ADVERTISEMENT

ಬಜೆಟ್‌ 2019: ಮತ ಫಸಲಿಗಾಗಿ ಕುಮಾರ ಬಿತ್ತನೆ

ಪ್ರವೀಣ ಕುಲಕರ್ಣಿ
Published 9 ಫೆಬ್ರುವರಿ 2019, 1:26 IST
Last Updated 9 ಫೆಬ್ರುವರಿ 2019, 1:26 IST
   

ಬೆಂಗಳೂರು: ಬರಲಿರುವ ‘ಚುನಾವಣಾ ಜಾತ್ರೆ’ಯಲ್ಲಿ ‘ಕೈ–ದಳ’ದ ಬಲ ಹೆಚ್ಚಿಸಿಕೊಳ್ಳಲು ಅಣಿಯಾದಂತಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ಭಾರೀ ರಾಜಕೀಯ ಅನಿಶ್ಚಿತತೆಯ ಮಧ್ಯೆಯೂ ಮಂಡಿಸಿದ ಬಜೆಟ್‌ನಲ್ಲಿ ಸರ್ವರ ‘ಹಿತ’ ಬಯಸುವ, ಮುನಿದವರನ್ನೂ ತೃಪ್ತಿಪಡಿಸುವ ಜಾಣ ‘ಲೆಕ್ಕಾಚಾರ’ದ ಕಸರತ್ತು ನಡೆಸಿ ಇರುವ ಸಂಪನ್ಮೂಲದಲ್ಲೇ ಎಲ್ಲರಿಗೂ ಪಾಲು ಕೊಟ್ಟಿದ್ದಾರೆ.

ಜಾತ್ರೆಯ ಸಮಯದಲ್ಲಿ ದೇವಳದ ಅಷ್ಟ ದಿಕ್ಕುಗಳಿಗೂ ‘ಚರಪು’ (ಪ್ರಸಾದ) ಹಾಕುತ್ತಾರಲ್ಲ? ಹಾಗೇ ಎಲ್ಲ ಧರ್ಮ, ಜಾತಿ, ಸಮುದಾಯ ಹಾಗೂ ಪ್ರದೇಶಗಳ ಜನರಿಗೂ ಬಜೆಟ್‌ನ ‘ಪ್ರಸಾದ’ವನ್ನು ಹಂಚುವಲ್ಲಿ ನೈಪುಣ್ಯತೆಯನ್ನೂ ತೋರಿದ್ದಾರೆ.

ಹಾಗೆ ಹಂಚುವಾಗ ‘ಗರ್ಭಗುಡಿ’ಯಲ್ಲಿ (ರೈತ, ಮಹಿಳೆ, ವಿದ್ಯಾರ್ಥಿ ಹಾಗೂ ತಳ ಸಮುದಾಯ) ‘ಚರಪು’ ತುಸು ಹೆಚ್ಚೇ ಬಿದ್ದಿದೆ. ಸಹಜವಾಗಿಯೇ ಮುಂಬರುವ ‘ಚುನಾವಣಾ ಜಾತ್ರೆ’ಯ ಛಾಪು ಬಜೆಟ್‌ನಲ್ಲಿ ಎದ್ದು ಕಾಣುತ್ತಿದೆ. ಕಳೆದ ವಾರವಷ್ಟೇ ಮಂಡನೆಯಾದ ಕೇಂದ್ರದ ಬಜೆಟ್‌ನ ‘ಪ್ರಭಾವ’ವನ್ನು ಕುಗ್ಗಿಸುವ ಇಲ್ಲವೆ ಮರೆಮಾಚಿಸುವ ಕಸರತ್ತು ಜೋರಾಗಿ ನಡೆದಿರುವುದು ಸ್ಫಟಿಕ ಸ್ಪಷ್ಟ.

ADVERTISEMENT

‘ನೇಗಿಲ ಯೋಗಿಯ ಹೆಗಲಿಗೆ ಹೆಗಲು ಕೊಡುವ, ನಿರುದ್ಯೋಗಿಗಳಿಗೆ ಅವಕಾಶದ ಬಾಗಿಲು ತೆರೆಯುವ, ದುರ್ಬಲರಿಗೆ ಭದ್ರತೆ ಭಾವ ಮೂಡಿಸುವ ಇಂಗಿತ’ ಬಜೆಟ್‌ನ ಉದ್ದಕ್ಕೂ ಎದ್ದು ಕಾಣುತ್ತದೆ. ಬರ ಪರಿಸ್ಥಿತಿಯಿಂದ ಕಂಗೆಟ್ಟಿರುವ ಕೃಷಿಕರ ಮೇಲೆ ಯೋಜನೆಗಳ ಮಳೆಯನ್ನೇ ಸುರಿಸಿಬಿಟ್ಟಿರುವ ಮುಖ್ಯಮಂತ್ರಿ, ‘ಮತ ಬಿತ್ತನೆ’ಗೆ ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ. ಈ ಕಾರಣದಿಂದಾಗಿ ಬಜೆಟ್‌ನ ಬಹುದೊಡ್ಡ ಬಾಬತ್ತು ಕೃಷಿ ವಲಯಕ್ಕೇ ಸಂದಿದೆ.

ಶೂನ್ಯ ಬಂಡವಾಳ ಹಾಗೂ ಸಾವಯವ ಕೃಷಿ ವಿಧಾನಗಳಿಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ‘ರೈತಸಿರಿ’ ಯೋಜನೆಯನ್ನೂ ಘೋಷಿಸಲಾಗಿದೆ. ಕುಮಾರಸ್ವಾಮಿಯವರ ನೆಚ್ಚಿನ ಇಸ್ರೇಲ್‌ ಮಾದರಿ ಕೃಷಿಗೆ ದೊಡ್ಡ ಮೊತ್ತದ ಅನುದಾನವನ್ನು ಒದಗಿಸಿ ಮಮತೆ ಮೆರೆಯಲಾಗಿದೆ.

ಕೇರಳದ ಮಾದರಿಯಲ್ಲಿ ಸಾಲ ಪರಿಹಾರ ಆಯೋಗ ಸ್ಥಾಪನೆಗೆ ಒಲವು ತೋರಲಾಗಿದ್ದು, ಬೆಳೆದ ಬೆಳೆಗೆ ಸೂಕ್ತ ಬೆಲೆ ಖಾತ್ರಿಗೊಳಿಸಲು ‘ರೈತ ಕಣಜ’, ‘ಬೆಲೆ ಕೊರತೆ ಪಾವತಿ’ ಯೋಜನೆಗಳ ಪ್ರಸ್ತಾವ ಮಾಡಲಾಗಿದೆ. ಆಭರಣದ ಮೇಲೆ ಶೇ 3ರ ಬಡ್ಡಿದರದಲ್ಲಿ ಸಾಲ ನೀಡುವಂತಹ ‘ಗೃಹಲಕ್ಷ್ಮಿ’ ಯೋಜನೆ ಕೂಡ ಗಮನ ಸೆಳೆಯುವಂತಿದೆ.

ಚುನಾವಣೆಗೂ ಮುನ್ನ ನೀರಾವರಿ ಕ್ಷೇತ್ರಕ್ಕೆ ಐದು ವರ್ಷಗಳಲ್ಲಿ ₹ 1.5 ಲಕ್ಷ ಕೋಟಿ ಅನುದಾನ ಒದಗಿಸುವ ಭರವಸೆ ನೀಡಿದ್ದ ಕುಮಾರಸ್ವಾಮಿ, ಮಹತ್ವಾಕಾಂಕ್ಷಿ ಕೃಷ್ಣಾ ಮೇಲ್ದಂಡೆ ಹಾಗೂ ಎತ್ತಿನಹೊಳೆ ಯೋಜನೆಗಳನ್ನು ಕಡೆಗಣಿಸಿರುವುದು ಯಾಕೋ?

‘ಜಾತಿ ಮತದ ಗುಹೆಗಳಿಂದ ಹೊರಬನ್ನಿರಿ ಬಯಲಿಗೆ, ಕೃತಕ ತಿಮಿರದಾಳದಿಂದ ವಿಸ್ತಾರದ ಬೆಳಕಿಗೆ’ ಎಂಬ ಕವಿವಾಣಿಯನ್ನು ಸ್ಮರಿಸುತ್ತಲೇ ಧರ್ಮ, ಜಾತಿಗಳನ್ನು ಹುಡುಕಿ, ಹುಡುಕಿ ಅನುದಾನವನ್ನು ಹಂಚಿಕೆ ಮಾಡಿದ್ದಾರೆ ಕುಮಾರಸ್ವಾಮಿ. ಈ ಸಲದ ಬಜೆಟ್‌ ಸಿದ್ದರಾಮಯ್ಯನವರ ಪ್ರಭಾವಳಿಯಿಂದ ಸಂಪೂರ್ಣ ಹೊರಬಂದಂತಿದೆ. ಅಹಿಂದದ ಸೀಮಿತ ವ್ಯಾಪ್ತಿಯನ್ನು ವಿಸ್ತಾರವಾಗಿ ಹಿಗ್ಗಿಸಿರುವ ಅವರು, ‘ಜಿಲೇಬಿ’ಯತ್ತಲೂ (ಒಕ್ಕಲಿಗ, ಲಿಂಗಾಯತ, ಬ್ರಾಹ್ಮಣ) ಗಮನಹರಿಸದೇ ಬಿಟ್ಟಿಲ್ಲ. ಮತ ಬಿಡುವ ಎಲ್ಲ ಗಿಡಗಳ ‘ಫಸಲು’ ದೋಸ್ತಿಗಳ ಬುಟ್ಟಿಯನ್ನು ತುಂಬಿಸಬೇಕು ಎನ್ನುವ ಇರಾದೆ ಅದು. ಅದಕ್ಕಾಗಿ ಉರುಳಿಸಲಾದ ಆರ್ಥಿಕ ದಾಳಗಳಂತೂ ಎದುರಾಳಿಗಳನ್ನು ವಿಚಲಿತಗೊಳಿಸುವಂತಿವೆ.

ಶಿವಕುಮಾರ ಸ್ವಾಮೀಜಿ ಅವರ ಹುಟ್ಟೂರಿನ ಅಭಿವೃದ್ಧಿಗೆ ತೋರಿದಂತಹ ಕಾಳಜಿಯನ್ನೇ ಬಾಲಗಂಗಾಧರನಾಥ ಸ್ವಾಮೀಜಿ ಅವರ ಜನ್ಮಸ್ಥಳ ಅಭಿವೃದ್ಧಿಗೂ ತೋರಲಾಗಿದೆ. ಪ್ರತಿಷ್ಠಿತ ಮಠಗಳ ಜತೆಗೆ ಸಮುದಾಯಗಳ ನಡುವೆ ಅವಿತುಕೊಂಡಿದ್ದ ಸುಮಾರು 40 ಗುರುಪೀಠಗಳನ್ನೆಲ್ಲ ಶೋಧಿಸಿ, ‘ಇಷ್ಟು ದಿನ ಎಲ್ಲಿದ್ದಿರಿ? ಇಗೋ ತೆಗೆದುಕೊಳ್ಳಿ, ಅಭಿವೃದ್ಧಿಗಾಗಿ ನಮ್ಮ ಕಾಣಿಕೆ’ ಎಂದು ಅನುದಾನ ಕೊಡಲಾಗಿದೆ. ಬಿಜೆಪಿ, ಈ ಹಿಂದೆ ಅಧಿಕಾರದಲ್ಲಿದ್ದಾಗ ಮಠಗಳನ್ನು ಹುಡುಕಿಕೊಂಡು ಹೋಗಿ ಮಾಡಿದ ಕೆಲಸವನ್ನೇ ಇನ್ನೂ ವಿಸ್ತೃತವಾಗಿ ಮಾಡಿರುವ ದೋಸ್ತಿ ಸರ್ಕಾರ, ತಿರುಮಂತ್ರ ಹಾಕಿದೆ.

ಹೆಳವ, ಕೊರಮ, ಈಡಿಗ, ಪಿಂಜಾರ, ಮೊಗವೀರ, ತಿಗಳರಂತಹ ಸುಮಾರು 30 ತಳ ಸಮುದಾಯಗಳಿಗೂ ತುಪ್ಪ ಸವರಿರುವ ಮುಖ್ಯಮಂತ್ರಿ, ಸಿಕ್ಕ ‘ಪ್ರಸಾದ’ದಲ್ಲೇ ಹೊಟ್ಟೆ ತುಂಬಿಸಿಕೊಳ್ಳುವಂತೆ ಸಮಾಧಾನ ಬೇರೆ ಹೇಳಿದ್ದಾರೆ. ಹೌದು, ಸರ್ವರನ್ನೂ ಸಂತುಷ್ಟಿಗೊಳಿಸುವ ಭರದಲ್ಲಿ ದೂರದರ್ಶಿತ್ವದ ನೋಟವೇ ಕಾಣೆಯಾಗಿಬಿಟ್ಟಿದೆ. ಹೀಗಾಗಿ ದೂರಗಾಮಿ ಪರಿಣಾಮ ಬೀರುವಂತಹ, ಸಾರ್ವಜನಿಕ ಆಸ್ತಿ ಸೃಷ್ಟಿಸುವಂತಹ ಯೋಜನೆಗಳು ಬಜೆಟ್‌ನಲ್ಲಿ ಗೈರಾಗಿವೆ.

ಜರಡಿ ಮೇಲೆ ಬಿದ್ದ ನೀರಿನಂತೆ ಬೀದರ್‌ನಿಂದ ಚಾಮರಾಜನಗರವರೆಗೆ ರಾಜ್ಯದ ಎಲ್ಲ ಪ್ರದೇಶಗಳಿಗೂ ಅನುದಾನದ ಸಿಂಚನವಾಗಿದೆ. ಹುಬ್ಬಳ್ಳಿ–ಧಾರವಾಡ, ಮೈಸೂರು, ಮಂಗಳೂರು ನಗರಗಳ ನಿವಾಸಿಗಳಲ್ಲೂ ಮೆಟ್ರೊ ರೈಲಿನಲ್ಲಿ ಓಡಾಡುವಂತಹ ಕನಸನ್ನು ಬಿತ್ತಲಾಗಿದೆ.

ರಟ್ಟೀಹಳ್ಳಿ, ಹಲಗೂರು, ಕೊಮ್ಮನಾಳು ತರಹದ ಮೂಲೆ, ಮೂಲೆಯ ಹಳ್ಳಿಗಳಿಗೂ ಬಜೆಟ್‌ ಹಣ ಹರಿದುಹೋಗಿದೆ. ಬಿ.ಎಸ್‌. ಯಡಿಯೂರಪ್ಪ ಪ್ರತಿನಿಧಿಸುವ ಶಿಕಾರಿಪುರ ಹಾಗೂ ಅದರ ಸುತ್ತಲಿನ ಪ್ರದೇಶಗಳ ಕುಡಿಯುವ ನೀರಿನ ಯೋಜನೆಗೆ ₹ 250 ಕೋಟಿ ಅನುದಾನ ನೀಡಿದ್ದಾರೆ.

ಕಳೆದ ಸಲ ಮುಖ್ಯಮಂತ್ರಿಯ ತವರು ಜಿಲ್ಲೆಗೆ ಹೆಚ್ಚಿನ ಅನುದಾನ ಘೋಷಣೆಯಾಗಿದ್ದರಿಂದ ‘ಹಾಸನ ಬಜೆಟ್‌’ ಎಂಬ ಕುಹಕದ ಮಾತು ಕೇಳಿಬಂದಿತ್ತು. ಈ ಸಲ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅಲ್ಲದಿದ್ದರೂ ಹಾಸನ ಹಾಗೂ ರಾಮನಗರ ಜಿಲ್ಲೆಗಳಿಗೆ ಬೇರೆ ಭಾಗಗಳಿಗಿಂತಲೂ ಹೆಚ್ಚಿನ ಪ್ರಮಾಣದಲ್ಲೇ ಅನುದಾನ ಸಂದಾಯವಾಗಿದೆ. ಸಿದ್ದರಾಮಯ್ಯ ಪ್ರತಿನಿಧಿಸುವ ಬಾದಾಮಿ ಕ್ಷೇತ್ರಕ್ಕೆ ₹ 25 ಕೋಟಿ ‘ಕಾಣಿಕೆ’.

ಜಿಎಸ್‌ಟಿ ರಾಜ್ಯಭಾರದ ಕಾರಣ ತೆರಿಗೆ ಹೆಚ್ಚಿಸಲು ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಆಸ್ಪದವಿಲ್ಲ. ಇನ್ನೂ ರಾಜ್ಯದ ಪರಿಧಿಯೊಳಗಿರುವ ಬಿಯರ್‌ನ ತೆರಿಗೆಯನ್ನು ಹೆಚ್ಚಿಸಿದ್ದಾರೆ. ಆದರೆ, ಅಪಾರ ಲಾಭ ತರುವ ವಿಸ್ಕಿ, ರಮ್‌, ಬ್ರಾಂಡಿಯಂತಹ ಐಎಂಎಫ್‌ಎಲ್‌(ಭಾರತೀಯ ತಯಾರಿಕೆ ಮದ್ಯ) ಮೇಲೆ ಯಾವುದೇ ತೆರಿಗೆ ಹೇರದೆ ‘ಮದ್ಯ ಪ್ರಿಯರ’ ಮತ್ತಿಗೂ ಕಾರಣರಾಗಿದ್ದಾರೆ.

‘ಹಂಚಿಕೆ’ಗೆ ಬೇಕಾದ ಕೊರತೆಯನ್ನು ₹48 ಸಾವಿರ ಕೋಟಿ ಭರ್ಜರಿ ಸಾಲದ ಮೂಲಕ ತುಂಬಿಕೊಳ್ಳಲು ನಿರ್ಧರಿಸಿದ್ದಾರೆ. ಹೀಗಾಗಿ ಸಾಲದ ಹೊರೆ ಕಳೆದ ವರ್ಷಕ್ಕಿಂತಲೂ ಹೆಚ್ಚಾಗಿದೆ. ಸಾಲದ ಲೆಕ್ಕಾಚಾರಕ್ಕಿಂತಲೂ ಓಟಿನ ಅಂಕಗಣಿತವೇ ಈಗಿನ ಬಜೆಟ್‌ಗೆ ಮುಖ್ಯವಾದಂತಿದೆ.

ಬಿಯರ್‌ಗೆ ‘ತೆರಿಗೆ’ ಚಿಯರ್ಸ್‌

ಸಂಪನ್ಮೂಲದ ಕ್ರೋಡೀಕರಣಕ್ಕೆ ಮದ್ಯದ ಮೇಲಿನ ಸುಂಕ ಹೆಚ್ಚಿಸುವ ರೂಢಿಗತ ದಾರಿಯನ್ನು ಬಿಟ್ಟಿರುವ ಕುಮಾರಸ್ವಾಮಿ, ಬಿಯರ್ ಮೇಲೆ ತೆರಿಗೆಯ ಬರೆ ಹಾಕಿದ್ದು, ತಣ್ಣಗೆ ಕುಳಿತು ಕುಡಿಯುವವರಿಗೆ ಮತ್ತೇರದಂತೆ ಮಾಡಿದ್ದಾರೆ.

ಬಿಯರ್‌ ಮೇಲಿನ ಹೆಚ್ಚುವರಿ ಸುಂಕವನ್ನು ಶೇ 150ರಿಂದ ಶೇ 175ಕ್ಕೆ, ಡ್ರಾಟ್ ಬಿಯರ್ ಮೇಲಿನ ಸುಂಕವನ್ನು ಶೇ 115ರಿಂದ ಶೇ 150ಕ್ಕೆ, ಮೈಕ್ರೋ ಬ್ರಿವರಿಯಲ್ಲಿ ತಯಾರಾಗುವ ಬಿಯರ್ ಮೇಲಿನ ಸುಂಕವನ್ನು ಪ್ರತಿ ಬಲ್ಕ್‌ ಲೀಟರ್‌ಗೆ ₹5ರಿಂದ ₹10ಕ್ಕೆ ಏರಿಸಿದ್ದಾರೆ.

ಬಜೆಟ್‌ ವೈಶಿಷ್ಟ್ಯಗಳು

* ಸಾಲ ಮನ್ನಾಕ್ಕೆ 12,650 ಕೋಟಿ

* ಶೇ 3ರ ಬಡ್ಡಿ ದರದಲ್ಲಿ ಸಣ್ಣ ರೈತರಿಗೆ ‘ಗೃಹಲಕ್ಷ್ಮಿ’ ಸಾಲ

* ಅಂಗನವಾಡಿ ಕೆಲಸಗಾರರಿಗೆ ₹ 500/ ₹ 250 ಹೆಚ್ಚಳ

* ಆಶಾ ಕಾರ್ಯಕರ್ತೆಯರಿಗೆ ₹ 500 ಹೆಚ್ಚಳ

* ರೈತಕಣಜ ಯೋಜನೆಗೆ ₹ 510 ಕೋಟಿ

* ಕಾಲೇಜು ಅಧ್ಯಾಪಕರಿಗೆ ಏಳನೇ ವೇತನ ಆಯೋಗ ಅನ್ವಯ

* ಕೇಂದ್ರೀಯ ವಿದ್ಯಾಲಯ ಮಾದರಿಯಲ್ಲಿ ಸಾವಿರ ಪಬ್ಲಿಕ್‌ ಶಾಲೆ

* ಹಾಲಿನ ಪ್ರೋತ್ಸಾಹಧನ ₹ 6ಕ್ಕೆ ಹೆಚ್ಚಳ

* ಚೇಳೂರು, ಕಳಸ, ತೇರದಾಳ, ಹಾರೋಹಳ್ಳಿ ಹೊಸ ತಾಲ್ಲೂಕು

* ಎಲ್ಲ ಇಲಾಖೆಗಳ ಸಿ ಮತ್ತು ಡಿ ನೌಕರರಿಗೆ ಕೌನ್ಸೆಲಿಂಗ್‌ ಮೂಲಕ ವರ್ಗಾವಣೆ

* ಮುಖ್ಯಮಂತ್ರಿ ಮಾತೃಶ್ರೀ ಯೋಜನೆ ಮೊತ್ತ ₹ 2000ಕ್ಕೆ ಏರಿಕೆ

* ಸವಿತಾ ಸಮಾಜ ಅಭಿವೃದ್ಧಿ ನಿಗಮ ಸ್ಥಾಪನೆ

* ಕಾರ್ಮಿಕರಿಗೆ ₹ 50 ಸಾವಿರವರೆಗೆ ಬಡ್ಡಿರಹಿತ ಸಾಲ

* ಶಾಸಕ ಪ್ರದೇಶಾಭಿವೃದ್ಧಿ ನಿಧಿ ತಲಾ ₹ 3 ಕೋಟಿಗೆ ಏರಿಕೆ

* ಹುಬ್ಬಳ್ಳಿ–ಧಾರವಾಡ, ಮೈಸೂರು, ಮಂಗಳೂರಿನಲ್ಲಿ ಮೆಟ್ರೊ ಯೋಜನೆಗೆ ಅಧ್ಯಯನ

* ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಸಾವಿರ ಪಿಯು ಆರಂಭ

* ಬೆಳಗಾವಿ ತಾಂತ್ರಿಕ ವಿಶ್ವವಿದ್ಯಾಲಯ ವಿಭಜಿಸಿ, ಹಾಸನದಲ್ಲಿ ಹೊಸ ವಿ.ವಿ

* ಆಧಾರ್‌ ಸಂಖ್ಯೆ ಆಧಾರಿತ ಡಿಜಿಟಲ್‌ ಅಂಕಪಟ್ಟಿ

* ಮಾನಸ ಸರೋವರ ಯಾತ್ರಿಗಳ ಸಹಾಯಧನ ₹ 30 ಸಾವಿರಕ್ಕೆ ಏರಿಕೆ

* ಜಲಾಮೃತ ಯೋಜನೆಗೆ ₹ 500 ಕೋಟಿ

* ಗ್ರಾಮಗಳ ತ್ಯಾಜ್ಯ ನಿರ್ವಹಣೆಗೆ ಸ್ವಚ್ಛಮೇವ ಜಯತೆ ಯೋಜನೆ

* ಇದು ಚುನಾವಣಾ ಬಜೆಟ್‌ ಅಲ್ಲ. ಯುವಜನರಿಗೆ ಉದ್ಯೋಗ ಸೃಷ್ಟಿಸುವ, ಮಹಿಳೆಯರ ಬಗ್ಗೆ ಹೆಚ್ಚು ಕಾಳಜಿ ಹೊಂದಿರುವ ಹಾಗೂ ಎಲ್ಲ ವರ್ಗದ ಜನರಿಗೆ ಆದ್ಯತೆ ನೀಡಿರುವ ಬಜೆಟ್

–ಎಚ್‌.ಡಿ. ಕುಮಾರಸ್ವಾಮಿ,ಮುಖ್ಯಮಂತ್ರಿ

* ಕುಮಾರಸ್ವಾಮಿ ಕ್ರಾಂತಿಕಾರಿ ಬಜೆಟ್‌ ಮಂಡಿಸುತ್ತಾರೆ ಎಂದು ಜನ ನಿರೀಕ್ಷಿಸಿದ್ದರು. ಆದರೆ, ದೋಸ್ತಿ ಸರ್ಕಾರ ಕಣ್ಣಿಗೆ ಮಣ್ಣೆರಚಿದೆ. ರೈತ ಸಮುದಾಯಕ್ಕೆ ಮೋಸ ಮಾಡಿದೆ.

ಬಿ.ಎಸ್. ಯಡಿಯೂರಪ್ಪ,ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

* ಒಟ್ಟಾರೆ ಉತ್ತಮ ಬಜೆಟ್‌. ಕನಿಷ್ಠ ಸಾಮಾನ್ಯ ಕಾರ್ಯಕ್ರಮದ ಆಧಾರದಲ್ಲಿ ಬಜೆಟ್‌ ಮಂಡನೆಯಾಗಿದೆ.

ಸಿದ್ದರಾಮಯ್ಯಸಮನ್ವಯ ಸಮಿತಿ ಅಧ್ಯಕ್ಷ

* ಇವನ್ನೂ ಓದಿ...

*ಸಣ್ಣ ನೀರಾವರಿ, ಅಂತರ್ಜಲ ವೃದ್ಧಿಗೆ ಆದ್ಯತೆ

* ‘ಉಕ್ಕುವ ಹಾಲಿಗೆ ನೀರು ಚಿಮುಕಿಸಿದಂತೆ’

*ಅನ್ನದಾತನಿಗೆ ಹತ್ತಾರು ಯೋಜನೆ, ರಾಜ್ಯದಲ್ಲಿ ಪ್ರತ್ಯೇಕ ಬೆಳೆ ವಿಮೆ ಯೋಜನೆ

*ಬಜೆಟ್‌: ಯಾರು ಏನಂತಾರೆ?

*ಉದ್ಯಮ ವಲಯಕ್ಕೆ ಉತ್ತೇಜಕ ಬುತ್ತಿ

*ಬಜೆಟ್: ಪರಿಶಿಷ್ಟ ವರ್ಗಕ್ಕೆ ಭರ್ಜರಿ ಕೊಡುಗೆ

*ಸರ್ಕಾರ ಜನರ ಕಣ್ಣಿಗೆ ಮಣ್ಣೆರಚಿದೆ: ಯಡಿಯೂರಪ್ಪ

*ಸಾಲ ಮನ್ನಾಕ್ಕೆ ಇನ್ನೂ ಹಣ ಕೊಡುವೆ: ಕುಮಾರಸ್ವಾಮಿ

*ಬೆಂಗಳೂರೇ ಮೊದಲು; ಉಳಿದವು ನಂತರ...

*ಪ್ರತಿಭಟನೆ ಮಧ್ಯೆಯೇ ಬಜೆಟ್ ಭಾಷಣ

*ಬಜೆಟ್‌ನಲ್ಲಿ ಜಿಲ್ಲಾವಾರು ಹಂಚಿಕೆ; ಸಮತೋಲನದ ಸರ್ಕಸ್

*ಬರ ಪರಿಸ್ಥಿತಿ: ಆರ್ಥಿಕ ವೃದ್ಧಿ ದರ ಕುಸಿತ

*ಮತ ಫಸಲಿಗಾಗಿ ಕುಮಾರ ಬಿತ್ತನೆ

*ವಿಶ್ವವಿಖ್ಯಾತ ತಾಣವಾಗಿ ಬಾದಾಮಿ ಅಭಿವೃದ್ಧಿ

*ಸಹಸ್ರ ಶಾಲೆಗಳ ಸ್ಥಾಪನೆ

*ಸ್ವಾಮೀಜಿ ಊರುಗಳಲ್ಲಿ ಸಾಂಸ್ಕೃತಿಕ ಕೇಂದ್ರಗಳು

*ಹೊಸ ಕ್ರೀಡಾ ವಸತಿ ನಿಲಯಗಳ ಘೋಷಣೆ

*ಆರೋಗ್ಯ ಮತ್ತು ಕುಟುಂಬ ಕಲ್ಯಾಣಕ್ಕೆ ಆದ್ಯತೆ

*‘ಮಾತೃಶ್ರೀ’ ಯೋಜನೆ ಸಹಾಯಧನ ಹೆಚ್ಚಳ

*ಆನ್‌ಲೈನ್‌ ಮೂಲಕ ಸಿಇಟಿ, ವಿದ್ಯಾರ್ಥಿಗಳಿಗೆ ಡಿಜಿಟಲ್‌ ಅಂಕಪಟ್ಟಿ

*ಬಜೆಟ್‌ನಲ್ಲಿ ಮಠಮಾನ್ಯಗಳ ತೃಪ್ತಿಪಡಿಸುವ ಯತ್ನ

*ಬಜೆಟ್‌: ಯಾರು ಏನಂತಾರೆ?

*ಚಲನಶೀಲ ಬೆಂಗಳೂರಿಗೆ ‘ಮತ್ತೊಂದು ಕಾವೇರಿ’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.