಇದೆ’ ಎಂದು ಹೇಳಿದರು.
ಮೈಸೂರು: ‘ಮುಖ್ಯಮಂತ್ರಿ ಯಾರಾದರೂ ಆಗಿರಲಿ, ಕಾಂಗ್ರೆಸ್ ಪಕ್ಷವೇ ಅಧಿಕಾರದ ಅವಧಿ ಪೂರ್ಣಗೊಳಿಸುತ್ತದೆ. ಬಿ.ನಾಗೇಂದ್ರ ಹಾಗೂ ಕೆ.ಎನ್. ರಾಜಣ್ಣ ರಾಜೀನಾಮೆಯ ಕಾರಣದಿಂದಾಗಿ ಎರಡು ಸಚಿವ ಸ್ಥಾನಗಳಷ್ಟೆ ಖಾಲಿ ಇವೆ. ನ.20 ಅಥವಾ 26ರಂದು ಸಚಿವ ಸಂಪುಟ ಪುನರ್‌ರಚನೆ ಬಗ್ಗೆ ಮುಖ್ಯಮಂತ್ರಿ ಕಚೇರಿಯಿಂದ ಮಾಹಿತಿ ಬಂದಿದೆ. ರಾಜ್ಯಕ್ಕೆ ಒಳಿತಾಗುವ ತೀರ್ಮಾನವನ್ನು ಹೈಕಮಾಂಡ್ ಕೈಗೊಳ್ಳುತ್ತದೆ ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವೀರ್ ಸೇಠ್ ಹೇಳಿದರು.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಶಾಸಕಾಂಗ ಪಕ್ಷದ ನಾಯಕನನ್ನಾಗಿ ನಾವು ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಪ್ರಜಾಪ್ರಭುತ್ವದಲ್ಲಿ ಏನು ಬೇಕಾದರೂ ಆಗಬಹುದು. ಆದರೆ, ವರಿಷ್ಠರ ನಿರ್ಧಾರಕ್ಕೆ ನಮ್ಮ ಬೆಂಬಲ ಇರಲಿದೆ. ಸಚಿವ ಸ್ಥಾನಕ್ಕಾಗಿ ನಾನೂ ಕಾಯುತ್ತಿದ್ದೇನೆ’ ಎಂದರು.
ಕಾರವಾರ/ವಿಜಯಪುರ: ‘ಪಕ್ಷದ ಹೈಕಮಾಂಡ್ ಒಪ್ಪಿದರೆ ಪೂರ್ಣಾವಧಿ ಹುದ್ದೆ ನಿಭಾಯಿಸುವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ. ಅವರನ್ನು ಹುದ್ದೆಯಲ್ಲಿ ಮುಂದುವರಿಸುವುದು ಅಥವಾ ಬದಲಿಸುವುದು ಪಕ್ಷದ ಹೈಕಮಾಂಡ್‌ಗೆ ಬಿಟ್ಟ ನಿರ್ಣಯ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ ಹೇಳಿದರು.
‘ನವೆಂಬರ್ ಕ್ರಾಂತಿ ಎಂಬುದೇ ಒಂದು ಭ್ರಾಂತಿ. ರಾಜಕೀಯ ನಾಯಕರ ಮಾತು ಕೇಳಿ ಮಾಧ್ಯಮದವರೂ ಸುದ್ದಿ ಮಾಡುತ್ತಿದ್ದೀರಿ. ಅಂತಹ ಯಾವುದೇ ಕ್ರಾಂತಿ ಆಗದು. ದಲಿತ ಮುಖ್ಯಮಂತ್ರಿ ಆಗಬೇಕೊ, ಬೇರೆಯವರು ಆಗಬೇಕೊ ಅಥವಾ ಈಗಿರುವವರೇ ಮುಂದುವರಿಯಬೇಕೊ ಎಂಬುದನ್ನು ವರಿಷ್ಠರು ನಿರ್ಧರಿಸುತ್ತಾರೆ’ ಎಂದು ಅವರು ತಿಳಿಸಿದರು.
ಮುಖ್ಯಮಂತ್ರಿ ಬದಲಾವಣೆ ವಿಷಯ ಹೈಕಮಾಂಡ್‌ಗೆ ಬಿಟ್ಟ ವಿಷಯ. ಇದರ ಬಗ್ಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಏನು ಹೇಳಿದ್ದಾರೋ, ಅದೇ ನನ್ನ ಹೇಳಿಕೆ.-ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.