
ಬೆಂಗಳೂರು: ರಾಜ್ಯದಲ್ಲಿರುವ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಸರ ವ್ಯವಸ್ಥೆಯನ್ನು ಬಳಸಿಕೊಂಡು ಕರ್ನಾಟಕವನ್ನು ಬಾಹ್ಯಾಕಾಶ ತಂತ್ರಜ್ಞಾನದ ಜಾಗತಿಕ ತಾಣವಾಗಿ ಪರಿವರ್ತಿಸುವ ಉದ್ದೇಶದ ‘ಕರ್ನಾಟಕ ಬಾಹ್ಯಾಕಾಶ ತಂತ್ರಜ್ಞಾನ ನೀತಿ 2025–2030’ಕ್ಕೂ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಎಚ್.ಕೆ.ಪಾಟೀಲ ಅವರು ಈ ಕುರಿತ ವಿವರ ನೀಡಿದರು.
ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ರಾಷ್ಟ್ರೀಯ ಮಾರುಕಟ್ಟೆ ಪಾಲಿನ ಶೇ 50 ಅನ್ನು ಹೊಂದುವ ಮೂಲಕ ಕರ್ನಾಟಕವನ್ನು ಭಾರತದಲ್ಲಿ ನಂಬರ್ 1 ತಾಣವಾಗಿ ಉಳಿಸಿಕೊಳ್ಳುವುದು ಮತ್ತು ಜಾಗತಿಕ ಮಾರುಕಟ್ಟೆ ಪಾಲಿನ ಶೇ 5 ಅನ್ನು ಹೊಂದುವ ಮೂಲಕ ಕರ್ನಾಟಕವನ್ನು ಬಾಹ್ಯಾಕಾಶ ತಂತ್ರಜ್ಞಾನದ ಜಾಗತಿಕ ತಾಣವಾಗಿಸುವುದು ಸರ್ಕಾರದ ಉದ್ದೇಶ ಎಂದರು.
ಜಾಗತಿಕ ಮತ್ತು ದೇಶೀಯ ಬಾಹ್ಯಾಕಾಶ ವಲಯದಿಂದ ಉದ್ಯೋಗ ಪಡೆಯಬಹುದಾದ ಹೆಚ್ಚು ಕೌಶಲಪೂರ್ಣ ಕಾರ್ಯಪಡೆ ರೂಪಿಸುವುದು, ಕರ್ನಾಟಕದಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ ಕೈಗಾರಿಕೆಗಳ ಒಟ್ಟುಗೂಡುವಿಕೆಗೆ ಪ್ರೇರಕ ಶಕ್ತಿಯಾಗಿ ಕಾರ್ಯ ನಿರ್ವಹಿಸಲು 50 ಸಾವಿರ ಯುವ ವೃತ್ತಿಪರರು, ವಿದ್ಯಾರ್ಥಿಗಳಿಗೆ ತರಬೇತಿ ನೀಡಿಕೌಶಲ ಅಭಿವೃದ್ಧಿಗೆ ಪ್ರೋತ್ಸಾಹ ನೀಡಲಾಗುವುದು ಎಂದು ಹೇಳಿದರು.
ವಿಧಾನಮಂಡಲದ ಚಳಿಗಾಲದ ಅಧಿವೇಶನ ಡಿಸೆಂಬರ್ 8 ರಿಂದ 19 ರವರೆಗೆ ಬೆಳಗಾವಿಯಲ್ಲಿ ನಡೆಯಲಿದೆ. ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಒಟ್ಟು 10 ದಿನ ಅಧಿವೇಶನ ನಡೆಯಲಿದೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಡಿಸೆಂಬರ್ 13ರ ಎರಡನೇ ಶನಿವಾರ ಹಾಗೂ 14ರ ಭಾನುವಾರ ಸರ್ಕಾರಿ ರಜಾದಿನವಾಗಿದ್ದು ಅಂದು ಕಲಾಪ ಇರುವುದಿಲ್ಲ.
* ಜಿಲ್ಲಾ ನ್ಯಾಯಾಂಗ ಮತ್ತು ಹೈಕೋರ್ಟ್‌ಗೆ 36 ಕೋರ್ಟ್ ಮ್ಯಾನೇಜರ್‌ಗಳ ನೇಮಕಕ್ಕೆ ಈಗ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಕೋರ್ಟ್ ಮ್ಯಾನೇಜರ್‌ಗಳ ಸೇವೆ ಕ್ರಮಬದ್ಧಗೊಳಿಸಲು ಕರಡು ನಿಯಮ ಪ್ರಕಟಿಸಲು ಒಪ್ಪಿಗೆ.
* ಕೇಂದ್ರ ಪುರಸ್ಕೃತ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ನಿಗಾ ನಿಯಂತ್ರಣ ಮತ್ತು ಮೇಲ್ವಿಚಾರಣೆಗಾಗಿ ರಾಜ್ಯದ 12003 ದೋಣಿಗಳಿಗೆ ₹43.69 ಕೋಟಿ ವೆಚ್ಚದಲ್ಲಿ ಇಸ್ರೊದ ವಾಣಿಜ್ಯ ಸಂಸ್ಥೆ ಎನ್‌ಎಸ್‌ಐಎಲ್‌ನಿಂದ ದ್ವಿಮುಖ ಸಂಪರ್ಕ ಸಾಧನ ಖರೀದಿಸಲು ಒಪ್ಪಿಗೆ. ಇದಕ್ಕೆ ಕೇಂದ್ರ ಪಾಲು ₹26.21 ಕೋಟಿ. ರಾಜ್ಯ ₹17.48 ಕೋಟಿ ನೀಡಲಿದೆ
* ಬೀದರ್ ಜಿಲ್ಲೆಯ ಭಾಲ್ಕಿ ನಗರಸಭೆಯಾಗಿ ಹಾಗೂ ಕಮಲ ನಗರ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ
* ಮೈಸೂರಿನಲ್ಲಿ ಸರ್ಕಾರಿ ಅತಿಥಿಗೃಹ ನೌಕರರ ವಸತಿ ಗೃಹಗಳ ಆವರಣದಲ್ಲಿ ₹15 ಕೋಟಿ ವೆಚ್ಚದಲ್ಲಿ ಶಾಸಕರು ಮತ್ತು ಸಂಸದರ ಭವನ ನಿರ್ಮಾಣಕ್ಕೆ ಒಪ್ಪಿಗೆ
* ಹಾಸನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ವೈದ್ಯಕೀಯ ಉಪಕರಣಗಳು ಮತ್ತು ಪೀಠೋಪಕರಣಗಳ ಖರೀದಿಗೆ ₹27.92 ಕೋಟಿ ಹಾಗೂ ಕಟ್ಟಡದ ನೆಲ ಮತ್ತು ಮೊದಲ ಮಹಡಿಗೆ ಅವಶ್ಯವಿರುವ ಸೌಕರ್ಯಗಳನ್ನು ಅಳವಡಿಸುವ ಕಾಮಗಾರಿಗೆ ₹21 ಕೋಟಿ ನೀಡಲು ಒಪ್ಪಿಗೆ
* ಲೀಪ್ ಕಾರ್ಯಕ್ರಮದಡಿ ರಕ್ಷಣಾ ತಂತ್ರಜ್ಞಾನ ಮತ್ತು ಕೈಗಾರಿಕೆಗಳಿಗೆ ಉತ್ಕೃಷ್ಟತಾ ಕೇಂದ್ರ ಸ್ಥಾಪಿಸಲು ₹18 ಕೋಟಿ. ಧಾರ್ತಿ ಪ್ರತಿಷ್ಠಾನ ಐಐಟಿ–ಧಾರವಾಡ ಪಾಲುದಾರಿಕೆ ವಹಿಸಲಿವೆ
* ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿತ್ಯವೂ ಸಂಗ್ರಹವಾಗುವ 150 ಟನ್ ಹಸಿ ತ್ಯಾಜ್ಯವನ್ನು ಕಂಪ್ರೆಸ್ಡ್ ಬಯೊ ಗ್ಯಾಸ್ ಘಟಕದ ಮೂಲಕ ಸಂಸ್ಕರಿಸಲು ಭಾರತೀಯ ಅನಿಲ ಪ್ರಾಧಿಕಾರಕ್ಕೆ ತುರುಮುರಿ ತ್ಯಾಜ್ಯ ನಿರ್ವಹಣಾ ಪ್ರದೇಶದಲ್ಲಿ 10 ಎಕರೆ ಜಾಗ
ಸಚಿವ ಸಂಪುಟದ ಮೂರು ಉಪಸಮಿತಿಗಳು ಆರು ತಿಂಗಳ ಅವಧಿ ಮೀರಿದ್ದರೂ ವರದಿ ಸಲ್ಲಿಸಿಲ್ಲ. ಆದಷ್ಟು ಬೇಗ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟ ಸಭೆಯಲ್ಲಿ ಸೂಚಿಸಿದರು. ಸಮಿತಿಗಳು ಯಾವುವು: ಕೋವಿಡ್ ಸಂದರ್ಭದಲ್ಲಿ ಖರೀದಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಮೈಕಲ್ ಡಿ ಕುನ್ಹಾ ನೇತೃತ್ವದ ಆಯೋಗ ಸಲ್ಲಿಸಿರುವ ವರದಿಯ ಶಿಫಾರಸುಗಳ ಪರಾಮರ್ಶೆಗಾಗಿ ರಚಿಸಿದ್ದ ಸಮಿತಿ ರಾಜ್ಯದ ವಿಶ್ವವಿದ್ಯಾಲಯಗಳ ಆರ್ಥಿಕ ಸ್ಥಿತಿಗತಿ ಕುರಿತು ಪರಾಮರ್ಶಿಸಿ ಶಿಫಾರಸು ಮಾಡಲು ರಚಿಸಿದ್ದ ಸಮಿತಿ ಹಾಗೂ ಬೆಂಗಳೂರು–ಮೈಸೂರು ಮೂಲಸೌಕರ್ಯ ಕಾರಿಡಾರ್(ನೈಸ್ ಯೋಜನೆ) ಅನುಷ್ಠಾನದ ಕುರಿತು ಈವರೆಗೆ ಆಗಿರುವ ಪ್ರಗತಿ ಮತ್ತು ಮುಂದೆ ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಪರಾಮರ್ಶೆ ನಡೆಸಬೇಕಾದ ಉಪಸಮಿತಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.