ADVERTISEMENT

ಜಿಂದಾಲ್‌ಗೆ 3,677 ಎಕರೆ ಜಮೀನು: ಬಿಜೆಪಿ ಶಾಸಕರಿಂದಲೇ ವಿರೋಧ

​ಪ್ರಜಾವಾಣಿ ವಾರ್ತೆ
Published 7 ಮೇ 2021, 20:30 IST
Last Updated 7 ಮೇ 2021, 20:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಜೆಎಸ್‌ಡಬ್ಲ್ಯು ಸ್ಟೀಲ್ಸ್‌ ಕಂಪನಿಗೆ ಬಳ್ಳಾರಿ ಜಿಲ್ಲೆಯಲ್ಲಿ 3,667 ಎಕರೆ ಜಮೀನನ್ನು ಕ್ರಯಪತ್ರದ ಮೂಲಕ ಹಸ್ತಾಂತರಿಸುವ ಸಂಪುಟ ಸಭೆಯ ತೀರ್ಮಾನವನ್ನು ವಿರೋಧಿಸಿ ಬಿಜೆಪಿಯ ನಾಲ್ವರು ಶಾಸಕರು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಇದೇ ಪ್ರಸ್ತಾವವನ್ನು ವಿರೋಧ ಪಕ್ಷದಲ್ಲಿದ್ದ ಬಿಜೆಪಿ ವಿರೋಧಿಸಿತ್ತು. ಈಗ ತದ್ವಿರುದ್ಧವಾಗಿ ನಿರ್ಣಯ ಕೈಗೊಂಡಿರುವುದನ್ನು ವಿರೋಧಿಸಿ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಅರವಿಂದ ಬೆಲ್ಲದ, ಕೆ. ಪೂರ್ಣಿಮಾ ಮತ್ತು ಉದಯ್ ಗರುಡಾಚಾರ್‌ ಪತ್ರ ಬರೆದಿದ್ದಾರೆ.

‘ಜಿಂದಾಲ್‌ ಕಂಪನಿಗೆ ಜಮೀನು ಕ್ರಯಕ್ಕೆ ನೀಡುವ ತೀರ್ಮಾನವು ರಾಜ್ಯದ ಹಿತಾಸಕ್ತಿಗೆ ವಿರುದ್ಧವಾಗಿದೆ. ಇದು ಭ್ರಷ್ಟಾಚಾರದ ವಿರುದ್ಧದ ಬಿಜೆಪಿಯ ಹೋರಾಟಕ್ಕೂ ವಿರೋಧವಾದುದು’ ಎಂದು ಈ ಶಾಸಕರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ADVERTISEMENT

ಕೋವಿಡ್‌ನಿಂದ ರಾಜ್ಯವು ಬಿಕ್ಕಟ್ಟಿನಲ್ಲಿರುವ ಸಂದರ್ಭದಲ್ಲಿ ಜೆಎಸ್‌ಡಬ್ಲ್ಯು ಸ್ಟೀಲ್ಸ್‌ಗೆ ಕಡಿಮೆ ದರಕ್ಕೆ ಜಮೀನು ನೀಡುವುದನ್ನು ಈ ಶಾಸಕರು ವಿರೋಧಿಸಿದ್ದಾರೆ. ಈ ವಿಚಾರದಲ್ಲಿ ವಿರೋಧ ಪಕ್ಷಗಳು ವ್ಯಕ್ತಪಡಿಸಿರುವ ಅಭಿಪ್ರಾಯವನ್ನೂ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.

‘ಕುಮಾರಸ್ವಾಮಿ ನೇತೃತ್ವದ ಸರ್ಕಾರ ಈ ಪ್ರಸ್ತಾವಕ್ಕೆ ಅನುಮೋದನೆ ನೀಡಲು ಹೊರಟಾಗ ಆಗ ವಿರೋಧ ಪಕ್ಷದ ನಾಯಕರಾಗಿದ್ದ ಯಡಿಯೂರಪ್ಪ ನೇತೃತ್ವದಲ್ಲಿ ಎಲ್ಲರೂ ಒಕ್ಕೊರಲಿನಿಂದ ವಿರೋಧಿಸಿದ್ದೆವು. ಈ ವಿಚಾರದಲ್ಲಿ ಆಗ ಬಿಜೆಪಿಯ ನಿಲುವು ಏನಾಗಿತ್ತು ಎಂಬುದು ರಾಜ್ಯದ ಜನರಿಗೆ ಸ್ಪಷ್ಟವಾಗಿ ತಿಳಿದಿದೆ. ಕುಮಾರಸ್ವಾಮಿ ಸರ್ಕಾರ ದೊಡ್ಡ ಮೊತ್ತದ ಕಿಕ್‌ ಬ್ಯಾಕ್‌ ಪಡೆದು ಜಮೀನು ಮಾರುತ್ತಿದೆ ಎಂದು ನಾವು ಆಗ ಆರೋಪಿಸಿದ್ದೆವು’ ಎಂದು ಪತ್ರದಲ್ಲಿ ಈ ಶಾಸಕರು ನೆನಪಿಸಿದ್ದಾರೆ.

‘ಬಿಜೆಪಿಯ ಪ್ರಬಲ ಪ್ರತಿಭಟನೆಗೆ ಮಣಿದ ಸಮ್ಮಿಶ್ರ ಸರ್ಕಾರ ಪ್ರಸ್ತಾವವನ್ನು ಕೈಬಿಟ್ಟಿತ್ತು. ಈಗ ಅದೇ ಪ್ರಸ್ತಾವಕ್ಕೆ ಬಿಜೆಪಿ ಸರ್ಕಾರ ಒಪ್ಪಿಗೆ ನೀಡಿರುವುದು ಆಘಾತಕಾರಿ ಬೆಳವಣಿಗೆ. ಸರ್ಕಾರದ ನಿರ್ಧಾರವು ಬಿಜೆಪಿ ಕಾರ್ಯಕರ್ತರ ಹೋರಾಟವನ್ನೇ ಅವಮಾನಿಸುವಂತಿದೆ’ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.

ಜಿಂದಾಲ್‌ ಕಂಪನಿಗೆ ಜಮೀನು ಮಾರಾಟ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ತಕ್ಷಣವೇ ಶಾಸಕಾಂಗ ಪಕ್ಷದ ಸಭೆಯನ್ನು ಕರೆದು ಚರ್ಚಿಸುವಂತೆಯೂ ಈ ಶಾಸಕರು ಯಡಿಯೂರಪ್ಪ ಅವರನ್ನು ಆಗ್ರಹಿಸಿದ್ದಾರೆ.

ಬಿಜೆಪಿ ಶಾಸಕರಾದ ಅಭಯ್ ಪಾಟೀಲ್‌, ವಿ. ಸುನೀಲ್‌ ಕುಮಾರ್ ಮತ್ತು ಸತೀಶ್ ರೆಡ್ಡಿ ಕೂಡ ಈ ಪತ್ರವನ್ನು ಬೆಂಬಲಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.