ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಕಣಕುಂಬಿ ಬಳಿ ಮಹದಾಯಿ ನದಿ (ಸಂಗ್ರಹ ಚಿತ್ರ)
ನವದೆಹಲಿ: ಮಹದಾಯಿಯ ಬಂಡೂರಾ ನಾಲಾ ತಿರುವು ಯೋಜನೆಯ ಬಗ್ಗೆ ಕೇಂದ್ರ ಸರ್ಕಾರದ ಆಕ್ಷೇಪಕ್ಕೆ ಮಣಿದಿರುವ ರಾಜ್ಯ ಸರ್ಕಾರ, ಯೋಜನಾ ಮೊತ್ತದ ಶೇ 5ರಷ್ಟನ್ನು (₹32.85 ಕೋಟಿ) ವನ್ಯಜೀವಿ ಸಂರಕ್ಷಣೆಗೆ ಮೀಸಲಿಡಲು ತೀರ್ಮಾನಿಸಿದೆ.
‘ನಾಲಾ ತಿರುವು ಯೋಜನೆಯ ಪ್ರದೇಶವು ಭೀಮಗಡ ವನ್ಯಜೀವಿಧಾಮದ ವ್ಯಾಪ್ತಿಯಲ್ಲಿಲ್ಲ. ಆದರೆ, ಈ ಪ್ರದೇಶದಲ್ಲಿ ಹುಲಿ, ಚಿರತೆಯಂತಹ ಪ್ರಾಣಿಗಳು ಹಾಗೂ ಅಪರೂಪದ ಮರಗಳು ಇವೆ. ಹೀಗಾಗಿ, ರಾಜ್ಯ ಸರ್ಕಾರ ಜೀವವೈವಿಧ್ಯ ಯೋಜನೆ ರೂಪಿಸಬೇಕು’ ಎಂದು ಪ್ರಾದೇಶಿಕ ಉನ್ನತಾಧಿಕಾರ ಸಮಿತಿ (ಆರ್‌ಇಸಿ) ನಿರ್ದೇಶನ ನೀಡಿತ್ತು. ಅದರ ಬೆನ್ನಲ್ಲೇ ಯೋಜನೆ ರೂಪಿಸಿರುವ ರಾಜ್ಯ ಸರ್ಕಾರ, ‘ಅರಣ್ಯ ಸಂರಕ್ಷಣಾ ಕಾಯ್ದೆ ಪ್ರಕಾರ ವನ್ಯಜೀವಿ ಸಂರಕ್ಷಣಾ ಕಾರ್ಯಕ್ಕೆ ಶೇ 2.5 ಮೊತ್ತ ಮೀಸಲಿಡಬಹುದು. ಈ ಪ್ರಕರಣದಲ್ಲಿ ಶೇ 5 ಮೊತ್ತ ಮೀಸಲಿಡಲು ಜಲಸಂಪನ್ಮೂಲ ಇಲಾಖೆ ಒಪ್ಪಿಗೆ ಸೂಚಿಸಿದೆ’ ಎಂದು ಕೇಂದ್ರಕ್ಕೆ ತಿಳಿಸಿದೆ.
ಭೀಮಗಡ ವನ್ಯಜೀವಿ ಧಾಮದಲ್ಲಿರುವ ಗ್ರಾಮಸ್ಥರನ್ನು ಸ್ಥಳಾಂತರ ಮಾಡಲು ಈ ಮೊತ್ತ ಬಳಸಿಕೊಳ್ಳಲಾಗುವುದು. ಈ ಮೂಲಕ, ಕಾಡುಪ್ರಾಣಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ತಿಳಿಸಿದೆ.
ಮಹದಾಯಿ ಯೋಜನೆಯ ಮೂಲಕ ಜೂನ್‌ನಿಂದ ಅಕ್ಟೋಬರ್ ವರೆಗೆ ಹೆಚ್ಚುವರಿ ನೀರನ್ನು ಪಂಪ್ ಮಾಡಲಾಗುವುದು. ನವೆಂಬರ್‌ನಿಂದ ಸಂಗ್ರಹವಾಗುವ ನೀರು ಕಾಡುಪ್ರಾಣಿಗಳಿಗೆ ಬಳಕೆಯಾಗಲಿದೆ. ಈ ಯೋಜನೆಯಿಂದ ಜೀವವೈವಿಧ್ಯಕ್ಕೆ ಕನಿಷ್ಠ ಪ್ರಮಾಣದ ಹಾನಿ ಆಗಲಿದೆ. ಯೋಜನೆ ಅನುಷ್ಠಾನದ ಸಂದರ್ಭದಲ್ಲಿ 17 ಹೆಕ್ಟೇರ್ ಜಾಗವಷ್ಟೇ ಮುಳುಗಡೆ ಆಗಲಿದೆ ಎಂದು ಸ್ಪಷ್ಟಪಡಿಸಿದೆ.
ಯೋಜನೆಗೆ ಪೈಪ್‌ಲೈನ್, ಪಂಪ್‌ಹೌಸ್, ವಿದ್ಯುತ್ ಮಾರ್ಗ ನಿರ್ಮಾಣಕ್ಕಾಗಿ ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕಿನ ನೆರಸೆ, ಮಂತುರ್ಗ ಹಾಗೂ ಬಚೋಲಿ ಗ್ರಾಮಗಳ 71 ಎಕರೆ ಅರಣ್ಯ ಬಳಕೆಗೆ ಅನುಮೋದನೆ ಕೋರಿ ಕರ್ನಾಟಕ ನೀರಾವರಿ ನಿಗಮವು ಕೇಂದ್ರಕ್ಕೆ ಮೂರು ವರ್ಷಗಳ ಪ್ರಸ್ತಾವ ಸಲ್ಲಿಸಿತ್ತು. ಆದರೆ, ಕೇಂದ್ರದಿಂದ ಇಲ್ಲಿಯವರೆಗೆ ತಾತ್ವಿಕ ಅನುಮೋದನೆ ಸಿಕ್ಕಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.