
ಬೆಂಗಳೂರು: ರಾಜ್ಯದಲ್ಲಿ ಈ ವರ್ಷ ಬೇಸಿಗೆ ಅವಧಿಯಲ್ಲಿ ವಾಡಿಕೆಗಿಂತ ಅಧಿಕ ತಾಪಮಾನ ವರದಿಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕಲಬುರಗಿ, ಹಾವೇರಿ, ಬಾಗಲಕೋಟೆ, ಶಿವಮೊಗ್ಗ, ಉತ್ತರ ಕನ್ನಡ ಸೇರಿ ಹಲವು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ ಈಗಾಗಲೇ ವಾಡಿಕೆಗಿಂತ ಅಧಿಕವಾಗಿದೆ ಎಂದು ವರದಿಯಾಗುತ್ತಿದೆ. ಬಹುತೇಕ ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶ 35 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿದ್ದರೆ, ಕಲಬುರಗಿಯಲ್ಲಿ 36 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಕೆಲವೆಡೆ ವಾಡಿಕೆಗಿಂತ 3 ಡಿಗ್ರಿ ಸೆಲ್ಸಿಯಸ್‌ವರೆಗೂ ಹೆಚ್ಚು ವರದಿಯಾಗುತ್ತಿದೆ.
ಜಾಗತಿಕ ತಾಪಮಾನ ಏರಿಕೆ, ತೇವಾಂಶ ಕೊರತೆ, ಶುಭ್ರ ಆಕಾಶ, ‘ಲಾ ನಿನಾ’ ಪರಿಣಾಮ (ಉಷ್ಣವಲಯದ ಫೆಸಿಫಿಕ್ ಸಾಗರದಲ್ಲಿ ಮೇಲ್ಮೈ ತಾಪಮಾನ ತಂಪಾಗಿರುವುದು) ಸೇರಿ ವಿವಿಧ ಕಾರಣಗಳಿಂದ ಏಪ್ರಿಲ್ ಮತ್ತು ಮೇಯಲ್ಲಿ ಗರಿಷ್ಠ ತಾಪಮಾನವು ವಾಡಿಕೆಗಿಂತ 4-5 ಡಿಗ್ರಿ ಸೆಲ್ಸಿಯಸ್ ಹೆಚ್ಚಳವಾಗಬಹುದು ಎಂದು ಹವಾಮಾನ ಇಲಾಖೆ ವಿಶ್ಲೇಷಿಸಿದೆ.
‘ಉತ್ತರ ಒಳನಾಡಿನ ಕಲಬುರಗಿ, ಯಾದಗಿರಿ, ಕೊಪ್ಪಳ, ರಾಯಚೂರು, ಬಾಗಲಕೋಟೆ, ಬಳ್ಳಾರಿ ಸೇರಿ ವಿವಿಧ ಜಿಲ್ಲೆಗಳಲ್ಲಿ ಏಪ್ರಿಲ್–ಮೇ ತಿಂಗಳು ಗರಿಷ್ಠ ಉಷ್ಣಾಂಶ 42 ಡಿಗ್ರಿ ಸೆಲ್ಸಿಯಸ್‌ನಿಂದ 45 ಡಿಗ್ರಿ ಸೆಲ್ಸಿಯಸ್ ತಲುಪುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿಯೂ ಉಷ್ಣಾಂಶ ಹೆಚ್ಚಳವಾಗುವ ಸಂಭವವಿದ್ದು, 39 ಡಿಗ್ರಿ ಸೆಲ್ಸಿಯಸ್ ತಲುಪಬಹುದು’ ಎಂದು ಇಲಾಖೆಯ ಹವಾಮಾನ ತಜ್ಞ ಸಿ.ಎಸ್. ಪಾಟೀಲ ತಿಳಿಸಿದರು.
‘ಬೇಸಿಗೆಯಲ್ಲಿ ಬೆಳಿಗ್ಗೆ 11ರಿಂದ ಸಂಜೆ 4ರವರೆಗೆ ಬಿಸಿಲಿನ ತೀವ್ರತೆ ಹೆಚ್ಚಿರುವ ಕಾರಣ, ನೀರನ್ನು ಆಗಾಗ ಕುಡಿಯಬೇಕು. ಸಡಿಲವಾದ ತೆಳ್ಳನೆ ಬಟ್ಟೆಯನ್ನು ಧರಿಸಬೇಕು. ಚಹಾ–ಕಾಫಿ ಬದಲು, ತಂಪು ಪಾನೀಯ ಸೇವಿಸಬೇಕು’ ಎಂದು ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.