ADVERTISEMENT

ಬಕಾಸುರ ಕಂಪನಿ ‘ಜಿಂದಾಲ್‌’ಗೆ ಭೂಮಿ: ಸಮಗ್ರ ತನಿಖೆಗೆ ಹಿರೇಮಠ್ ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ಜೂನ್ 2019, 17:00 IST
Last Updated 24 ಜೂನ್ 2019, 17:00 IST
ಎಸ್‌.ಆರ್‌.ಹಿರೇಮಠ್
ಎಸ್‌.ಆರ್‌.ಹಿರೇಮಠ್   

ಬಳ್ಳಾರಿ: 'ಜಿಂದಾಲ್ ಸಂಸ್ಥೆಗೆ ಸರ್ಕಾರ ನೀಡಿರುವ ‌ಭೂಮಿ ಹಾಗೂ ಜಿಂದಾಲ್ ರೈತರಿಂದ ನೇರವಾಗಿ ಖರೀದಿಸಿರುವ ಭೂಮಿ ಎಷ್ಟು ಹಾಗೂ ಅದರಲ್ಲಿ ಕೈಗಾರಿಕೆ ಸ್ಥಾಪನೆಯ ಉದ್ದೇಶ ಈಡೇರಿದೆಯೇ ಎಂಬ ಕುರಿತು ಕೂಡಲೇ ‌ಸಮಗ್ರ ತನಿಖೆ ನಡೆಸಬೇಕು’ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಆಗ್ರಹಿಸಿದರು.

ನಗರದಲ್ಲಿ‌ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದಕ್ಷಿಣ ಕೊರಿಯಾದಲ್ಲಿ ಪಾಸ್ಕೊ ಕಂಪನಿಯು ಪ್ರತಿ ವರ್ಷ 1 ಕೋಟಿ ಮೆಟ್ರಿಕ್ ಟನ್ ಉಕ್ಕು ಉತ್ಪಾದಿಸಲು ಕೇವಲ 2 ಸಾವಿರ ಎಕರೆ ಭೂಮಿ ಪಡೆದಿದೆ. ಮಿತ್ತಲ್ ಕಂಪನಿಯು ಇಂಗ್ಲೆಂಡ್‌ನಲ್ಲಿ 1 ಕೋಟಿ ಮಿಲಿಯನ್ ಮೆಟ್ರಿಕ್ ಟನ್ ಉಕ್ಕು ಉತ್ಪಾದಿಸಲೂ 2 ಸಾವಿರ ಎಕರೆಗಿಂತ ಕಡಿಮೆ ಭೂಮಿ ಪಡೆದಿದೆ. ಆದರೆ ಜೆಎಸ್ ಡಬ್ಲ್ಯು ಮಾತ್ರ 1.15 ಕೋಟಿ ಮೆಟ್ರಿಕ್ ಟನ್‌ ಉತ್ಪಾದಿಸಲು ಬಕಾಸುರನಂತೆ ಭೂಮಿ ಬಳಸುತ್ತಿದೆ.‌ ಸರ್ಕಾರ ಕೂಡ ವಿವೇಚನೆ ಇಲ್ಲದೆ‌ ಭೂಮಿ ಕೊಟ್ಟಿದೆ’ ಎಂದು ದೂರಿದರು.

‘ಜಿಂದಾಲ್ ಗೆ 3,667 ಎಕರೆ ಭೂಮಿಯನ್ನು ಮಾರಾಟ ಮಾಡುವ ನಿರ್ಧಾರ ಯಾವತ್ತಿಗೂ ‌ಜನಹಿತ ವಿರೋಧಿಯಾಗುತ್ತದೆ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿವೇಚನೆ ಇಲ್ಲದೆ‌ ಲೀಸ್ ಕಂ ‌ಸೇಲ್ ಒಪ್ಪಂದ ಏರ್ಪಡಿಸಿಕೊಂಡಾಗ ಮೌನವಾಗಿದ್ದ ಅಂದಿನ ಉಪಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆ ಒಪ್ಪಂದವನ್ಬು ಈಗ ವಿರೋಧಿಸುತ್ತಿದ್ದಾರೆ’ ಎಂದು ಟೀಕಿಸಿದರು.

ADVERTISEMENT

‘ಕಾನೂನು ಪಾಲನೆ ಮಾಡುವ ವಿಚಾರದಲ್ಲಿ ತಾನೊಂದೇ ಸಾಚಾ ಎಂದು ಪ್ರತಿಪಾದಿಸುತ್ತಿರುವ ಜಿಂದಾಲ್ ತನ್ನ ವಿರುದ್ಧ ಅದಿರು ಅಕ್ರಮ ಸಾಗಣೆ ಆರೋಪದ ಮೇರೆಗೆ ಕ್ರಿಮಿನಲ್ ಪ್ರಕರಣ ದಾಖಲಾಗಿರುವುದನ್ನು ಮರೆತಿದೆ. ಮೈಸೂರು ಮಿನರಲ್‌ ಲಿಮಿಟೆಡ್ ಗೆ ₨ 1,172 ಕೋಟಿ ಬಾಕಿ ಉಳಿಸಿಕೊಂಡಿರುವ ಜಿಂದಾಲ್, ಅದನ್ನು ಪಾವತಿಸುವ‌‌ ಬದಲು, ಎಂಎಂಎಲ್ ಸಂಸ್ಥೆಯೇ ತನಗೆ 270 ಕೋಟಿ ನೀಡಬೇಕು ಎಂದು 2012ರಲ್ಲಿ ದಾವೆ ಹೂಡಿರುವುದು ವಿಪರ್ಯಾಸ. ಅದಕ್ಕೆ ತಕ್ಷಣವೇ ಪ್ರತಿಕ್ರಿಯಿಸಬೇಕಿದ್ದ ಎಂಎಂಎಲ್, ನಮ್ಮ ಒತ್ತಾಯದ ಪರಿಣಾಮವಾಗಿ, 2016ರಲ್ಲಿ ಮರುದಾವೆ ಹೂಡಿತು’ ಎಂದರು.

ಜಿಂದಾಲ್‌ಗೆ ಭೂಮಿ ಮಾರುವುದನ್ನು ವಿರೋಧಿಸಿ ಕ್ವಿಟ್‌ ಜಿಂದಾಲ್‌ ಎಂಬ ಹೋರಾಟವನ್ನು ಆಗಸ್ಟ್‌ 9ರಿಂದ ಹಮ್ಮಿಕೊಳ್ಳಲಾಗುವುದು. ಅದಕ್ಕಾಗಿ ಎಲ್ಲ ಸಂಘಟನೆಗಳನ್ನು ಒಗ್ಗೂಡಿಸಲಾಗುವುದು ಎಂದು ಮುಖಂಡ ಮಲ್ಲಿಕಾರ್ಜುನ ರೆಡ್ಡಿ ತಿಳಿಸಿದರು.

'ಉಳಿಸಿ ಬೆಳೆಸಿ, ಬಳಸಿ' ಸಮಾವೇಶ:ಕಪ್ಪತಗುಡ್ಡದ ಅರಣ್ಯ ಪ್ರದೇಶದ ‌ಸಂರಕ್ಷಣೆಗಾಗಿ ಜುಲೈ 13 ಮತ್ತು 14ರಂದು ಗದಗದ ತೋಂಟದಾರ್ಯ ಮಠದಲ್ಲಿ ಉಳಿಸಿ, ಬೆಳೆಸಿ, ಬಳಸಿ ಚಿಂತನಾ ಸಮಾವೇಶವನ್ನು ಹಮ್ಮಿಕೊಳ್ಳಲಾಗುವುದು’ ಎಂದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.