ADVERTISEMENT

ಕೊಡಗಿನಲ್ಲಿ ಮತ್ತೆ ಬಿರುಸಿನ ಮಳೆ; ಹಲವೆಡೆ ‘ಯೆಲ್ಲೊ ಅಲರ್ಟ್’ ಘೋಷಣೆ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2020, 20:52 IST
Last Updated 11 ಆಗಸ್ಟ್ 2020, 20:52 IST
ಮಳೆಯಲ್ಲಿ ಸಂಚರಿಸುವ ವಾಹನಗಳು (ಸಾಂದರ್ಭಿಕ ಚಿತ್ರ)
ಮಳೆಯಲ್ಲಿ ಸಂಚರಿಸುವ ವಾಹನಗಳು (ಸಾಂದರ್ಭಿಕ ಚಿತ್ರ)    
""

ಬೆಂಗಳೂರು: ಕೊಡಗು ಜಿಲ್ಲೆ ಹೊರತು ಪಡಿಸಿ ರಾಜ್ಯ ಉಳಿದ ಭಾಗದಲ್ಲಿ ಮಳೆ ಪ್ರಮಾಣ ತಗ್ಗಿದೆ.

ಕೊಡಗು ಜಿಲ್ಲೆಯಲ್ಲಿ ಮತ್ತೆ ಬಿರುಸಿನ ಮಳೆಯಾಗುತ್ತಿದೆ. ತಲಕಾವೇರಿ, ಭಾಗ ಮಂಡಲ, ಮಡಿಕೇರಿ ವ್ಯಾಪ್ತಿಯಲ್ಲಿ ಮಂಗಳವಾರ ಜೋರು ಮಳೆಯಾಗಿದೆ.ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಆಗುತ್ತಿರುವುದರಿಂದ ಮಂಡ್ಯ ಜಿಲ್ಲೆಯ ಕೆಆರ್‌ಎಸ್‌ ಜಲಾಶಯದ ಒಳಹರಿವು ಹೆಚ್ಚುತ್ತಲೇ ಇದೆ.

ಕಬಿನಿ ಭರ್ತಿ: ಕಬಿನಿ ಜಲಾಶಯ ಬಹುತೇಕ ಭರ್ತಿ ಆಗಿದೆ. 2,284 ಅಡಿ ಎತ್ತರದ ಜಲಾಶಯದಲ್ಲಿ 2,283.66 ಅಡಿಯಷ್ಟು ನೀರು ಸಂಗ್ರಹಗೊಂಡಿದೆ. ಒಳಹರಿವು ಹೆಚ್ಚುತ್ತಿದ್ದು, ಜಲಾಶಯ ದಿಂದ 30,600 ಕ್ಯುಸೆಕ್‌ ನೀರನ್ನು ನದಿಗೆ ಬಿಡಲಾಯಿತು.

ADVERTISEMENT

ಚಾರ್ಮಾಡಿ–ಇಂದಿನಿಂದ ಲಘು ವಾಹನ ಸಂಚಾರ:ಕರಾವಳಿ ಮತ್ತು ಮಲೆನಾಡಿನಲ್ಲಿ ಮಂಗಳವಾರ ಮಳೆ ಕ್ಷೀಣಿಸಿದೆ. ನದಿಗಳಲ್ಲಿ ಪ್ರವಾಹ ಇಳಿಮುಖವಾಗುತ್ತಿದ್ದು, ಪರಿಹಾರ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಚಾರ್ಮಾಡಿ ಘಾಟಿ ಮಾರ್ಗದಲ್ಲಿ ಇದೇ 12ರಿಂದ ಲಘು ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಬೆಳಿಗ್ಗೆ 7ರಿಂದ ಸಂಜೆ 7ರವರೆಗೆ ಮಾತ್ರ ವಾಹನಗಳು ಸಂಚರಿಸಬಹುದು ಎಂದು ಚಿಕ್ಕಮಗಳೂರು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದ್ದಾರೆ.

ಕೃಷ್ಣಾ ನದಿಗೆ ನೀರಿನ ಪ್ರಮಾಣ ಇಳಿಕೆ:ನೆರೆಯ ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮಳೆ ಇಳಿಮುಖವಾಗಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಕೃಷ್ಣಾ, ವೇದ ಗಂಗಾ ಮತ್ತು ದೂಧ್‌ಗಂಗಾ ನದಿಗಳಲ್ಲಿ ನೀರಿನ ಹರಿವಿನ ಪ್ರಮಾಣ ತಗ್ಗಿದೆ. ಪ್ರವಾಹ ಭೀತಿಯು ಕಡಿಮೆಯಾಗಿದೆ.ಹೊಸಪೇಟೆಯ ತುಂಗಭದ್ರಾ ಜಲಾಶಯಕ್ಕೆ ಸತತ ಎರಡನೇ ದಿನವೂ ಒಳಹರಿವು ತಗ್ಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ.

ಭಾರಿ ಮಳೆ: ರಾಜ್ಯದ ಕರಾವಳಿ ಜಿಲ್ಲೆ ಗಳಲ್ಲಿ ಆ. 12 ಮತ್ತು 13ರಂದು ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಆ.12ರಂದು ಗುಡುಗು, ಸಿಡಿಲು ಸಹಿತ ಮಳೆಯಾಗುವ ಸಾಧ್ಯತೆ ಇದ್ದು ‘ಯೆಲ್ಲೊ ಅಲರ್ಟ್‌’ ಘೋಷಿಸಲಾಗಿದೆ. ಕರಾವಳಿ ಭಾಗದಲ್ಲಿ ಗಂಟೆಗೆ 60 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಮೀನುಗಾರರು ಕಡಲಿಗೆ ಇಳಿಯದಂತೆ ಇಲಾಖೆ ಎಚ್ಚರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.