ಮೈಸೂರು: ಕಡೆಯ ಎಸೆತದಲ್ಲಿ ಸಿಕ್ಸರ್ ಸಿಡಿಸಿದ ಪ್ರವೀಣ್ ದುಬೆ (ಔಟಾಗದೆ 53; 6x7) ಮೈಸೂರು ವಾರಿಯರ್ಸ್ ವಿರುದ್ಧ ಗುಲ್ಪರ್ಗ ಮಿಸ್ಟಿಕ್ಸ್‌ಗೆ ಏಳು ವಿಕೆಟ್‌ಗಳ ರೋಚಕ ಗೆಲುವು ತಂದುಕೊಟ್ಟರು.
ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯ ಬುಧವಾರದ ಪಂದ್ಯದಲ್ಲಿ ಗುಲ್ಪರ್ಗ ತಂಡದ ಆಟಗಾರರು ಹರಿಸಿದ ರನ್ ಹೊಳೆ ಹರಿಸಿದರು. ಹೀಗಾಗಿ ವಾರಿಯರ್ಸ್‌ನ ಎಂ.ವೆಂಕಟೇಶ್ (ಔಟಾಗದೆ 93; 53 ಎಸೆತ, 4x6, 6x5) ಅವರ ಸೊಗಸಾದ ಇನಿಂಗ್ಸ್ ಫಲ ನೀಡಲಿಲ್ಲ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಮೈಸೂರು ವಾರಿಯರ್ಸ್ ಎಸ್.ಯು.ಕಾರ್ತಿಕ್ (1) ಅವರ ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ತವರಿನ ಅಂಗಳದಲ್ಲಿ ಎಂ.ವೆಂಕಟೇಶ್ ಗೋಡೆಯಂತೆ ನಿಂತು ಜೊತೆಯಾಟಗಳ ಮೂಲಕ ಅದ್ಭುತ ಇನ್ನಿಂಗ್ಸ್ ಕಟ್ಟಿದರು. ನಾಯಕ ಮನೀಷ್ ಪಾಂಡೆ (29; 19 ಎಸೆತ, 4x6) ಜೊತೆ 73 ರನ್ (38 ಎಸೆತ) ಹಾಗೂ ಯಶೋವರ್ಧನ್ ಪರಂತಾಪ್ (48; 19 ಎಸೆತ, 4x3, 6x4) ಜೊತೆ 91 (46 ಎಸೆತ) ರನ್‌ಗಳನ್ನು ಸೇರಿಸಿದರು. ಈ ಮೂಲಕ ವಾರಿಯರ್ಸ್ 5 ವಿಕೆಟ್‌ಗೆ 209 ರನ್ ಕಲೆಹಾಕಿ ಮಿಸ್ಟಿಕ್ಸ್‌ಗೆ ಸವಾಲಿನ ಗುರಿ ನೀಡಿತು.
ಅಬ್ಬರಿಸಿದ ಲವನೀತ್, ದುಬೆ
ಕೆ.ಗೌತಮ್ ಅವರ ಮೊದಲ ಓವರ್‌ನಲ್ಲಿ ಗುಲ್ಬರ್ಗದ ಲವನೀತ್ ಸಿಸೋಡಿಯಾ (37; 13 ಎಸೆತ, 4x1, 6x5) ಸತತ 4 ಸಿಕ್ಸರ್ ಸಿಡಿಸಿ ವಾರಿಯರ್ಸ್‌ಗೆ ನಡುಕ ಹುಟ್ಟಿಸಿದರು. ಗೌತಮ್ ಮಿಶ್ರ ಬೌಲಿಂಗ್‌ನಲ್ಲಿ ಮತ್ತೊಂದು ಸಿಕ್ಸರ್ ಸಿಡಿಸಲು ಹೋಗಿ ಲವ್‌ನಿತ್ ಔಟಾದರು. ಇಬ್ಬರ ನಡುವೆ ಮಾತಿನ ಚಕಮಕಿಯೂ ನಡೆಯಿತು.
ತಾಳ್ಮೆಯಿಂದ ಆಡುತ್ತಿದ್ದ ನಿಕಿನ್ ಜೋಸ್ (21) ಗಾಯಗೊಂಡು ನಿವೃತ್ತರಾದರು. ಈ ವೇಳೆ ಆರ್.ಸ್ಮರಣ್ (38; 24 ಎಸೆತ, 6x4) ಹಾಗೂ ಕೆ.ವಿ.ಸಿದ್ಧಾರ್ಥ್ (ಔಟಾಗದೆ 49; 34 ಎಸೆತ, 4x5, 6x1) ಉಪಯುಕ್ತ ಇನ್ನಿಂಗ್ಸ್ ಕಟ್ಟಿದರು. 41 ಎಸೆತದಲ್ಲಿ 66 ರನ್ ಜೊತೆಯಾಟ ಬಂದಿತು. ಕಾರ್ತಿಕ್ ಬೌಲಿಂಗ್‌ನಲ್ಲಿ ಸ್ಮರಣ್ ಔಟಾದ ನಂತರ ಬಂದ ಪ್ರವೀಣ್ ದುಬೆ ಸಿಕ್ಸರ್‌ಗಳನ್ನು ಸಿಡಿಸಿ ಗೆಲುವಿನ ಆಸೆ ಚಿಗುರಿಸಿದರು. ಕಡೆ 5 ಓವರ್‌ನಲ್ಲಿ 73 ರನ್ ಪೇರಿಸಿದ ಇಬ್ಬರೂ ತಂಡವನ್ನು ಗೆಲುವಿನ ದಡ ಸೇರಿಸಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿಸಿದರು.
ಸಂಕ್ಷಿಪ್ತ ಸ್ಕೋರ್: ಮೈಸೂರು ವಾರಿಯರ್ಸ್ 20 ಓವರ್‌ಗಳಲ್ಲಿ 5ಕ್ಕೆ 209 (ಎಂ.ವೆಂಕಟೇಶ್ 93, ಯಶೋವರ್ಧನ್ ಪರಂತಾಪ್ 48, ಮನೀಷ್ ಪಾಂಡೆ 29. ಲವೀಶ್ ಕೌಶಲ್ 25ಕ್ಕೆ 2) ಗುಲ್ಬರ್ಗ ಮಿಸ್ಟಿಕ್ಸ್ 20 ಓವರ್‌ಗಳಲ್ಲಿ 3ಕ್ಕೆ 213 (ಪ್ರವೀಣ್ ದುಬೆ 53, ಕೆ.ವಿ.ಸಿದ್ಧಾರ್ಥ್ 49, ಆರ್.ಸ್ಮರಣ್ 38, ಲವ್‌ನಿತ್ ಸಿಸೋಡಿಯಾ 37. ಶಿಖರ್ ಶೆಟ್ಟಿ 32ಕ್ಕೆ 1) ಪಂದ್ಯದ ಆಟಗಾರ: ಪ್ರವೀನ್ ದುಬೆ
ಇಂದಿನ ಪಂದ್ಯಗಳು: ಮಂಗಳೂರು ಡ್ರ್ಯಾಗನ್ಸ್– ಮೈಸೂರು ವಾರಿಯರ್ಸ್. ಮಧ್ಯಾಹ್ನ 3.15
ಬೆಂಗಳೂರು ಬ್ಲಾಸ್ಟರ್ಸ್– ಶಿವಮೊಗ್ಗ ಲಯನ್ಸ್. ಸಂಜೆ 7.15
ನವೀನ ಆಲ್‌ರೌಂಡ್ ಆಟ: ಬ್ಲಾಸ್ಟರ್ಸ್‌ಗೆ ಮಣಿದ ಟೈಗರ್ಸ್
ಮೈಸೂರು: ಎಂ.ಜಿ.ನವೀನ ಅವರ ಆಲ್‌ರೌಂಡ್ ಆಟದ ಬಲದಿಂದ ಹುಬ್ಬಳ್ಳಿ ಟೈಗರ್ಸ್ ವಿರುದ್ಧ ಬೆಂಗಳೂರು ಬ್ಲಾಸ್ಟರ್ಸ್ 3 ವಿಕೆಟ್‌ಗಳ ರೋಚಕ ಜಯ ಸಾಧಿಸಿತು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಹುಬ್ಬಳ್ಳಿ ಟೈಗರ್ಸ್ ಎಸ್.ರಕ್ಷಿತ್ (61; 42 ಎಸೆತ 4x3, 6x4) ಅವರ ತಾಳ್ಮೆಯ ಅರ್ಧಶತಕದಿಂದ 8ಕ್ಕೆ 141 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿತು. ವಿದ್ಯಾಧರ ಪಾಟೀಲ (25ಕ್ಕೆ 2) ಮತ್ತು ಎಂ.ಜಿ.ನವೀನ್ (31ಕ್ಕೆ 2) ಉತ್ತಮ ಬೌಲಿಂಗ್ ದಾಳಿ ನಡೆಸಿದರು.
ಗುರಿ ಬೆನ್ನಟ್ಟಿದ ಬೆಂಗಳೂರು ಆಘಾತ ಅನುಭವಿಸಿತು. ಎಲ್.ಆರ್.ಚೇತನ್ (32), ಸೂರಜ್ ಅಹುಜಾ (26) ಹಾಗೂ ಎಂ.ಜಿ.ನವೀನ್ (33; 12 ಎಸೆತ, 4x2, 6x3) ಆಸರೆಯಾದರು. ಕಡೆ ಓವರ್‌ನಲ್ಲಿ ಬೌಂಡರಿ ಬಾರಿಸಿದ ನವೀನ್ ತಂಡವನ್ನು ಗೆಲುವಿನ ದಡ ಸೇರಿಸಿದರು.
ಸಂಕ್ಷಿಪ್ತ ಸ್ಕೋರ್: ಹುಬ್ಬಳ್ಳಿ ಟೈಗರ್ಸ್: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 141 (ಎಸ್.ರಕ್ಷಿತ್ 61, ವಿದ್ಯಾಧರ ಪಾಟೀಲ 25ಕ್ಕೆ2, ಎಂ.ಜಿ.ನವೀನ್ 31ಕ್ಕೆ2) ಬೆಂಗಳೂರು ಬ್ಲಾಸ್ಟರ್ಸ್: 19.2 ಓವರ್‌ಗಳಲ್ಲಿ 7ಕ್ಕೆ 145 (ಎಂ.ಜಿ.ನವೀನ್ 33, ಎಲ್.ಆರ್.ಚೇತನ್ 32, ಯಶ್‌ರಾಜ್ ಪೂಂಜ 34ಕ್ಕೆ 3) ಪಂದ್ಯದ ಆಟಗಾರ: ಎಂ.ಜಿ.ನವೀನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.