
ಹಣ
ಹಣ
ಸುವರ್ಣ ವಿಧಾನಸೌಧ(ಬೆಳಗಾವಿ): ರಾಜ್ಯ ಸರ್ಕಾರ 2023 ರಿಂದ ಇಲ್ಲಿಯವರೆಗೆ 32 ಕ್ರಿಮಿನಲ್ ಪ್ರಕರಣಗಳ ವಿಚಾರಣೆಗೆ ವಿಶೇಷ ತನಿಖಾ ತಂಡಗಳನ್ನು (ಎಸ್‌ಐಟಿ) ರಚಿಸಿದ್ದು, ಈ ಪ್ರಕರಣಗಳಲ್ಲಿ ಸರ್ಕಾರದ ಪರವಾಗಿ ವಾದ ಮಂಡಿಸಲು ಕೋಟ್ಯಂತರ ರೂಪಾಯಿ ವೆಚ್ಚ ಮಾಡಿದೆ.
ವಿಧಾನಸಭೆಯಲ್ಲಿ ಬಿಜೆಪಿಯ ಮುನಿರತ್ನ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಗೃಹ ಸಚಿವ ಜಿ.ಪರಮೇಶ್ವರ ಅವರು ನೀಡಿದ ಲಿಖಿತ ಉತ್ತರದಲ್ಲಿ ಈ ವಿವರಗಳಿವೆ.
ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯದ ಪ್ರಕರಣದಲ್ಲಿ ವಿಶೇಷ ಅಭಿಯೋಜಕ ಪ್ರೊ.ರವಿಕುಮಾರ್ ವರ್ಮ ಅವರಿಗೆ ₹2.41 ಕೋಟಿ ಸಂಭಾವನೆ ಪಾವತಿಸಲಾಗಿದೆ. ಇದೇ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ನಲ್ಲಿ ವಾದ ಮಂಡಿಸಲು ಹಿರಿಯ ವಕೀಲ ಕಪಿಲ್ ಸಿಬಲ್ ಅವರಿಗೆ ಪ್ರತಿ ಹಾಜರಿಗೆ ₹15.50 ಲಕ್ಷ ಹಾಗೂ ಬಿ.ಎನ್.ಜಗದೀಶ್ ಅವರಿಗೆ ₹23.37 ಲಕ್ಷ ಪಾವತಿಸಲಾಗಿದೆ ಎಂದು ಹೇಳಿದ್ದಾರೆ.
ಇದೇ ಪ್ರಕರಣದಲ್ಲಿ ಮ್ಯಾಜಿಸ್ಟ್ರೇಟ್ ಮತ್ತು ಜಿಲ್ಲಾ ನ್ಯಾಯಾಲಯದಲ್ಲಿ ವಾದಿಸಲು ಬಿ.ಎನ್.ಜಗದೀಶ್ ಮತ್ತು ಅಶೋಕ್ ನಾಯಕ್ ಅವರಿಗೆ ₹12.70 ಲಕ್ಷ ಪಾವತಿಸಲಾಗಿದೆ.
ಬಿಟ್‌ಕಾಯಿನ್ ಪ್ರಕರಣದಲ್ಲಿ ಹೈಕೋರ್ಟ್‌ನಲ್ಲಿ ವಾದಿಸಲು ವಿಶೇಷ ಅಭಿಯೋಜಕ ಪಿ. ಪ್ರಸನ್ನ ಕುಮಾರ್ ಅವರಿಗೆ ₹15.70 ಲಕ್ಷ, ಬಿ.ಎನ್.ಜಗದೀಶ್ ಅವರಿಗೆ ₹91 ಸಾವಿರ ಪಾವತಿಸಲಾಗಿದೆ. ವಾಲ್ಮೀಕಿ ಹಗರಣದಲ್ಲಿ ಬಿ.ಎನ್.ಜಗದೀಶ್ ಅವರಿಗೆ ₹7.28 ಲಕ್ಷ, ಮುನಿರತ್ನ ಪ್ರಕರಣದಲ್ಲಿ ಸಿ.ಎಸ್.ಪ್ರದೀಪ್ ಅವರಿಗೆ ₹21.08 ಲಕ್ಷ ಪಾವತಿಸಲಾಗಿದೆ.
ಧರ್ಮಸ್ಥಳ ಪ್ರಕರಣ ಮತ್ತು ಆಳಂದ ಮತ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿಲ್ಲ
ವಿಶೇಷ ತನಿಖಾ ತಂಡ (ಎಸ್‌ಐಟಿ) ವೆಚ್ಚ (₹ಗಳಲ್ಲಿ):
* ಬಿಟ್ ಕಾಯಿನ್ ಪ್ರಕರಣ:39,98,068
*ಪ್ರಜ್ವಲ್ ರೇವಣ್ಣ ಪ್ರಕರಣ:33,91,855
*ಮುನಿರತ್ನ ಪ್ರಕರಣ:23,52,864
*ವಾಲ್ಮೀಕಿ ನಿಗಮದ ಹಗರಣ: 1,55,818
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.