ADVERTISEMENT

ಸಚಿವರ ಜೊತೆ ಸಿ.ಎಂ ‘ಡಿನ್ನರ್‌’ ಸಭೆ: ಲೋಕಸಭೆ ಚುನಾವಣೆ ತಯಾರಿಗೆ ಚರ್ಚೆ?

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2024, 0:30 IST
Last Updated 2 ಫೆಬ್ರುವರಿ 2024, 0:30 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ನಿವಾಸದಲ್ಲಿ ಗುರುವಾರ ರಾತ್ರಿ ಆಯೋಜಿಸಿದ್ದ ಔತಣಕೂಟದಲ್ಲಿ ಬಹುತೇಕ ಎಲ್ಲ ಸಚಿವರು ಭಾಗವಹಿಸಿದರು. ಮುಂಬರುವ ಲೋಕಸಭೆ ಚುನಾವಣೆ ವಿಚಾರವಾಗಿ ಈ ವೇಳೆ ಅನೌಪಚಾರಿಕವಾಗಿ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಗುರುವಾರ ಬೆಳಿಗ್ಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಎಲ್ಲ ಸಚಿವರನ್ನು ರಾತ್ರಿಯ ಊಟಕ್ಕೆ ಮುಖ್ಯಮಂತ್ರಿ ಆಹ್ವಾನಿಸಿದ್ದರು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಸಚಿವರಾದ ಸತೀಶ ಜಾರಕಿಹೊಳಿ, ಎಚ್.ಕೆ. ಪಾಟೀಲ, ಶಿವರಾಜ ಎಸ್‌. ತಂಗಡಗಿ ಸೇರಿದಂತೆ ಅನೇಕರು ಭಾಗವಹಿಸಿದರು. 

ಲೋಕಸಭೆ ಚುನಾವಣೆಗೆ ಸಮರ್ಥವಾಗಿ ಕೆಲಸ ಮಾಡಬೇಕು. ಹಂಚಿಕೆ ಮಾಡಿರುವ ಉಸ್ತುವಾರಿ ಕ್ಷೇತ್ರಗಳ ಗೆಲುವಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಸಂಪುಟ ಸಹೋದ್ಯೋಗಿಗಳಿಗೆ ಮುಖ್ಯಮಂತ್ರಿ ಸಲಹೆ ನೀಡಿದ್ದಾರೆ ಎಂದು ಗೊತ್ತಾಗಿದೆ.

ADVERTISEMENT

ಬಿಜೆಪಿ ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದೆ. ಈ ವಿಚಾರದಲ್ಲಿ ನಾವು ತುಂಬ ಎಚ್ಚರಿಕೆಯಿಂದ ಇರಬೇಕಾಗಿದೆ. ಹೇಳಿಕೆಗಳನ್ನು ಕೊಡುವಾಗಲೂ ಸಂದರ್ಭ ನೋಡಿಕೊಂಡು ಮಾತನಾಡಬೇಕು. ಪಕ್ಷ ಮತ್ತು ಸರ್ಕಾರದ ವರ್ಚಸ್ಸಿಗೆ ಧಕ್ಕೆ ಆಗದಂತೆ ನಿಗಾ ವಹಿಸಬೇಕು ಎಂದೂ ಹೇಳಿದ್ದಾರೆ ಎನ್ನಲಾಗಿದೆ.

ಬಿಜೆಪಿಗೆ ಪೈಪೋಟಿ ನೀಡಲು ಎಲ್ಲ ರೀತಿಯಲ್ಲೂ ಪಕ್ಷ ಸಮರ್ಥವಾಗಿದೆ. ಆದರೆ, ಬಿಜೆಪಿಯವರು ಅಯೋಧ್ಯೆಯ ವಿಷಯವನ್ನೇ ಮುಂದಿಟ್ಟುಕೊಂಡು ಚುನಾವಣೆ ಎದುರಿಸಲು ಸಜ್ಜಾಗಿದ್ದಾರೆ. ಗೊಂದಲಕ್ಕೆ ಅವಕಾಶ ಆಗದಂತೆ ನಾವು ಎಚ್ಚರಿಕೆ ವಹಿಸಬೇಕಾಗಿದೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದೂ ಸಚಿವರಿಗೆ ಮುಖ್ಯಮಂತ್ರಿ ಕಿವಿಮಾತು ಹೇಳಿದ್ದಾರೆ ಎಂದು ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.