ADVERTISEMENT

ಕೋತಿಗೆ ಸ್ಟೇರಿಂಗ್‌ ಕೊಟ್ಟು ಕೆಲಸಕ್ಕೆ ಕುತ್ತು ತಂದುಕೊಂಡ ಕೆಎಸ್‌ಆರ್‌ಟಿಸಿ ಚಾಲಕ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2018, 6:25 IST
Last Updated 6 ಅಕ್ಟೋಬರ್ 2018, 6:25 IST
ಸ್ಟೇರಿಂಗ್‌ ಹಿಡಿದಿರುವ ಲಂಗೂರ್‌
ಸ್ಟೇರಿಂಗ್‌ ಹಿಡಿದಿರುವ ಲಂಗೂರ್‌   

ಬೆಂಗಳೂರು: ಸ್ಟೇರಿಂಗ್‌ ಮೇಲೆ ಕೋತಿಯನ್ನು ಕೂರಿಸಿ ಬಸ್‌ ಚಾಲನೆ ಮಾಡಿದ್ದಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್‌ಆರ್‌ಟಿಸಿ)ಯ ಚಾಲಕ ತನ್ನ ನೌಕರಿ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.

ಹನುಮಾನ್‌ ಲಂಗೂರ್‌ ಪ್ರಭೇದದ ಕೋತಿಯನ್ನು ಚಾಲಕ ಪ್ರಕಾಶ್‌ ಸ್ಟೇರಿಂಗ್‌ ಮೇಲೆ ಕೂರಿಸಿಕೊಂಡು ಬಸ್‌ ಮುನ್ನಡೆಸಿದ್ದರು. ಕೋತಿ ಮನ ಬಂದಂತೆ ಸ್ಟೇರಿಂಗ್‌ ಅನ್ನು ಅತ್ತಿತ್ತ ತಿರುಗಿಸುವುದು, ಚಾಲಕ ಅದನ್ನು ನಿಯಂತ್ರಿಸುತ್ತ ಬಸ್‌ ಚಾಲನೆ ಮಾಡುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿತ್ತು.

ವಿಡಿಯೊ ಸುದ್ದಿಯಾಗುತ್ತಿದ್ದಂತೆ ಕೆಎಸ್‌ಆರ್‌ಟಿಸಿ ಚಾಲಕನನ್ನು ಅಮಾನತು ಮಾಡಿ, ವಿಚಾರಣೆ ನಡೆಸುವಂತೆ ದಾವಣಗೆರೆ ಘಟಕದ ಸೆಕ್ಯುರಿಟಿ ಇನ್‌ಸ್ಪೆಕ್ಟರ್‌ಗೆ ಸೂಚಿಸಿರುವುದಾಗಿ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಕುರಿತು ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ.

ADVERTISEMENT

ಅಕ್ಟೋಬರ್‌ 1ರಂದು ದಾವಣಗೆರೆಯಿಂದ ಭರಮಸಾಗರದ ಕಡೆಗೆ ಸಂಚರಿಸುತ್ತ ಬಸ್‌ನಲ್ಲಿ ಕೋತಿ ಸ್ಟೇರಿಂಗ್‌ ಹಿಡಿದು ಚಾಲನೆ ಮಾಡಿದ ಘಟನೆ ವಿಡಿಯೊದಲ್ಲಿ ದಾಖಲಾಗಿತ್ತು.

ಟೀಚರ್‌ ಜತೆ ಪ್ರಯಾಣ: ದಾವಣಗೆರೆ–ಭರಮಸಾಗರ ಬಸ್‌ನಲ್ಲಿ ನಿತ್ಯವೂ ಪ್ರಯಾಣಿಸುವ ಶಿಕ್ಷಕರೊಬ್ಬರ ಜತೆಯಲ್ಲಿ ಹನುಮಾನ್‌ ಲಂಗೂರ್‌ ಕೂಡ ಇರುತ್ತದೆ. ಆ ದಿನ ಚಾಲಕನ ಸೀಟ್‌ನತ್ತ ಜಿಗಿದ ಲಂಗೂರ್‌, ಸ್ಟೇರಿಂಗ್ ಬಿಟ್ಟು ಬರಲು ವಿರೋಧ ತೋರಿದೆ. ಪ್ರಯಾಣಿಕರು ಎಷ್ಟೇ ಪ್ರಯತ್ನಿಸಿದರೂ ಕೋತಿ ಸ್ಟೇರಿಂಗ್‌ ಬಿಟ್ಟು ಬಂದಿಲ್ಲ. ಪ್ರಾಣಿಪ್ರಿಯನಾದ ಚಾಲಕ ಪ್ರಕಾಶ್‌, ಅದನ್ನು ಕುಳಿತುಕೊಳ್ಳಲು ಬಿಟ್ಟು ಚಾಲನೆ ಮುಂದುವರಿಸಿದ್ದಾರೆ. ಆದರೆ, 3–4 ನಿಮಿಷಗಳಲ್ಲಿ ಮುಂದಿನ ನಿಲ್ದಾಣ ಬರುತ್ತಿದ್ದಂತೆ ಕೋತಿ ಇಳಿದು ಹೋಗಿದೆ. ಈ ಬಗ್ಗೆ ಪ್ರಯಾಣಿಕರಿಂದ ಯಾವುದೇ ದೂರು ಬಂದಿಲ್ಲ ಎಂದು ದಾವಣಗೆರೆ ಕೆಎಸ್‌ಆರ್‌ಟಿಸಿ ಘಟಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.