ADVERTISEMENT

ಭೂ ಕಬಳಿಕೆ ಪ್ರಕರಣ: ರೋಷನ್‌ ಬೇಗ್‌ ಅಕ್ರಮಕ್ಕೆ ಜೈರಾಜ್‌ ಸಹಕಾರ!

ಸರ್ಕಾರಕ್ಕೆ ಕೊನೆಗೂ ವರದಿ ಸಲ್ಲಿಸಿದ ಬಿಬಿಎಂಪಿ

ಮಂಜುನಾಥ್ ಹೆಬ್ಬಾರ್‌
Published 3 ಸೆಪ್ಟೆಂಬರ್ 2022, 20:14 IST
Last Updated 3 ಸೆಪ್ಟೆಂಬರ್ 2022, 20:14 IST
ರೋಷನ್‌ ಬೇಗ್‌
ರೋಷನ್‌ ಬೇಗ್‌   

ನವದೆಹಲಿ: ಕರ್ನಾಟಕದ ರಾಜಕಾರಣಿ ಆರ್.ರೋಷನ್‌ ಬೇಗ್‌ ಭೂ ಕಬಳಿಕೆ ಪ್ರಕರಣದಲ್ಲಿ ಕೈಜೋಡಿಸಿದ ಅಧಿಕಾರಿಗಳ ಪಟ್ಟಿಯನ್ನು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಕರ್ನಾಟಕ ಸರ್ಕಾರಕ್ಕೆ ಕೊನೆಗೂ ನೀಡಿದ್ದು, ಅದರಲ್ಲಿ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ.ಜೈರಾಜ್‌ ಸೇರಿ ಐದು ಅಧಿಕಾರಿಗಳ/ನೌಕರರ ಹೆಸರು ಇದೆ.

’ರೋಷನ್‌ ಬೇಗ್‌ ಮಾಲೀಕತ್ವದ ಡ್ಯಾನಿಷ್‌ ಪಬ್ಲಿಕೇಷನ್‌ ಸಂಸ್ಥೆಗೆ 2007ರ ಫೆಬ್ರುವರಿ 22ರಂದು ಕ್ರಯಪತ್ರ ಮಾಡಿಕೊಟ್ಟ ಬಿಬಿಎಂಪಿ ಅಧಿಕಾರಿಗಳು ನಿವೃತ್ತಿ ಹೊಂದಿದ್ದಾರೆ. ಅವರ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳಬಹುದು’ ಎಂದು ಬಿಬಿಎಂಪಿ ಉಪ ಆಯುಕ್ತರು (ಆಡಳಿತ) ವರದಿಯಲ್ಲಿ ಉಲ್ಲೇಖಿಸಲಾಗಿದ್ದಾರೆ. ’ಬಿಬಿಎಂಪಿ ಆಯುಕ್ತರಾಗಿದ್ದ ಕೆ.ಜೈರಾಜ್‌, ಪೂರ್ವ ವಲಯದ ಜಂಟಿ ಆಯುಕ್ತರಾಗಿದ್ದ ಎಸ್‌.ಎನ್‌.ನಾಗರಾಜ್‌, ಕಂದಾಯ ಅಧಿಕಾರಿಯಾಗಿದ್ದ (ಶಿವಾಜಿನಗರ) ಎ. ಲಕ್ಷ್ಮಯ್ಯ, ಸಹಾಯಕ ಕಂದಾಯ ಅಧಿಕಾರಿಯಾಗಿದ್ದ ಶ್ರೀನಿವಾಸಮೂರ್ತಿ, ಕಂದಾಯ ಪರಿವೀಕ್ಷಕರಾಗಿದ್ದ ಎನ್‌.ನರಸಪ್ಪ ಕ್ರಯಪತ್ರ ಮಾಡಿಕೊಟ್ಟವರು. ಜೈರಾಜ್‌ ಹಾಗೂ ಎಸ್‌.ಎನ್‌.ನಾಗರಾಜ್ ಅವರು ಐಎಎಸ್‌/ಕೆಎಎಸ್‌ ಅಧಿಕಾರಿಗಳಾಗಿ ನಿವೃತ್ತರಾಗಿದ್ದು, ಅವರ ವಿರುದ್ಧ ತನಿಖೆಗೆ ಪೂರ್ವಾನುಮತಿಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಿಂದ ಪಡೆಯಬಹುದು’ ಎಂದು ಉಪ ಆಯುಕ್ತರು ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆಗೆ ಕೆ.ಜೈರಾಜ್ ಲಭ್ಯರಾಗಲಿಲ್ಲ.

ಡ್ಯಾನಿಷ್‌ ಪಬ್ಲಿಕೇಷನ್‌ ಸಂಸ್ಥೆಗೆ ಬೆಂಗಳೂರಿನಲ್ಲಿ ₹30 ಕೋಟಿ ಬೆಲೆ ಬಾಳುವ ಜಾಗವನ್ನು ₹1.68 ಕೋಟಿಗೆ ಹಂಚಿಕೆ ಮಾಡಿ ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಿದ ಪ್ರಕರಣ ಇದಾಗಿದೆ.

ADVERTISEMENT

ಐಎಂಎ ಪ್ರಕರಣದಲ್ಲಿ ರೋಷನ್‌ ಬೇಗ್‌ ಅವರನ್ನು ಬಂಧಿಸಲಾಗಿತ್ತು. ಆ ಬಳಿಕ ಬೇಗ್‌ ಮನೆ ಮೇಲೆ ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳು ದಾಳಿ ನಡೆಸಿದ್ದರು.

ಹಣ ಅಕ್ರಮ ವರ್ಗಾವಣೆ ತಡೆ (ಪಿಎಂಎಲ್‌) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದ ಅಧಿಕಾರಿಗಳು, ಭೂ ಅಕ್ರಮದ ಮಾಹಿತಿಯನ್ನು ಕರ್ನಾಟಕ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಹಂಚಿಕೊಂಡಿದ್ದರು.

ಈ ಬಗ್ಗೆ ಸಮಗ್ರ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಎಸಿಬಿಯ ಎಸ್ಪಿಗೆ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರು (ಎಡಿಜಿಪಿ) ಸೂಚಿಸಿದ್ದರು. ‘ಕ್ರಯಪತ್ರ ಮಾಡಿಕೊಟ್ಟ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಹಾಗೂ ರಾಜಕೀಯ ಪ್ರಭಾವ ಬಳಸಿ ನಿಯಮ ಉಲ್ಲಂಘಿಸಿ ಭೂಕಬಳಿಕೆ ಮಾಡಿರುವ ರೋಷನ್‌ ಬೇಗ್‌ ವಿರುದ್ಧ ಹೆಚ್ಚಿನ ತನಿಖೆ ನಡೆಸಬೇಕಿದೆ. ಅದಕ್ಕಾಗಿ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆಯಂತೆ ಪೂರ್ವಾನುಮತಿ ದೊರಕಿಸಿ ಕೊಡಬೇಕು’ ಎಂದು ಎಸ್ಪಿ ಅವರು 2021ರ ಡಿಸೆಂಬರ್‌ 13ರಂದು ಎಡಿಜಿಪಿ ಅವರಿಗೆ ಪತ್ರ ಬರೆದಿದ್ದರು.

ಬಿಬಿಎಂಪಿ ಅಧಿಕಾರಿಗಳ ವಿರುದ್ಧ ವಿಚಾರಣೆ ನಡೆಸಲು ಪೂರ್ವಾನುಮತಿ ನೀಡುವಂತೆ ಎಡಿಜಿಪಿ ಅವರು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಎಸಿಎಸ್‌) ರಾಕೇಶ್ ಸಿಂಗ್ ಅವರಿಗೆ 2022ರ ಜನವರಿ 12ರಂದು ಪ್ರಸ್ತಾವನೆ ಸಲ್ಲಿಸಿದ್ದರು.

ಡ್ಯಾನಿಷ್‌ ಪಬ್ಲಿಕೇಷನ್‌ಗೆ ಕ್ರಯಪತ್ರ ಮಾಡಿಕೊಟ್ಟ ಬಿಬಿಎಂಪಿ ಅಧಿಕಾರಿಗಳ ಮಾಹಿತಿಯನ್ನು ಕೂಡಲೇ ಕಳುಹಿಸಿಕೊಡುವಂತೆ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರು ಫೆಬ್ರುವರಿ 21ರಂದು ಸೂಚಿಸಿದ್ದರು. ಆದರೆ, ಮುಖ್ಯ ಆಯುಕ್ತರು ಯಾವುದೇ ಮಾಹಿತಿ ನೀಡಿರಲಿಲ್ಲ.ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಆಗಸ್ಟ್‌ 18ರಂದು ನಗರಾಭಿವೃದ್ಧಿ ಇಲಾಖೆಯ ಉಪ ಕಾರ್ಯದರ್ಶಿ ಪತ್ರ ಬರೆದು, ಕೂಡಲೇ ಮಾಹಿತಿ ನೀಡುವಂತೆ ಕೋರಿದ್ದರು. ‘ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಹಿಂದೇಟು’ ಶೀರ್ಷಿಕೆಯಡಿ ‘‍ಪ್ರಜಾವಾಣಿ’ ವಿಶೇಷ ವರದಿ ಪ್ರಕಟಿಸಿ ಗಮನ ಸೆಳೆದಿತ್ತು. ಅದರ ಬೆನ್ನಲ್ಲೇ, ಬಿಬಿಎಂಪಿಯು ವರದಿ ಸಲ್ಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.