ADVERTISEMENT

ಇದೇ 30ರೊಳಗೆ ಬೆಳೆ ಹಾನಿ ಜಂಟಿ ಸಮೀಕ್ಷೆ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2021, 19:45 IST
Last Updated 24 ನವೆಂಬರ್ 2021, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಇತ್ತೀಚಿನ ಮಳೆಯಿಂದ ಹಾನಿಗೊಳಗಾಗಿರುವ ಮನೆಗಳಿಗೆ ಪರಿಹಾರ ನೀಡುವ ಸಂಬಂಧ ರಾಜ್ಯ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ.

ಅಲ್ಲದೇ, ಈವರೆಗೆ ಆಗಿರುವ ಬೆಳೆ ಹಾನಿಯ ಬಗ್ಗೆ ಇದೇ 30 ರೊಳಗೆ ಜಂಟಿ ಸಮೀಕ್ಷೆ ನಡೆಸಿ ಆಯಾ ದಿನವೇ ತಂತ್ರಾಂಶದಲ್ಲಿ ನಮೂದಿಸುವಂತೆಯೂ ಕಂದಾಯ ಇಲಾಖೆ ಸೂಚಿಸಿದೆ.

ಪ್ರವಾಹದಿಂದ ಆಗಿರುವ ಬೆಳೆ ಹಾನಿ ವಿವರಗಳನ್ನು ಜಂಟಿ ಸಮೀಕ್ಷೆ ನಡೆಸಿ ಪ್ರತಿನಿತ್ಯ ಪರಿಹಾರ ತಂತ್ರಾಂಶದಲ್ಲಿ ನಮೂದಿಸಬೇಕು. ಇದರ ಅನ್ವಯ ಪ್ರತಿ ದಿನ ಇನ್‌ಪುಟ್‌ ಸಬ್ಸಿಡಿಯನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಲಾಗುವುದು ಎಂದು ತಿಳಿಸಿದೆ.

ADVERTISEMENT

ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಪ್ರವಾಹ ನೀರು ನುಗ್ಗಿರುವ ಮನೆಗಳ ಗೃಹೋಪಯೋಗಿ ವಸ್ತುಗಳು ಮತ್ತು ಬಟ್ಟೆಗಳನ್ನು ಕಳೆದುಕೊಂಡ ಕುಟುಂಬಗಳಿಗೆ ತಲಾ ₹10 ಸಾವಿರದಂತೆ ಜಿಲ್ಲಾಧಿಕಾರಿಗಳು ವೈಯಕ್ತಿಕ ಖಾತೆಯಲ್ಲಿ ಲಭ್ಯವಿರುವ ಅನುದಾನದಿಂದ ಕೂಡಲೇ ಪಾವತಿ ಮಾಡಬೇಕು ಎಂದು
ಹೇಳಿದೆ.

ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ತಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ಪರಿಸ್ಥಿತಿ ಅವಲೋಕಿಸಿ ಎಸ್‌ಡಿಆರ್‌ಎಫ್‌ ಮತ್ತು ಎನ್‌ಡಿ ಆರ್‌ಎಫ್‌ ಮಾರ್ಗಸೂಚಿಯಂತೆ ಹಾನಿ ವಿವರಗಳನ್ನು ನಮೂದಿಸಲು ಸಂಪೂರ್ಣ ಅಧಿಕಾರ ನೀಡಲಾಗಿದೆ ಎಂದು ಮಾರ್ಗಸೂಚಿ ತಿಳಿಸಿದೆ.

ಅತಿವೃಷ್ಟಿ ಪರಿಹಾರ (ವಿವರ;ಪರಿಹಾರ ಮೊತ್ತ)

ನೀರು ನುಗ್ಗಿ ಗೃಹೋಪಯೋಗಿ ವಸ್ತುಗಳ ಹಾನಿ;₹10,000
ಶೇ 75 ಕ್ಕಿಂತ ಹೆಚ್ಚು ಹಾನಿಯಾದ ಮನೆ(‘ಎ’ ವರ್ಗ);₹5 ಲಕ್ಷ
ಶೇ25 ರಿಂದ ಶೇ 75ರಷ್ಟು ಮನೆ ಹಾನಿ(‘ಬಿ’ ವರ್ಗ);₹3 ಲಕ್ಷ
ಶೇ15ರಿಂದ ಶೇ 25 ಭಾಗಶಃ ಮನೆ ಹಾನಿ(‘ಸಿ’ ವರ್ಗ)₹50 ಸಾವಿರ
(2021–22 ನೇ ಸಾಲಿನಲ್ಲಿ ಪ್ರವಾಹ/ ಅತಿವೃಷ್ಟಿಯಿಂದ ಉಂಟಾದ ಮನೆಗಳ ಹಾನಿಗೆ ಪರಿಹಾರ ದರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.