ಬೆಂಗಳೂರು: ರಾಜ್ಯದ ಬಹುತೇಕ ಭಾಗಗಳಲ್ಲಿ ಈ ಬಾರಿ ನೈರುತ್ಯ ಮುಂಗಾರು ಮಳೆ ಅಬ್ಬರಿಸಿದ್ದು, ಪರಿಣಾಮ ಕಳೆದ ಎರಡು ತಿಂಗಳಲ್ಲಿ ತೋಟಗಾರಿಕೆ ಮತ್ತು ಕೃಷಿ ಸೇರಿ ಒಟ್ಟು 45,397 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದೆ.
ಜೂನ್ 1ರಿಂದ ಜುಲೈ 31ರವರೆಗಿನ ಅವಧಿಯಲ್ಲಿ ಕೊಡಗು, ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮತ್ತು ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ, ಬೆಳಗಾವಿ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಬಿರುಗಾಳಿ ಸಹಿತ ವರ್ಷಧಾರೆಯಾಗಿದೆ.
ರಾಜ್ಯದಲ್ಲಿ ಸಂಭವಿಸಿರುವ ಮಳೆ ಹಾನಿ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಕಂದಾಯ ಇಲಾಖೆಯ (ವಿಪತ್ತು ನಿರ್ವಹಣೆ) ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್, ‘ಕಳೆದ ಎರಡು ತಿಂಗಳಲ್ಲಿ ಮಳೆಯಿಂದಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಅತೀ ಹೆಚ್ಚು 15 ಮಂದಿ ಸೇರಿ ಒಟ್ಟು 55 ಜನರು ಸಾವಿಗೀಡಾಗಿದ್ದಾರೆ. 18 ಮಂದಿ ನೀರಿನಲ್ಲಿ ಮುಳುಗಿ ಜೀವ ತೆತ್ತಿದ್ದಾರೆ. ಉಳಿದಂತೆ, ಗುಡ್ಡ ಕುಸಿತದಿಂದ 13, ಮನೆ, ಆವರಣ ಗೋಡೆ ಕುಸಿದುಬಿದ್ದು, ಸಿಡಿಲು ಬಡಿದು ಮತ್ತು ಮರ ಮುರಿದು ಮೈ ಮೇಲೆ ಬಿದ್ದು ತಲಾ ಎಂಟು ಜನ ಜೀವ ಕಳೆದುಕೊಂಡಿದ್ದಾರೆ. ಮೂರು ಮಂದಿ ನಾಪತ್ತೆಯಾಗಿದ್ದು, 35 ಮಂದಿಗೆ ಗಾಯಗಳಾಗಿವೆ’ ಎಂದಿದ್ದಾರೆ.
ಈ ಅವಧಿಯಲ್ಲಿ ಇಡೀ ರಾಜ್ಯದಲ್ಲಿ 611 ಮಿ.ಮೀ ಮಳೆಯಾಗಿದೆ. ಇದು ವಾಡಿಕೆಗಿಂತ (471 ಮಿ.ಮೀ) ಶೇ 30ರಷ್ಟು ಹೆಚ್ಚು. ಯಾದಗಿರಿ ಜಿಲ್ಲೆಯನ್ನು ಬಿಟ್ಟರೆ ಉಳಿದ ಎಲ್ಲ ಜಿಲ್ಲೆಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆ ಆಗಿದೆ. ಯಾದಗಿರಿಯಲ್ಲಿ ಶೇ 3ರಷ್ಟು ಮಳೆ ಕೊರತೆ ಆಗಿದೆ. ದಕ್ಷಿಣ ಒಳನಾಡಿನಲ್ಲಿ ವಾಡಿಕೆಗಿಂತ ಶೇ 41ರಷ್ಟು, ಉತ್ತರ ಒಳನಾಡಿನಲ್ಲಿ ಶೇ 31, ಮಲೆನಾಡಿನಲ್ಲಿ ಶೇ 30, ಕರಾವಳಿಯಲ್ಲಿ ಶೇ 27ರಷ್ಟು ಹೆಚ್ಚು ಮಳೆ ಆಗಿದೆ.
ಅತೀ ಹೆಚ್ಚಿನ ಪ್ರಮಾಣದಲ್ಲಿ ಜಲಾಶಯಗಳಿಗೆ ಮಳೆ ನೀರು ಹರಿದುಬಂದ ಕಾರಣ, ಬೆಳಗಾವಿ ಜಿಲ್ಲೆಯ ಗೋಕಾಕ, ಅಥಣಿ, ಹುಕ್ಕೇರಿ, ನಿಪ್ಪಾಣಿ, ಮೂಡಲಗಿ, ಚಿಕ್ಕೋಡಿ ತಾಲ್ಲೂಕುಗಳಲ್ಲಿ ಮತ್ತು ಬಾಗಲಕೋಟೆಯ ಕೆಲವು ಭಾಗಗಳಲ್ಲಿ ಭಾರಿ ಪ್ರವಾಹ ಉಂಟಾಗಿದೆ. ಕಾವೇರಿ ಜಲಾನಯನ ಪ್ರದೇಶಗಳ ಎಲ್ಲ ನಾಲ್ಕು ಅಣೆಕಟ್ಟುಗಳಿಗೂ ಹೆಚ್ಚಿನ ಪ್ರಮಾಣದಲ್ಲಿ ಒಳ ಹರಿವು ಉಂಟಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಅತೀ ಹೆಚ್ಚು 26,674 ಹೆಕ್ಟೇರ್ ಪ್ರದೇಶದಲ್ಲಿ, ಬಾಗಲಕೋಟೆಯಲ್ಲಿ 15,455 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಹಾನಿ ಉಂಟಾಗಿದೆ. ನಷ್ಟದ ಪ್ರಮಾಣವನ್ನು ಇನ್ನಷ್ಟೆ ಸಮೀಕ್ಷೆ ಮಾಡಬೇಕಿದೆ ಎಂದು ಅವರು ಮಾಹಿತಿ ನೀಡಿದರು.
196 ಕಾಳಜಿ ಕೇಂದ್ರದಲ್ಲಿ 23,642 ಮಂದಿ
ಮಳೆಯಿಂದ 212 ಗ್ರಾಮಗಳಲ್ಲಿ ಸಮಸ್ಯೆಯಾಗಿದೆ. ವಿವಿಧೆಡೆ 196 ಕಾಳಜಿ ಕೇಂದ್ರಗಳನ್ನು ಆರಂಭಿಸಲಾಗಿದ್ದು, ಅವುಗಳಲ್ಲಿ 23,642 ಜನರು ಆಶ್ರಯ ಪಡೆದಿದ್ದಾರೆ.
278 ಜಾನುವಾರುಗಳು ಬಲಿ ಆಗಿವೆ. 1,064 ಮನೆಗಳು ಸಂಪೂರ್ಣ, 5,406 ಮನೆಗಳು ಭಾಗಶಃ ಹಾನಿಯಾಗಿದೆ. ಚಿಕ್ಕಮಗಳೂರಿನಲ್ಲಿ ಅತೀ ಹೆಚ್ಚು 353, ಉತ್ತರ ಕನ್ನಡದಲ್ಲಿ 183, ಹಾಸನದಲ್ಲಿ 153, ಮನೆಗಳಿಗೆ ತೀವ್ರ ಹಾನಿ ಯಾಗಿದೆ. ಒಟ್ಟು 23,284 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.