ADVERTISEMENT

ಕರ್ನಾಟಕ ಕಾನೂನು ವಿವಿ ಕುಲಪತಿ ನೇಮಕಾತಿ: ಯುಜಿಸಿ, ಎನ್‌ಇಪಿ ನಿಯಮಾವಳಿಗೆ ಕೊಕ್‌

​ಪ್ರಜಾವಾಣಿ ವಾರ್ತೆ
Published 31 ಜುಲೈ 2022, 20:32 IST
Last Updated 31 ಜುಲೈ 2022, 20:32 IST
   

ಧಾರವಾಡ: ‘ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ನೂತನ ಕುಲಪತಿ ಆಯ್ಕೆಗೆ ಸಂಬಂಧಿಸಿದಂತೆ ಹೊರಡಿಸಿರುವ ಅಧಿಸೂಚನೆಯಲ್ಲಿ ಯುಜಿಸಿ ನಿಯಮಾವಳಿಗಳನ್ನೇ ಗಾಳಿಗೆ ತೂರಲಾಗಿದೆ’ ಎಂಬ ಆರೋಪ ಪ್ರಾಧ್ಯಾಪಕರ ವಲಯದಿಂದ ವ್ಯಕ್ತವಾಗಿದೆ.

ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಪ್ರೊ.ಈಶ್ವರ ಭಟ್ ಅವರು ಜೂನ್ 12ರಂದು ನಿವೃತ್ತರಾದರು. ಹೀಗಾಗಿ ಕುಲಪತಿ ಹುದ್ದೆಗೆ ಜೂನ್ 29ರಂದು ಕಾನೂನು ಇಲಾಖೆ ಕಾರ್ಯದರ್ಶಿ ನೇಮಕಾತಿ ಅಧಿಸೂಚನೆ ಪ್ರಕಟಿಸಿದ್ದಾರೆ. 2018ರ ವಿಶ್ವವಿದ್ಯಾಲಯ ಧನಸಹಾಯ ಆಯೋಗದ(ಯುಜಿಸಿ) ಕಾಯ್ದೆಯಂತೆ,
ಕುಲಪತಿಯಾಗುವವರಿಗೆ ಕೇವಲ ಬೋಧನಾ ಅನುಭವ ಮಾತ್ರವಲ್ಲ, ಆಡಳಿತಾತ್ಮಕ ಅನುಭವ ಇರಬೇಕಾದದ್ದು ಕಡ್ಡಾಯ ಎನ್ನಲಾಗಿದೆ. ಆದರೆ ನೇಮಕಾತಿ ಅಧಿಸೂಚನೆಯಲ್ಲಿ ಈ ಅಂಶವನ್ನೇ ಬಿಟ್ಟಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.

ಅಧಿಸೂಚನೆಯು ಕಾನೂನು ವಿಶ್ವವಿದ್ಯಾಲಯದ 2009 ಹಾಗೂ 2016ರ ತಿದ್ದುಪಡಿ ಕಾಯ್ದೆಯಂತೆ ಹಾಗೂ ಯುಜಿಸಿ 2010ರ ನೇಮಕಾತಿ ನಿಯಮಾವಳಿಯನ್ನು ಒಳಗೊಂಡಿದೆ. ಇದರ ಅನ್ವಯ ಕಾನೂನು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಕನಿಷ್ಠ 10 ವರ್ಷ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸಿರಬೇಕು. ಆಡಳಿತಾತ್ಮಕ ಅನುಭವ ಹೊಂದಿರಬೇಕು ಎಂದಷ್ಟೇ ಇದೆ. ಆದರೆ 2018ರಲ್ಲಿ ಯುಜಿಸಿ ತಿದ್ದುಪಡಿ ತಂದಿದ್ದು, ಶೈಕ್ಷಣಿಕ ನಾಯಕತ್ವ ನಿರ್ವಹಿಸಿದ ದಾಖಲೆಗಳನ್ನು ಅಗತ್ಯವಾಗಿ ಸಲ್ಲಿಸಬೇಕು ಎಂಬ ಅಂಶವನ್ನು ಸೇರಿಸಿದೆ. ಇದೇ ಅಂಶ ನೂತನ ಶಿಕ್ಷಣ ನೀತಿಯಲ್ಲೂ ಇದೆ.

ADVERTISEMENT

ಇದರ ಅನ್ವಯ ಪ್ರಾಧ್ಯಾಪಕರಾಗಿರುವುದರ ಜತೆಗೆ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಡೀನ್, ಕುಲಸಚಿವ, ಮೌಲ್ಯಮಾಪನ ಕುಲಸಚಿವ, ಅಕಾಡೆಮಿಕ್ ಕೌನ್ಸಿಲ್ಸದಸ್ಯ, ಸಿಂಡಿಕೇಟ್‌ ಸದಸ್ಯ, ವಿವಿಧ ಅಕಾಡೆಮಿ ಕೌನ್ಸಿಲ್ ಸದಸ್ಯರಾದವರು ಅರ್ಹರು ಎಂದಿದೆ. ಆದರೆ ಕಾನೂನು ವಿವಿ ಕುಲಪತಿ ನೇಮಕಾತಿಗೆ ಹೊರಡಿಸಿರುವ ಅಧಿಸೂಚನೆ ಮತ್ತು ನೀಡಿರುವ ಜಾಹೀರಾತಿನಲ್ಲಿ ಈ ಅಂಶ ಇಲ್ಲದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಜತೆಗೆ,ಯಾರಿಗೋ ಲಾಭ ಮಾಡಿಕೊಡುವ ಉದ್ದೇಶದಿಂದ ಹಳೇ ನಿಯಮಾವಳಿಯನ್ನೇ ಉಳಿಸಿಕೊಳ್ಳಲಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಪ್ರಾಧ್ಯಾಪಕರೊಬ್ಬರು ಆರೋಪಿಸಿದರು.

ಈಗಾಗಲೇ ನೇಮಕಾತಿಗೆ ಸಂಬಂಧಿಸಿದಂತೆ ರಚಿಸಲಾದ ಶೋಧನಾ ಸಮಿತಿಯಲ್ಲಿ, ನಿಯಮ ಮೀರಿ ವಿಶ್ವ
ವಿದ್ಯಾಲಯದ ಅಧೀನ ಕಾಲೇಜಿನಪ್ರಾಧ್ಯಾಪಕರನ್ನು ಸರ್ಕಾರ ನೇಮಿಸಿರುವ ಕುರಿತು ಆಕ್ಷೇಪಗಳು ವ್ಯಕ್ತವಾಗಿದ್ದವು. ಈ ಕುರಿತು 2022ರ ಜುಲೈ 6 ರಂದು ‘ಪ್ರಜಾವಾಣಿ’ ವಿಶೇಷ ವರದಿ ಪ್ರಕಟಿಸಿತ್ತು.

‘ನೇಮಕಾತಿಗೆ ಸಂಬಂಧಿಸಿದಂತೆ ಆಕ್ಷೇಪ ಸಲ್ಲಿಸಲು ಸಾಮಾನ್ಯವಾಗಿ ನೀಡಬೇಕಾದ 30 ದಿನಗಳ ಕಾಲಾವಕಾಶ ಬದಲು 15 ದಿನ ಮಾತ್ರ ನೀಡಲಾಗಿದೆ. ಇಷ್ಟು ತರಾತುರಿಯಲ್ಲಿ ನೇಮಕಾತಿ ನಡೆಸುತ್ತಿರುವುದರ ಉದ್ದೇಶವಾದರೂ ಏನು’ ಎಂದು ಪ್ರಾಧ್ಯಾಪಕರು ಪ್ರಶ್ನಿಸಿದ್ದಾರೆ.

ನ್ಯಾಯಾಲಯದ ಮೊರೆ ಹೋಗಲು ಸಿದ್ಧತೆ

ಈ ಪ್ರಕರಣಕ್ಕೆ ಇಂಬು ನೀಡುವಂತೆ, ಯುಜಿಸಿ 2018ರ ನಿಯಮಾವಳಿ ಅನುಸರಿಸದ್ದನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್ ಗಂಭೀರಧನ್‌ ಕೆ. ಗಡಾವಿ ಮತ್ತು ಗುಜರಾತ್‌ ರಾಜ್ಯ ಸರ್ಕಾರ ಹಾಗೂ ಇತರರು ಪ್ರಕರಣದಲ್ಲಿ ಕುಲಪತಿ ನೇಮಕಾತಿಯನ್ನೇ ರದ್ದುಗೊಳಿಸಿದೆ. ಜತೆಗೆ ಕುಲಪತಿಯಾಗಿ ಎರಡು ವರ್ಷಗಳ ಕಾಲ ಪಡೆದ ವೇತನವನ್ನು ಮರಳಿ ಪಡೆಯುವಂತೆಯೂ ಗುಜರಾತ್‌ ಸರ್ಕಾರಕ್ಕೆ ಸೂಚಿಸಿತ್ತು.

ಇದೇ ಆಧಾರದಲ್ಲಿ, ಕರ್ನಾಟಕ ವಿವಿ ಕುಲಪತಿ ನೇಮಕಾತಿ ಅಧಿಸೂಚನೆ ರದ್ದುಗೊಳಿಸುವಂತೆ ಕೋರಲು ಹಲವರು ನ್ಯಾಯಾಲಯದ ಮೊರೆ ಹೋಗಲು ಸಿದ್ಧತೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.