ADVERTISEMENT

Karnataka Lokayukta Raid | 7 ಕುಬೇರರ ಆಸ್ತಿ ₹22 ಕೋಟಿ

ಲೋಕಾಯುಕ್ತ ದಾಳಿ* ‘ನಿರ್ಮಿತಿ’ ನಿರ್ದೇಶಕರ ಬಳಿ 4 ಮನೆ, 12 ನಿವೇಶನ

​ಪ್ರಜಾವಾಣಿ ವಾರ್ತೆ
Published 16 ಮೇ 2025, 0:30 IST
Last Updated 16 ಮೇ 2025, 0:30 IST
<div class="paragraphs"><p>ರೇಣುಕಾ ಸಾತರ್ಲೆ ಅವರಿಂದ ವಶಪಡಿಸಿಕೊಂಡಿರುವ ನಗ, ನಗದು</p></div>

ರೇಣುಕಾ ಸಾತರ್ಲೆ ಅವರಿಂದ ವಶಪಡಿಸಿಕೊಂಡಿರುವ ನಗ, ನಗದು

   

ಬೆಂಗಳೂರು: ವಿವಿಧ ಇಲಾಖೆಗಳ ಏಳು ಅಧಿಕಾರಿಗಳ ಮನೆ, ಕಚೇರಿಗಳಲ್ಲಿ ಶೋಧ ನಡೆಸಿದ ಲೋಕಾಯುಕ್ತ ಪೊಲೀಸರು ₹22.78 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆ ಮಾಡಿದ್ದಾರೆ. 

ಘೋಷಿತ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ ಆರೋಪದ ಸಂಬಂಧ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆ, ತುಮಕೂರು, ಮಂಗಳೂರು, ವಿಜಯಪುರ, ಯಾದಗಿರಿಯ ಒಟ್ಟು 35  ಸ್ಥಳಗಳಲ್ಲಿ ಲೋಕಾಯುಕ್ತ ಪೊಲೀಸರ ತಂಡವು ಗುರುವಾರ ಬೆಳಿಗ್ಗೆಯೇ ಶೋಧ ನಡೆಸಿತು.  

ADVERTISEMENT

ಅಧಿಕಾರಿಗಳ ಮನೆಗಳನ್ನು ಜಾಲಾಡಿದ ಲೋಕಾಯುಕ್ತ ಪೊಲೀಸರು, ಕೋಟ್ಯಂತರ ಮೌಲ್ಯದ ಸ್ಥಿರಾಸ್ತಿ ಮತ್ತು ಚಿನ್ನಾಭರಣ ಪತ್ತೆ ಮಾಡಿದರು. ಅಧಿಕಾರಿಗಳು ನಿವೇಶನ ಮತ್ತು ಕೃಷಿ ಜಮೀನುಗಳ ಮೇಲೆ ಹೂಡಿಕೆ ಮಾಡಿರುವುದಕ್ಕೆ ಸಂಬಂಧಿಸಿದ ದಾಖಲೆಗಳು ಶೋಧದ ವೇಳೆ ಪತ್ತೆಯಾಗಿವೆ. 

ಆರೋಪಿಗಳ ಬಳಿ ₹16.48 ಕೋಟಿ ಮೌಲ್ಯದ ಸ್ಥಿರಾಸ್ತಿಗಳು, ₹33.68 ಲಕ್ಷ ನಗದು, ₹2.44 ಕೋಟಿ ಮೌಲ್ಯದ ಚಿನ್ನಾಭರಣ, ₹96.42 ಲಕ್ಷ ಮೌಲ್ಯದ ವಾಹನಗಳು, ₹2.55 ಕೋಟಿ ಮೌಲ್ಯದ ಇತರ ಸ್ವತ್ತುಗಳನ್ನು ಪತ್ತೆ ಮಾಡಲಾಗಿದೆ ಎಂದು ಲೋಕಾಯುಕ್ತ ಪೊಲೀಸ್ ವಿಭಾಗ ತಿಳಿಸಿದೆ. 

ತುಮಕೂರು ಜಿಲ್ಲೆಯ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಡಿ.ರಾಜಶೇಖರ್‌ ಬಳಿ ಅತ್ಯಧಿಕ ₹5.74 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆ ಮಾಡಲಾಗಿದೆ. ಅವರು ನಾಲ್ಕು ಮನೆಗಳು, 12 ನಿವೇಶನ, 4 ಎಕರೆ ಜಮೀನು ಹೊಂದಿರುವುದು ಪತ್ತೆಯಾಗಿದೆ. 

ಬೆಂಗಳೂರು ಸಿಟಿ ಮಾರ್ಕೆಟ್‌–1 ಉಪ ವಿಭಾಗದ ಕಾನೂನು ಮಾಪನ ನಿರೀಕ್ಷಕ ಎಚ್.ಆರ್.ನಟರಾಜ್‌ ಬಳಿ ₹3.94 ಕೋಟಿ ಅಕ್ರಮ ಆಸ್ತಿ ಇರುವುದು ತನಿಖೆಯಲ್ಲಿ ಬಯಲಾಗಿದೆ. ಅವರು ಎರಡು ನಿವೇಶನ, ಎರಡು ಮನೆ, 9 ಎಕರೆ ಕೃಷಿ ಜಮೀನಿನ ಒಡೆತನ ಹೊಂದಿರುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ತನಿಖಾ ತಂಡ ವಶಕ್ಕೆ ಪಡೆದಿದೆ. 

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನಗರ ಯೋಜನೆ ಹೆಚ್ಚುವರಿ ನಿರ್ದೇಶಕ ಟಿ.ವಿ.ಮುರಳಿ ಅವರ ಬಳಿ ₹3.47 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆ ಮಾಡಲಾಗಿದೆ. ಅವರ ಬಳಿ ಮೂರು ನಿವೇಶನಗಳು, ಮೂರು ವಾಸದ ಮನೆಗಳು ಪತ್ತೆಯಾಗಿವೆ. ಆರೋಪಿಗಳ ವಿರುದ್ಧ ಲೋಕಾಯುಕ್ತ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದೆ.

ಅನಂತ ಕುಮಾರ್ ಅವರ ನಿವಾಸ. 

ರೇಣುಕಾ ಮನೆಯಲ್ಲಿ ₹10 ಲಕ್ಷ ನಗದು

ವಿಜಯಪುರ: ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಹಿಂದಿನ ಜಿಲ್ಲಾ ವ್ಯವಸ್ಥಾಪಕಿ ರೇಣುಕಾ ಸಾತರ್ಲೆ ಅವರ ವಿಜಯಪುರ ಮತ್ತು ಮಹಾರಾಷ್ಟ್ರದ ಸೊಲ್ಲಾಪುರದ ನಗರ ದಲ್ಲಿರುವ ಮನೆಗಳಲ್ಲಿ ಅಧಿಕಾರಿಗಳು ಶೋಧ ನಡೆಸಿ, ₹2 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆ ಮಾಡಿದ್ದಾರೆ.

‘ದಾಳಿ ವೇಳೆ ₹10 ಲಕ್ಷ ನಗದು, ಚಿನ್ನಾಭರಣ, ವಾಹನಗಳು ಮತ್ತು ಇತರೆ ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳು ಸಿಕ್ಕಿವೆ. ₹2 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಅಕ್ರಮವಾಗಿ ಗಳಿಸಿರುವುದು ಪತ್ತೆಯಾಗಿದೆ’ ಎಂದು ಲೋಕಾಯುಕ್ತ ಎಸ್‌ಪಿ ಟಿ.ಮಲ್ಲೇಶ್‌ ತಿಳಿಸಿದರು.

ಅನಂತ್ ಕುಮಾರ್ ಅವರ ಮನೆಯಲ್ಲಿ ಪತ್ತೆಯಾದ ನಗದು, ಚಿನ್ನಾಭರಣ. 

ನಕಲಿ ಬಿಲ್ ಸೃಷ್ಟಿಸಿ ಕೋಟ್ಯಂತರ ರೂಪಾಯಿ ವಂಚನೆ

ತುಮಕೂರು: ಮೂರು ದಿನಗಳ ಹಿಂದೆ ಚೀನಾ ಪ್ರವಾಸಕ್ಕೆ ತೆರಳಿರುವ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಡಿ.ರಾಜಶೇಖರ್ ಮನೆ, ಕಚೇರಿಗಳಲ್ಲಿ ಲೋಕಾಯುಕ್ತ ಪೊಲೀಸರು ಶೋಧ ನಡೆಸಿದ್ದಾರೆ. 

ಅಶೋಕ ನಗರದಲ್ಲಿರುವ ರಾಜಶೇಖರ್ ಮನೆಯಲ್ಲಿ ಅವರ ಪತ್ನಿ ಸಮ್ಮುಖದಲ್ಲಿ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದರು. 

ಬೆಂಗಳೂರು, ತುಮಕೂರು ಸೇರಿದಂತೆ ವಿವಿಧೆಡೆ  12 ನಿವೇಶನ, ಬೆಂಗಳೂರಿನ ಕೆಂಗೇರಿ ಬಳಿಯ ಐಷಾರಾಮಿ ಫ್ಲ್ಯಾಟ್‌, ತುಮಕೂರಿನ ಹಿರೇಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಎರಡು ಕಾರ್ಖಾನೆ, ವಸಂತನರಸಾಪುರ ಕೈಗಾರಿಕಾ ಪ್ರದೇಶದ ಬಳಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ನಾಲ್ಕು ಎಕರೆ ಜಮೀನು ಸೇರಿದಂತೆ ಅಕ್ರಮವಾಗಿ ಸಂಪಾದಿಸಿರುವ ಅಪಾರ ಪ್ರಮಾಣದ ಆಸ್ತಿಯ ದಾಖಲೆ ಪತ್ತೆಯಾಗಿವೆ. ಪತ್ನಿ, ಸಂಬಂಧಿಕರ ಹೆಸರಿನಲ್ಲಿ ಆಸ್ತಿ ನೋಂದಣಿ ಮಾಡಿಸಿರುವುದು ಗೊತ್ತಾಗಿದೆ.

2023–24ರಲ್ಲಿ ಹಳೆ ಕಾಮಗಾರಿ ಹೆಸರಿನಲ್ಲಿ ನಕಲಿ ಬಿಲ್ ಸೃಷ್ಟಿಸಿ ₹2 ಕೋಟಿಗೂ ಅಧಿಕ ಮೊತ್ತ ಪಡೆದುಕೊಂಡಿರುವುದು, 2024–25ರಲ್ಲೂ ಹಳೆ ಕಾಮಗಾರಿಗಳಿಗೆ ನಕಲಿ ಬಿಲ್ ಸೃಷ್ಟಿಸಿ ₹3 ಕೋಟಿಗೂ ಅಧಿಕ ಮೊತ್ತ ಡ್ರಾ ಮಾಡಿಕೊಂಡಿದ್ದಾರೆ. ಸಂಬಂಧಿಕರ ಹೆಸರಿನಲ್ಲೂ ನಕಲಿ ಬಿಲ್ ಸೃಷ್ಟಿಸಿ ವಂಚಿಸಿರುವುದು ತಪಾಸಣೆ ವೇಳೆ ಗೊತ್ತಾಗಿದೆ.

ತುಮಕೂರಿನ ಅಶೋಕ ನಗರದಲ್ಲಿರುವ ರಾಜಶೇಖರ್ ಮನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.