
ಸಿದ್ದಲಿಂಗ ರೆಡ್ಡಿ, ರಾಜೇಶ್
ಶಿವಮೊಗ್ಗ: ಕಚೇರಿಗೆ ಬಾಡಿಗೆ ಬಿಟ್ಡಿದ್ದ ವಾಹನದ ಬಾಡಿಗೆ ಹಣ ನೀಡಲು ₹40,000 ಲಂಚ ಪಡೆಯುವಾಗ ಇಲ್ಲಿನ ರಾಷ್ಟ್ರೀಯ ಹೆದ್ದಾರಿ -206 ರ ವಿಶೇಷ ಭೂಸ್ವಾಧೀನಾಧಿಕಾರಿಯೂ ಆದ ಹಿರಿಯ ಕೆಎಎಸ್ ಅಧಿಕಾರಿ ಸಿದ್ಧಲಿಂಗ ರೆಡ್ಡಿ ಹಾಗೂ ಮಧ್ಯವರ್ತಿ, ಹೊಳಲೂರು ಗ್ರಾಮ ಪಂಚಾಯ್ತಿ ಗ್ರಾಮ ಸಹಾಯಕ ರಾಜೇಶ್ ಶನಿವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ತಾಲ್ಲೂಕಿನ ಓತಿಘಟ್ಟ ಗ್ರಾಮದ ಚಾಲಕ ವಿ.ಕೇಶವಮೂರ್ತಿ ತಮ್ಮ ಮಾರುತಿ ಎರ್ಟಿಗಾ ಕಾರನ್ನು ರಾಷ್ಟ್ರೀಯ ಹೆದ್ದಾರಿ ಭೂಸ್ವಾಧೀನಾಧಿಕಾರಿ ಕಚೇರಿಗೆ ಕಳೆದ ಎರಡು ವರ್ಷಗಳಿಂದ ಬಾಡಿಗೆಗೆ ಬಿಟ್ಟಿದ್ದರು. ಪ್ರತೀ ತಿಂಗಳು ಬಾಡಿಗೆ ಹಣವನ್ನು ಚೆಕ್ ಮೂಲಕ ಪಡೆಯುತ್ತಿದ್ದರು. ಕೇಶವಮೂರ್ತಿ ಅವರಿಗೆ ಕಳೆದ ನವೆಂಬರ್ ತಿಂಗಳಿಂದ ಬಾಡಿಗೆ ಬಾಕಿ ಉಳಿಸಿಕೊಂಡಿದ್ದು, ಅದನ್ನು ಪಾವತಿಸಲು ಸಿದ್ಧಲಿಂಗರಡ್ಡಿ ₹40,000 ಲಂಚ ನೀಡಲು ರಾಜೇಶ್ ಮೂಲಕ ಬೇಡಿಕೆ ಇಟ್ಡಿದ್ದರು. ಹೀಗಾಗಿ ಕೇಶವಮೂರ್ತಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು ಎಂದು ತಿಳಿದುಬಂದಿದೆ.
ಶಿವಮೊಗ್ಗದ ನೆಹರೂ ಕ್ರೀಡಾಂಗಣದ ಬಳಿ ರಾಜೇಶ್ ಸಂಜೆ ಲಂಚದ ಹಣ ಪಡೆಯುವಾಗ ದಾಳಿ ನಡೆಸಿದ ಲೋಕಾಯುಕ್ತ ಡಿವೈಎಸ್ಪಿ ಬಿ.ಪಿ.ಚಂದ್ರಶೇಖರ ನೇತೃತ್ವದ ತಂಡ ಆರೋಪಿಗಳಾದ ಸಿದ್ಧಲಿಂಗರೆಡ್ಡಿ ಹಾಗೂ ರಾಜೇಶ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಂಧಿಸಿದ್ದಾರೆ.
ಶಿವಮೊಗ್ಗದ ಹೆಚ್ಚುವರಿ ಜಿಲ್ಲಾಧಿಕಾರಿ ಆಗಿದ್ದ ಸಿದ್ಧಲಿಂಗ ರೆಡ್ಡಿ ಈಚೆಗಷ್ಟೇ ರಾಷ್ಟ್ರೀಯ ಹೆದ್ದಾರಿ ವಿಭಾಗದ ವಿಶೇಷ ಭೂ ಸ್ವಾಧೀನಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.