ADVERTISEMENT

ವಿಧಾನ ಪರಿಷತ್‌ ಚುನಾವಣೆ | ಏಚರೆಡ್ಡಿ ಸತೀಶ್‌ ಆಸ್ತಿ ₹137 ಕೋಟಿ

ಕಾರುಗಳ ಮೌಲ್ಯವೇ ಕೋಟ್ಯಂತರ ರೂಪಾಯಿ; ಕೊಂಡಯ್ಯ ಅವರ ಬಳಿ ಕಡಿಮೆ ಆಸ್ತಿ!

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2021, 19:45 IST
Last Updated 23 ನವೆಂಬರ್ 2021, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬಳ್ಳಾರಿ: ವಿಧಾನ ಪರಿಷತ್‌ ಚುನಾವಣೆಗೆ ಬಳ್ಳಾರಿ ಮತ್ತು ವಿಜಯನಗರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಸ್ಪರ್ಧಿಸಿರುವ ಬಿಜೆಪಿ ಏಚರೆಡ್ಡಿ ಸತೀಶ್‌ ‘ಭಾರಿ ಕುಳ’ ಎರಡು ಮರ್ಸಿಡಿಸ್‌ ಬೆಂಜ್‌ ಹಾಗೂ ಒಂದು ರೇಂಜ್‌ ರೋವರ್‌ ಕಾರ್‌ ಒಳಗೊಂಡಂತೆ ಏಳು ಐಷಾರಾಮಿ ಕಾರುಗಳಿವೆ. ಸತೀಶ್‌ ಅವರಿಗೆ ಹೋಲಿಸಿದರೆ ಕಾಂಗ್ರೆಸ್‌ನ ಕೊಂಡಯ್ಯ ಸಾಧಾರಣ ಕುಳ!

ಸತೀಶ್‌ ಅವರ ಬಳಿ (ಕುಟುಂಬ ಸದಸ್ಯರ ಹೆಸರಿನಲ್ಲಿರುವ ಆಸ್ತಿಯೂ ಸೇರಿ) ₹ 93.09 ಕೋಟಿ ಮೌಲ್ಯದ ಚರಾಸ್ತಿ ಮತ್ತು ₹43.99 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ. ನಾಮಪತ್ರಗಳ ಜತೆ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಆಸ್ತಿಪಾಸ್ತಿಗೆ ಸಂಬಂಧಿಸಿದ ಪ್ರಮಾಣ ಪತ್ರದಲ್ಲಿ ಈ ವಿವರಗಳನ್ನು ಅವರು ತಿಳಿಸಿದ್ದಾರೆ.

ಸತೀಶ್‌, ಪತ್ನಿ ಪ್ರೀತಿ ಹಾಗೂ ಮಕ್ಕಳಾದ ಕೌಶಿಕ್‌ ಮತ್ತು ಕಾರ್ತಿಕ್‌ ಹೆಸರಿನಲ್ಲಿ ಕೋಟ್ಯಂತರ ಮೌಲ್ಯದ ಸ್ಥಿರಾಸ್ತಿ, ಚರಾಸ್ತಿ ಹಾಗೂ ಚಿನ್ನಾಭರಣ, ವಿವಿಧ ಕಂಪನಿಗಳ ಷೇರುಗಳು ಮತ್ತು ಡಿಬೆಂಚರ್ಸ್‌ ಇರುವುದಾಗಿ ಘೋಷಿಸಿದ್ದಾರೆ. ಸತೀಶ್‌ ಅವರ
ಕೈಯಲ್ಲಿ ₹ 7.02ಲಕ್ಷ, ಪ್ರೀತಿ ಬಳಿ ₹ 86ಸಾವಿರ, ಕೌಶಿಕ್‌ ಕೈಯಲ್ಲಿ ₹ 26ಸಾವಿರ, ಕಾರ್ತಿಕ್‌ ಬಳಿ ₹ 11 ಸಾವಿರ ನಗದಿದೆ. ತಮ್ಮ ಹೆಸರಿನಲ್ಲಿ ವಿವಿಧ ಬ್ಯಾಂಕ್‌ಗಳಲ್ಲಿ ₹ 1.33ಕೋಟಿ, ಪತ್ನಿ ಹೆಸರಿನಲ್ಲಿ ₹ 55.17ಲಕ್ಷ, ಇಬ್ಬರು ಪುತ್ರರ ಹೆಸರಿನಲ್ಲಿ ಒಟ್ಟು ₹ 11.63ಲಕ್ಷ ಠೇವಣಿ ಇರುವುದಾಗಿ ಸತೀಶ್‌ ಹೇಳಿದ್ದಾರೆ.

ADVERTISEMENT

ಇದಲ್ಲದೆ, ಬಿಜೆಪಿ ಅಭ್ಯರ್ಥಿ ₹8.40ಕೋಟಿ, ‍ಪ್ರೀತಿ ₹ 1.68ಕೋಟಿ, ಹಿರಿಯ ಪುತ್ರ ₹ 39.49ಲಕ್ಷ ಮತ್ತು ದ್ವಿತಿಯ ಪುತ್ರ ₹ 35.49ಲಕ್ಷ ಹೂಡಿಕೆ ಮಾಡಿದ್ದಾರೆ. ಜತೆಗೆ, ನಾಲ್ವರು ಕ್ರಮವಾಗಿ ₹ 14.04ಕೋಟಿ, ₹ 17.99ಲಕ್ಷ, ಪುತ್ರ ಕೌಶಿಕ್‌ ₹ 5ಲಕ್ಷ ಸಾಲ ಕೊಟ್ಟಿದ್ದಾರೆ.

ಕೊಂಡಯ್ಯ ಬಳಿ ₹ 11.44 ಕೋಟಿ ಆಸ್ತಿ

ಬಳ್ಳಾರಿ ಮತ್ತು ಬೆಂಗಳೂರಿನಲ್ಲಿ ನಿವೇಶನ ಮತ್ತು ಮನೆ ಸೇರಿ ತಮ್ಮ ಹಾಗೂ ಪತ್ನಿ ಹೆಸರಿನಲ್ಲಿಒಟ್ಟಾರೆ ₹ 7.59 ಕೋಟಿ ಮೌಲ್ಯದ ಚರಾಸ್ತಿ ಹಾಗೂ ₹ 3.85 ಕೋಟಿ ಮೌಲ್ಯದ ಸ್ಥಿರಾಸ್ತಿ ಇರುವುದಾಗಿ ಕಾಂಗ್ರೆಸ್‌ ಅಭ್ಯರ್ಥಿ ಕೊಂಡಯ್ಯ ಹೇಳಿದ್ದಾರೆ.

ಕೊಂಡಯ್ಯ ಅವರ ಬಳಿ ₹ 7ಲಕ್ಷ ನಗದು, ಪತ್ನಿ ಕೆ.ಮೀನಾಕ್ಷಿ ಅವರ ಬಳಿ ₹ 2 ಲಕ್ಷ ನಗದು ಇದೆ. ಅಲ್ಲದೆ, ₹ 33.44 ಲಕ್ಷ ಮೌಲ್ಯದ 760 ಗ್ರಾಂ ಚಿನ್ನ, ₹ 10.62 ಲಕ್ಷ ಬೆಲೆಯ 16.9ಕೆ.ಜಿ. ಬೆಳ್ಳಿ ಮತ್ತು ಪತ್ನಿ ಬಳಿ ₹ 84.49 ಲಕ್ಷ ಬೆಲೆ ಬಾಳುವ 1920 ಗ್ರಾಂ ಚಿನ್ನ, ₹ 3.89 ಲಕ್ಷ ಮೌಲ್ಯದ 6.2 ಕೆ.ಜಿ ಬೆಳ್ಳಿ ಇದೆ.

₹ 5. 19 ಲಕ್ಷದ ಅಂಬಾಸಿಡರ್‌ ಕಾರ್‌ ಹಾಗೂ ಪತ್ನಿಯ ಹೆಸರಲ್ಲಿ ₹ 40.76 ಲಕ್ಷದ ಫಾರ್ಚುನರ್‌ ಕಾರ್‌ ಇದೆ ಎಂದು ಪ್ರಮಾಣ ಪತ್ರದಲ್ಲಿ ವಿವರಿಸಲಾಗಿದೆ. ಇದಲ್ಲದೆ, ಬ್ಯಾಂಕುಗಳಲ್ಲಿ ಸಾಲವೂ ಇದೆ ಎಂದು ಅವರು ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.