ADVERTISEMENT

KPTCL ನೇಮಕಾತಿ ಅಕ್ರಮ: ಸಿದ್ದರಾಮಯ್ಯ ಆರೋಪಕ್ಕೆ ಇಂಧನ ಸಚಿವ ಸುನೀಲ್ ಕುಮಾರ್ ಗರಂ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2022, 13:24 IST
Last Updated 27 ಆಗಸ್ಟ್ 2022, 13:24 IST
ವಿ.ಸುನಿಲ್ ಕುಮಾರ್ ಮತ್ತು ಸಿದ್ದರಾಮಯ್ಯ
ವಿ.ಸುನಿಲ್ ಕುಮಾರ್ ಮತ್ತು ಸಿದ್ದರಾಮಯ್ಯ   

ಬೆಂಗಳೂರು:ಕೆಪಿಟಿಸಿಎಲ್ ಕಿರಿಯ ಎಂಜಿನಿಯರ್‌ಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಸುಳ್ಳುಆರೋಪ ಮಾಡುತ್ತಿರುವ ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಿರುವ ಇಂಧನ ಹಾಗೂ ಕನ್ನಡ, ಸಂಸ್ಕ್ರತಿ ಸಚಿವ ವಿ.ಸುನಿಲ್ ಕುಮಾರ್, ‘ಸುಳ್ಳು ನಿಮ್ಮ‌ಮನೆ ದೇವರೋ, ಕೌಟುಂಬಿಕ ಆಸ್ತಿಯೋ’ಎಂದು ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ‘ಸಿದ್ದರಾಮಯ್ಯಗೆ ನಾನು ನೇರ ಸವಾಲು ಹಾಕಲು ಬಯಸುತ್ತೇನೆ. ನೀವು ಮಾಡುತ್ತಿರುವ ಈ ಅಪಾದನೆ ಸುಳ್ಳನ್ನೇ ಸತ್ಯವನ್ನಾಗಿಸುವ ವಿಫಲ ಪ್ರಯತ್ನವಾಗಿದೆ. ಕತ್ತಲೆಯಲ್ಲಿ ಕಪ್ಪು ಬೆಕ್ಕು ಹುಡುಕುವ ವ್ಯರ್ಥ ಸಾಹಸಕ್ಕೆ ಕೈ ಹಾಕಿ ಸುಸ್ತಾಗಬೇಡಿ’ ಎಂದು ತಿರುಗೇಟು ನೀಡಿದ್ದಾರೆ.

ಸಿದ್ದರಾಮಯ್ಯನವರೇ, ನೀವು ಆರೋಪಿಸಿದ ರೀತಿ ಈ ನೇಮಕಾತಿಯಲ್ಲಿ ಯಾವುದೇ ರೀತಿಯ ಹಗರಣ ನಡೆದಿಲ್ಲ. ನಾನಾಗಲಿ ಅಥವಾ ನನ್ನ ಕಚೇರಿಯ ಸಿಬ್ಬಂದಿ ಹಣಕಾಸು ಅವ್ಯವಹಾರ ನಡೆಸಿಲ್ಲ ಎಂದು ಘಂಟಾಘೋಷವಾಗಿ ಹೇಳುತ್ತೇನೆ. ನನ್ನ ಮೇಲೆ ನೀವು ಹೊರಿಸಿರುವ ಆರೋಪಕ್ಕೆ ದಾಖಲೆ ಒದಗಿಸಿದರೆ ಯಾವುದೇ ತನಿಖೆ ಎದುರಿಸಲು ಸಿದ್ಧ.ದಾಖಲೆ ನೀಡುವಲ್ಲಿ ಸಫಲರಾಗದೇ ಇದ್ದರೆ ನಿಮ್ಮ ಪಣವೇನು ? ಎಂದು ಸವಾಲು ಹಾಕಿದ್ದಾರೆ.

ಸಿದ್ದರಾಮಯ್ಯನವರೇ, ನಾನು ಇಂಧನ ಇಲಾಖೆ ಸಚಿವನಾದ ಬಳಿಕ ಕೆಪಿಟಿಸಿಎಲ್ ನಡೆಸಿದ ನೇಮಕಾತಿ ಪರೀಕ್ಷೆಯಲ್ಲಿ ಉತ್ತೀರ್ಣರಾದ 1800 ಪವರ್ ಮ್ಯಾನ್ ಹಾಗೂ ಕಿರಿಯ ಸ್ಟೇಷನ್ ಪರಿಚಾರಕರಿಗೆ ನೇಮಕ ಆದೇಶ ನೀಡಿದ್ದೇನೆ. ಒಂದೇ ಒಂದು ಕಪ್ಪುಚುಕ್ಕಿ ಇಲ್ಲದಂತೆ ಈ ಪ್ರಕ್ರಿಯೆ ಪೂರ್ಣಗೊಳಿಸಿದ್ದು ನಿಮ್ಮ ಗಮನಕ್ಕೆ ಬಂದಿಲ್ಲವೇ ? ಅಥವಾ ಸುಳ್ಳು ಆರೋಪ ಮಾಡುವುದಕ್ಕೆ ಆಗ ಏನೂ ಸಿಕ್ಕಿರಲಿಲ್ಲವೇ ? ಎಂದು ಪ್ರಶ್ನಿಸಿದ್ದಾರೆ.

ನನ್ನ ಮೇಲೆ ಅಕ್ರಮದ ಹೊಣೆ ಹೊರಿಸುವ ಷಡ್ಯಂತ್ರ ರೂಪಿಸಿರುವ ನಿಮಗೆ ಈ ನೇಮಕ ಪ್ರಕ್ರಿಯೆ ಹೇಗೆ ನಡೆಯುತ್ತಿದೆ ಎಂಬ ಸಾಮಾನ್ಯ ಜ್ಞಾನವೇ ಇಲ್ಲದಿರುವ ಬಗ್ಗೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ.

ಈ ಪ್ರಕ್ರಿಯೆಯನ್ನು ಪರೀಕ್ಷಾ ಪ್ರಾಧಿಕಾರ ನಡೆಸುತ್ತಿದೆ. ಇದರಲ್ಲಿ ನಾನಾಗಲಿ, ನನ್ನ ಇಲಾಖೆಯಾಗಲಿ ಹಸ್ತಕ್ಷೇಪ ನಡೆಸಲು ಸಾಧ್ಯವೇ ಇಲ್ಲ.ಕೆಪಿಟಿಸಿಎಲ್ ನೇಮಕದಲ್ಲಿ ಅಕ್ರಮ ಯತ್ನಿಸಿದವರನ್ನು ಪೊಲೀಸ್ ಇಲಾಖೆಗೆ ಈಗಾಗಲೇ ಬಂಧಿಸಿದೆ. ಕಾಪಿ ಹೊಡೆಯುವ ಯತ್ನವೇ ವಿಫಲವಾಗಿದೆ ಎಂದು ಪತ್ರಿಕಾ ವರದಿಗಳೂ ಹೇಳುತ್ತಿವೆ. ಆದರೂ ನನ್ನ ಮೇಲೆ ವಿನಾಕಾರಣ ಆರೋಪ‌ ಮಾಡುತ್ತಿದ್ದೀರಿ. ಸುಳ್ಳು ನಿಮ್ಮ ಮನೆ ದೇವರೇ ? ಅಥವಾ ಕೌಟುಂಬಿಕ ಆಸ್ತಿಯೇ ? ಎಂದು ವ್ಯಂಗ್ಯವಾಡಿದ್ದಾರೆ.

ಇತಿಹಾಸವನ್ನು ಕೆದಕಿದರೆ ನೀವು ಮುಖ್ಯಮಂತ್ರಿಯಾಗಿದ್ದಾಗಲೇ ನೇಮಕ ಪ್ರಕ್ರಿಯೆಯಲ್ಲಿ ಅತಿ ಹೆಚ್ಚು ಅಕ್ರಮವಾಗಿದೆ.
ಸೋರಿಕೆ ಇಲ್ಲದೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ‌ ನಡೆಸುವುದಕ್ಕೆ ನಿಮ್ಮಿಂದ ಸಾಧ್ಯವಾಗಿರಲಿಲ್ಲ. ಮರು ಪರೀಕ್ಷೆಯಲ್ಲೂ ಅಕ್ರಮವಾಗಿತ್ತು. ದುರ್ದೈವವೆಂದರೆ ಸದನದ ಒಳಗೆ - ಹೊರಗೆ ನೀವು ಈ ಪ್ರಕರಣವನ್ನು ಸಮರ್ಥಿಸಿಕೊಂಡಿದ್ದಿರಿ ಎಂಬುದನ್ನು ನೆನಪಿಸಬೇಕೆ ?
ಸಿದ್ದರಾಮಯ್ಯನವರೇ ಹೊಣೆ ಹೊರಲೇಬೇಕಾದ ವಿಚಾರಗಳನ್ನು ಅನಾವರಣಗೊಳಿಸುತ್ತಾ ಹೋದರೆ ನಿಮ್ಮ ಮೇಲೆ ‘ಭಾರ’ಬೀಳಬಹುದು. ಅದನ್ನು ತಾಳುವುದಕ್ಕೆ ಕಷ್ಟವಾಗಬಹುದು, ನಿಮ್ಮ ನೆಮ್ಮದಿ ಕೆಡಬಹುದು. ಎಷ್ಟೆಂದರೂ ನೀವು ‘ಅರ್ಕಾವತಿ ಅಧಿಪತಿ’ಗಳಲ್ಲವೇ ? ಎಂದು ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT