ADVERTISEMENT

ಕನಕಪುರದ ಬಂಡೆ ಬಗ್ಗಿದ್ದು, ಕುಗ್ಗಿದ್ದು ಅಸಹಾಯಕತನದ ಪರಮಾವಧಿ: ಬಿಜೆಪಿ ವ್ಯಂಗ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಮೇ 2022, 7:30 IST
Last Updated 17 ಮೇ 2022, 7:30 IST
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹುಟ್ಟುಹಬ್ಬ ಆಚರಣೆಯ ದೃಶ್ಯ (ಟ್ವಿಟರ್ ಚಿತ್ರ)
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹುಟ್ಟುಹಬ್ಬ ಆಚರಣೆಯ ದೃಶ್ಯ (ಟ್ವಿಟರ್ ಚಿತ್ರ)   

ಬೆಂಗಳೂರು: ‘ಕಾಂಗ್ರೆಸ್ ಹೈಕಮಾಂಡ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಮೂರನೇ ದರ್ಜೆಯವರಂತೆ ನಡೆಸಿಕೊಳ್ಳುತ್ತಿದ್ದಾರೆ’ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಈ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುವ ಈ ಹೊತ್ತಿನಲ್ಲಿ, ನಕಲಿ ಗಾಂಧಿ ವಂಶದವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಮೂರನೇ ದರ್ಜೆಯವರಂತೆ ನಡೆಸಿಕೊಳ್ಳುತ್ತಿದ್ದಾರೆ. ಕನಕಪುರದ ಬಂಡೆ ಹೀಗೆ ಬಗ್ಗಿದ್ದು, ಕುಗ್ಗಿದ್ದುಅಸಹಾಯಕತನದ ಪರಮಾವಧಿಯಲ್ಲದೆ ಮತ್ತೇನು’ ಎಂದು ಪ್ರಶ್ನಿಸಿದೆ.

‘ನೀವೆಷ್ಟೇ ಗುಲಾಮಗಿರಿ, ಚಮಚಾಗಿರಿ ಮಾಡಿದರೂ ನಕಲಿ ಗಾಂಧಿಗಳು ನಿಮ್ಮನ್ನು ಇಡುವಲ್ಲಿಯೇ ಇಡುತ್ತಾರೆ. ಹೈಕಮಾಂಡ್‌ ಮಟ್ಟದಲ್ಲಿ ಟ್ರಬಲ್‌ ಶೂಟರ್‌ ಎನಿಸಿಕೊಂಡಿರುವ ಡಿ.ಕೆ.ಶಿವಕುಮಾರ್ ಅವರ ಹುಟ್ಟುಹಬ್ಬದಂದು ಕೇಕ್ ತಿನ್ನಿಸುವಷ್ಟೂ ಪ್ರಿಯಾಂಕಾ ಗಾಂಧಿಗೆ ಸೌಜನ್ಯವಿಲ್ಲ. ಮತ್ತೊಬ್ಬರ‌ ಕೈಯಲ್ಲಿ ಕೇಕ್‌ ತಿನ್ನಿಸುವ ಪ್ರಮೇಯ ಏನಿತ್ತು’ ಎಂದು ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಬಿಜೆಪಿ ಗುಡುಗಿದೆ.

‘ಡಿ.ಕೆ.ಶಿವಕುಮಾರ್ ಅವರೇ, ಪ್ರಿಯಾಂಕಾ ಗಾಂಧಿ ಅವರ ಕೈಗೆ ಬಂದ ತುತ್ತು, ನಿಮ್ಮ ಬಾಯಿಗೆ ಬರುವುದಿಲ್ಲ. ಈ ಸತ್ಯವನ್ನು ಈಗಲಾದರೂ ಅರಿತುಕೊಳ್ಳಿ. ಕಾಣದ ಕೈಗಳು ನಿಮ್ಮ ಅಧಿಕಾರವನ್ನು ನಿಮ್ಮ ಮುಂದೆಯೇ ಹೀಗೆಯೇ ಕಿತ್ತುಕೊಳ್ಳುತ್ತಾರೆ. ನಿಮ್ಮ ಧನ ಬಲ ಮಾತ್ರ ಬಳಸಿಕೊಳ್ಳುತ್ತಾರೆ. ಅಧಿಕಾರದ ಸಮಯದಲ್ಲಿ ದೂರ ಇಡುತ್ತಾರೆ’ ಎಂದು ಬಿಜೆಪಿ ಕಿಡಿಕಾರಿದೆ.

‘ಕೇಕ್‌ ತಿನ್ನಿಸಲು ನಿರಾಕರಣೆ, ರಮ್ಯಾ ಟ್ವೀಟ್‌ ದಾಳಿ, ಎಂ.ಬಿ.ಪಾಟೀಲ ಸಿಡಿದೆದ್ದಿದ್ದು, ಸಿದ್ದರಾಮಯ್ಯ ಮತ್ತು ಅವರ ಬಣದ ಇತ್ತೀಚೆಗಿನ ನಡೆ, ಕೆಪಿಸಿಸಿ ಕಚೇರಿಯಲ್ಲಿ ಭ್ರಷ್ಟಾಚಾರದ ಆರೋಪ ಇದೆಲ್ಲವೂ ಡಿ.ಕೆ.ಶಿವಕುಮಾರ್‌ ಅವರನ್ನು ಹರಕೆಯ ಕುರಿ ಮಾಡುವ ತಂತ್ರ. ಈ ಎಲ್ಲ ಘಟನೆಗಳು ಏನೋ ಮುನ್ಸೂಚನೆ ನೀಡುತ್ತಿರುವುದು ನಿಜವಲ್ಲವೇ’ ಎಂದು ಬಿಜೆಪಿ ಪ್ರಶ್ನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.