ADVERTISEMENT

579 ಮದ್ಯದಂಗಡಿ 'ಇ– ಹರಾಜು': ₹1,500 ಕೋಟಿ ಸಂಪನ್ಮೂಲ ಕ್ರೋಡೀಕರಣದ ಅಂದಾಜು

ರಾಜೇಶ್ ರೈ ಚಟ್ಲ
Published 9 ನವೆಂಬರ್ 2025, 20:04 IST
Last Updated 9 ನವೆಂಬರ್ 2025, 20:04 IST
   

ಬೆಂಗಳೂರು: ದೀರ್ಘ ಅವಧಿಯಿಂದ ನವೀಕರಣವಾಗದೆ ಸ್ಥಗಿತಗೊಂಡಿರುವ ಮತ್ತು ಎಂಎಸ್‌ಐಎಲ್‌ ಸಂಸ್ಥೆ ಇನ್ನೂ ಆರಂಭಿಸದ ಚಿಲ್ಲರೆ ಮದ್ಯದಂಗಡಿಗಳು ಹಾಗೂ ಸ್ಥಗಿತಗೊಂಡಿರುವ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳು ಸೇರಿ ಒಟ್ಟು 579 ಮದ್ಯದಂಗಡಿಗಳ ಪರವಾನಗಿಯನ್ನು (ಸನ್ನದು) ಇದೇ ಮೊದಲ ಬಾರಿಗೆ ‘ಇ– ಹರಾಜು’ ಮೂಲಕ ಬಿಡ್ಡಿಂಗ್‌ ಪ್ರಕ್ರಿಯೆ ನಡೆಸಿ ಹಂಚಿಕೆ ಮಾಡಲು ಅಬಕಾರಿ ಇಲಾಖೆ ತಯಾರಿ ನಡೆಸಿದೆ.

ಈ ಸಂಬಂಧ ‘ಕರ್ನಾಟಕ ಅಬಕಾರಿ (ಭಾರತೀಯ ಮತ್ತು ವಿದೇಶಿ ಮದ್ಯಗಳ ಮಾರಾಟ) (ಎರಡನೇ ತಿದ್ದುಪಡಿ) ನಿಯಮಗಳು– 2025’ ಅನ್ನು ಆರ್ಥಿಕ ಇಲಾಖೆ (ಅಬಕಾರಿ) ರಾಜ್ಯಪತ್ರದಲ್ಲಿ ಪ್ರಕಟಿಸಿದೆ. ಹೊಸ ಪರವಾನಗಿಗಳನ್ನು ‘ಸಿಎಲ್‌ 2ಎ’ ಮತ್ತು ‘ಸಿಎಲ್‌ 9ಎ’ ಎಂದು ಎರಡು ಹೊಸ ವರ್ಗದಡಿ ಹಂಚಿಕೆ ಮಾಡಲು ನಿಯಮ ತಿದ್ದುಪಡಿ ಮಾಡಲಾಗಿದೆ.

ಈ ನಿಯಮಗಳ ಅಡಿ, ಅವಧಿ ಮುಗಿದ ಅಥವಾ ನವೀಕರಿಸದ ಮತ್ತು ಇ– ಹರಾಜಿಗೆ ಲಭ್ಯ ಇರುವ ಮತ್ತು ಲಭ್ಯ ಆಗುವಂತೆ ಮಾಡುವ ಪರವಾನಗಿಗಳ ‘ಹರಾಜು ಪಟ್ಟಿ’ ಸಿದ್ಧಪಡಿಸಲಾಗುವುದು. ನಂತರ ಆನ್‌ಲೈನ್‌ ಮೂಲಕ ಬಿಡ್‌ ಆಹ್ವಾನಿಸಿ, ಅರ್ಹ ಬಿಡ್ಡರ್‌ ಸಲ್ಲಿಸಿದ ಅತೀ ಹೆಚ್ಚಿನ ಮೊತ್ತಕ್ಕೆ ನಿರ್ದಿಷ್ಟ ಪ್ರದೇಶದಲ್ಲಿ, ನಿರ್ದಿಷ್ಟ ಅವಧಿಗೆ ಮದ್ಯದಂಗಡಿಯ ಪರವಾನಗಿಯನ್ನು ಹಂಚಿಕೆ ಮಾಡಲು ಇಲಾಖೆ ನಿರ್ಧರಿಸಿದೆ. 

ADVERTISEMENT

ಸದ್ಯದ ಮಾರುಕಟ್ಟೆ ಮೌಲ್ಯದ ಅಂದಾಜು ಪ್ರಕಾರ ಒಂದು ಮದ್ಯದಂಗಡಿಯ ಪರವಾನಗಿ ಬಿಡ್ಡಿಂಗ್‌ನಲ್ಲಿ ಕನಿಷ್ಠ ₹3 ಕೋಟಿಯಿಂದ ₹4 ಕೋಟಿಯವರೆಗೆ ಖರೀದಿ ಆಗಬಹುದು. ಆ ಮೂಲಕ, ಸರ್ಕಾರಕ್ಕೆ ಸುಮಾರು ₹1,500 ಕೋಟಿ ಸಂಪನ್ಮೂಲ ಕ್ರೋಡೀಕರಣವಾಗುವ ಅಂದಾಜು ಇದೆ ಎಂದೂ ಇಲಾಖೆ ಲೆಕ್ಕಾಚಾರ ಹಾಕಿದೆ.

ಸಿಎಲ್‌ 2ಎ: ಸ್ಥಗಿತಗೊಂಡಿರುವ ಮತ್ತು 1987ರ ಕೋಟಾದಡಿ ಇನ್ನೂ ಮಂಜೂರು ಮಾಡಲು ಬಾಕಿ ಇರುವ ಎಲ್ಲ ಸಿಎಲ್‌ 2 ಪರವಾನಗಿಗಳು, ಸ್ಥಗಿತಗೊಂಡಿರುವ ಮತ್ತು ಅಬಕಾರಿ ಆಯುಕ್ತರಿಂದ ಪೂರ್ವಾನುಮೋದನೆ ಪಡೆದ, ಆದರೆ ಇನ್ನೂ ತೆರೆಯದ ಹಾಗೂ ಎಂಎಸ್‌ಐಎಲ್‌ಗೆ 2009 ಮತ್ತು 2016ರ ಆದೇಶದಲ್ಲಿ ಹಂಚಿಕೆ ಮಾಡಿ ಇನ್ನೂ ಮಂಜೂರು ಮಾಡಬೇಕಾದ ಸಿಎಲ್–11ಸಿ (ಎಂಎಸ್‌ಐಎಲ್‌) ಮದ್ಯದಂಗಡಿಗಳ ಪರವಾನಗಿಗಳನ್ನು ಯಶಸ್ವಿ ಬಿಡ್ಡರ್‌ಗಳಿಗೆ ‘ಸಿಎಲ್‌ 2ಎ’ ನಮೂನೆಯಡಿ ಅಡಿ ನೀಡಲಾಗುವುದು.

ಸಿಎಲ್‌ 9ಎ: ಸ್ಥಗಿತಗೊಂಡಿರುವ ಸಿಎಲ್‌–9 (ಬಾರ್‌ ಆ್ಯಂಡ್‌ ರೆಸ್ಟೋರೆಂಟ್) ಪರವಾನಗಿಗಳನ್ನು ಯಶಸ್ವಿ ಬಿಡ್ಡರ್‌ಗಳಿಗೆ ಇ– ಹರಾಜು ಮೂಲಕ ಬಿಡ್ಡಿಂಗ್‌ ಪ್ರಕ್ರಿಯೆ ನಡೆಸಿ ‘ಸಿಎಲ್‌ 9ಎ’ ಅಡಿ ಮಂಜೂರು ಮಾಡಲಾಗುವುದು. ಅಲ್ಲದೆ, ಸರ್ಕಾರ ಕಾಲ ಕಾಲಕ್ಕೆ ನಿಗದಿಪಡಿಸುವ ಪರವಾನಗಿ ಶುಲ್ಕ ಮತ್ತು ಹೆಚ್ಚುವರಿ ಶುಲ್ಕವನ್ನು ಸಿಎಲ್‌ 2ಎ ಮತ್ತು ಸಿಎಲ್‌ 9ಎ ಪರವಾನಗಿ ಹೊಂದಿವರು ಪಾವತಿಸಬೇಕೆಂದು ನಿಯಮದಲ್ಲಿಯೇ ತಿಳಿಸಲಾಗಿದೆ ಇಲಾಖೆಯ ಮೂಲಗಳು ಹೇಳಿವೆ.

ರಾಜ್ಯ ಸರ್ಕಾರ 1987ರ ಜೂನ್‌ 30ರಂದು ಹೊರಡಿಸಿದ್ದ ಆದೇಶದಲ್ಲಿ 4,206 ಮದ್ಯದಂಗಡಿಗಳಿಗೆ ಪರವಾನಗಿ ನೀಡಲು ನಿರ್ಧರಿಸಿತ್ತು. ಈ ಕೋಟಾದಡಿ 133 ಮದ್ಯಂಗಡಿಗಳನ್ನು ತೆರೆಯಲು ಪರವಾನಗಿ ಕೊಡಲು ಇನ್ನೂ ಬಾಕಿ ಇದೆ. ನಾನಾ ಕಾರಣಗಳಿಂದ 102 ಪರವಾನಗಿಗಳು ಸ್ಥಗಿತಗೊಂಡಿವೆ. ಮೈಸೂರು ಸೇಲ್ಸ್‌ ಇಂಟರ್‌ ನ್ಯಾಷನಲ್‌ ಲಿಮಿಟೆಡ್‌ಗೆ (ಎಂಎಸ್‌ಐಎಲ್‌) 2009ರ ಜುಲೈ 3 ಮತ್ತು 2016ರ ಸೆ. 23ರ ಆದೇಶದ ಅನ್ವಯ ಒಟ್ಟು 1,363 ಮದ್ಯದಂಗಡಿಗಳನ್ನು ತೆರೆಯಲು ಪರವಾನಗಿ ನೀಡಲಾಗಿತ್ತು. ಈ ಪೈಕಿ, 1,133 ಮದ್ಯದಂಗಡಿಗಳಿಗೆ ಮಂಜೂರಾತಿ ನೀಡಲಾಗಿದೆ. ಮಂಜೂರಾತಿ ನೀಡಿರುವುದರಲ್ಲಿ 41 ಸ್ಥಗಿತಗೊಂಡಿವೆ. ಇನ್ನೂ 230 ಮದ್ಯದಂಗಡಿಗಳಿಗೆ ಮಂಜೂರಾತಿ ನೀಡಲು ಬಾಕಿ ಇದೆ. ಈ ಮದ್ಯಂಗಡಿಗಳು ಹರಾಜು ಪಟ್ಟಿಯಲ್ಲಿ ಸೇರಲಿವೆ ಎಂದು ಅಬಕಾರಿ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಪರವಾನಗಿ ಹೊಂದಿದವರು ಮೃತಪಟ್ಟ ನಂತರ ಯಾರ ಹೆಸರಿಗೆ ಸನ್ನದು ಬದಲಿಸಬೇಕೆಂಬ ವಿವಾದ, ಕುಟುಂಬದೊಳಗಿನ ಸಂಘರ್ಷ, ಶುಲ್ಕ ಕಟ್ಟಲು ಹಣ ಇಲ್ಲದಿರುವುದು ಸೇರಿದಂತೆ ವಿವಿಧ ಕಾರಣಗಳಿಗೆ ಮದ್ಯದಂಗಡಿಗಳು ನವೀಕರಣಗೊಳ್ಳದೆ  ಸ್ಥಗಿತಗೊಂಡಿವೆ. ಈ ಪೈಕಿ, ಕೆಲವು ಮದ್ಯದಂಗಡಿಗಳ ಪರವಾನಗಿ 1979ರಿಂದಲೂ ನವೀಕರಣ ಆಗಿಲ್ಲ’ ಎಂದೂ ಅವರು ಹೇಳಿದರು.

ಇ– ಹರಾಜಿನಲ್ಲಿ ‘ಮೀಸಲಾತಿ’
ಇ– ಹರಾಜಿನಲ್ಲಿ ಯಶಸ್ವಿಯಾದ ಬಿಡ್‌ದಾರರಿಗೆ ಸಿಎಲ್ 2ಎ ಮತ್ತು ಸಿಎಲ್‌ 9ಎ ಪರವಾನಗಿಗಳನ್ನು ಸರ್ಕಾರ ನಿಗದಿಪಡಿಸಿದ ‘ಮೀಸಲಾತಿ’ ಮಾನದಂಡ ಗಳನ್ನು ಅನುಸರಿಸಿ ಮಂಜೂರು ಮಾಡಲು ಕೂಡಾ ನಿಯಮ ತಿದ್ದುಪಡಿ ಮಾಡಲಾಗಿದೆ. ಇ– ಹರಾಜು ಅಧಿಸೂಚನೆಯಲ್ಲಿ ಕಾಲ ಕಾಲಕ್ಕೆ ವಿಧಿಸುವ ಷರತ್ತುಗಳಿಗೆ ಒಳಪಟ್ಟು ಅಬಕಾರಿ ಆಯುಕ್ತರ ಪೂರ್ವಾನುಮೋದನೆ ಪಡೆದು ಈ ಪರವಾನಗಿಗಳನ್ನು ಆಯಾ ಜಿಲ್ಲೆಯ ಜಿಲ್ಲಾಧಿಕಾರಿ ಹಂಚಿಕೆ ಮಾಡಬೇಕು ಎಂದೂ ನಿಯಮದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.
ಹರಾಜಿಗೆ ಯಾವುದೆಲ್ಲ?
‘ಕರ್ನಾಟಕ ಅಬಕಾರಿ (ಭಾರತೀಯ ಮತ್ತು ವಿದೇಶಿ ಮದ್ಯಗಳ ಮಾರಾಟ) (ಎರಡನೇ ತಿದ್ದುಪಡಿ) ನಿಯಮಗಳು– 2025’ ಅನ್ನು ನ. 3ರಂದು ಪ್ರಕಟಿಸ ಲಾಗಿದೆ. ಈ ದಿನದವರೆಗೆ ನವೀಕರಿಸದ ಯಾವುದೇ ಸಿಎಲ್‌ 2, ಸಿಎಲ್‌ 9 ಮತ್ತು ಸಿಎಲ್‌ 11ಸಿ ಪರವಾನಗಿಗಳನ್ನು ನವೀಕರಿಸದ ಮತ್ತು ಮುಟ್ಟುಗೋಲು ಹಾಕಿಕೊಂಡಿರುವ ಪರವಾನಗಿ ಎಂದು ಭಾವಿಸಿ ‘ಹರಾಜು ಪಟ್ಟಿ’ಯಲ್ಲಿ ಸೇರಿಸಲಾಗುತ್ತದೆ. ಅಲ್ಲದೆ, ಅಬಕಾರಿ ಸನ್ನದು ವರ್ಷ ಆರಂಭವಾದ ದಿನದಿಂದ (ಜುಲೈ 1) ಆರು ತಿಂಗಳ ಒಳಗೆ ಅಥವಾ ಪರವಾನಗಿದಾರ ಮೃತಪಟ್ಟ ದಿನದಿಂದ ಆರು ತಿಂಗಳ ಒಳಗೆ ನವೀಕರಿಸದ ಯಾವುದೇ ಸಿಎಲ್‌ 2, ಸಿಎಲ್‌ 9, ಸಿಎಲ್‌ 11ಸಿ, ಸಿಎಲ್‌ 2ಎ ಮತ್ತು ಸಿಎಲ್‌ 9ಎ ಪರವಾನಗಿಗಳನ್ನು ಅವಧಿ ಮುಕ್ತಾಯ ಗೊಂಡವುಗಳೆಂದು ಪರಿಗಣಿಸಿ ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಅಂತಹ ಸನ್ನದುಗಳು ಹರಾಜು ಮಾಡಲು ಪಟ್ಟಿಗೆ ಸೇರಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.