ADVERTISEMENT

ಲೋಕಸಭಾ ಚುನಾವಣೆ | ಮೋದಿ ನಿರೀಕ್ಷೆಗೆ ವ್ಯತಿರಿಕ್ತ ಫಲಿತಾಂಶ: ತನ್ವೀರ್‌ ಸೇಠ್‌

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2024, 12:07 IST
Last Updated 19 ಫೆಬ್ರುವರಿ 2024, 12:07 IST
ತನ್ವೀರ್‌ ಸೇಠ್‌
ತನ್ವೀರ್‌ ಸೇಠ್‌   

ಮೈಸೂರು: ‘ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಿದ್ದಾರೆ. ಆದರೆ, ಅವರ ನಿರೀಕ್ಷೆಗೆ ವ್ಯತಿರಿಕ್ತವಾದ ಫಲಿತಾಂಶ ಬರಲಿದೆ’ ಎಂದು ಕಾಂಗ್ರೆಸ್ ಶಾಸಕ ತನ್ವೀರ್‌ ಸೇಠ್‌ ವಿಶ್ವಾಸ ವ್ಯಕ್ತಪಡಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಸೋಮವಾರ ಮಾತನಾಡಿದ ಅವರು, ‘ದೇಶದ ಜನರು ಸ್ವಚ್ಛ ಹಾಗೂ ಪಾರದರ್ಶಕ ಆಡಳಿತವನ್ನು ಬಯಸಿದ್ದಾರೆ’ ಎಂದರು.

‘ರಾಜಕೀಯ ನಿಂತ ನೀರಲ್ಲ. ಅಧಿಕಾರದ ದಾಹ ಇರುವವರು ಪಕ್ಷ ತೊರೆಯುತ್ತಾರೆ. ಇದರಿಂದ ಪಕ್ಷಕ್ಕೆ ನಷ್ಟವೇನಿಲ್ಲ. ಬದ್ಧತೆ, ತತ್ವ– ಸಿದ್ಧಾಂತಗಳ ಮೇಲೆ ಕಾಂಗ್ರೆಸ್ ನಂಬಿಕೆ ಇಟ್ಟಿದೆ. ಬದ್ಧತೆ ಇಲ್ಲದೇ ಇರುವವರು ಬಿಟ್ಟು ಹೋಗುತ್ತಿದ್ದಾರಷ್ಟೆ’ ಎಂದು ಪ್ರತಿಕ್ರಿಯಿಸಿದರು.

ADVERTISEMENT

ರಾಜ್ಯಸಭಾ ಚುನಾವಣೆಗೆ ಜೆಡಿಎಸ್‌ನಿಂದ 5ನೇ ಅಭ್ಯರ್ಥಿ ಕಣಕ್ಕಿಳಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಜೆಡಿಎಸ್‌ಗೆ ಹೆಚ್ಚಿನ ಮತಗಳಿಲ್ಲ. ಗೆಲ್ಲುವ ಸಾಮರ್ಥ್ಯ ಇಲ್ಲದಿದ್ದರೂ 5ನೇ ಅಭ್ಯರ್ಥಿ ಕಣಕ್ಕಿಳಿಸಿದ್ದಾರೆ. ಕುದುರೆ ವ್ಯಾಪಾರದ ನಿರೀಕ್ಷೆಯಲ್ಲಿದ್ದಾರೆ. ಕಾಂಗ್ರೆಸ್‌ನ ಮೂವರು ಅಭ್ಯರ್ಥಿಗಳೂ ಸುಲಭವಾಗಿ ಗೆಲುವು ಸಾಧಿಸುತ್ತಾರೆ. ಜೆಡಿಎಸ್-ಬಿಜೆಪಿ ರಾಜಕೀಯ ತಂತ್ರಗಾರಿಕೆ ಫಲಿಸುವುದಿಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಅನ್ಯ ಪಕ್ಷದವರು ಕುದುರೆ ವ್ಯಾಪಾರದ ಮೂಲಕ ಶಾಸಕರನ್ನು ಸೆಳೆಯುವುದನ್ನು ತಪ್ಪಿಸಬೇಕು. ಪಕ್ಷಾಂತರ ನಿಷೇಧ ಕಾಯ್ದೆಯನ್ನು ಮತ್ತಷ್ಟು ಬಿಗಿಗೊಳಿಸಬೇಕು. ಶಾಸಕರು ಪಕ್ಷಾಂತರ ಮಾಡಿದರೆ ಮುಂದಿ‌ನ 6 ವರ್ಷ ಚುನಾವಣೆಗೆ ಸ್ಪರ್ಧಿಸದಂತೆ ಕಠಿಣ ಕ್ರಮ ಜರುಗಿಸುವಂತಾಗಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.