ADVERTISEMENT

ನಾಯಕತ್ವ ಗೊಂದಲ ಶೀಘ್ರ ಇತ್ಯರ್ಥ: ಜಾರಕಿಹೊಳಿ ನಿಯೋಗಕ್ಕೆ ಖರ್ಗೆ ಭರವಸೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 16:24 IST
Last Updated 21 ಫೆಬ್ರುವರಿ 2026, 16:24 IST
ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೆ.ಎನ್.ರಾಜಣ್ಣ ಹೂಗುಚ್ಛ ನೀಡಿದರು. ಎನ್‌.ಎಚ್‌.ಕೋನರಡ್ಡಿ, ಸತೀಶ ಜಾರಕಿಹೊಳಿ ಚಿತ್ರದಲ್ಲಿದ್ದಾರೆ 
ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೆ.ಎನ್.ರಾಜಣ್ಣ ಹೂಗುಚ್ಛ ನೀಡಿದರು. ಎನ್‌.ಎಚ್‌.ಕೋನರಡ್ಡಿ, ಸತೀಶ ಜಾರಕಿಹೊಳಿ ಚಿತ್ರದಲ್ಲಿದ್ದಾರೆ    

ನವದೆಹಲಿ: ಕರ್ನಾಟಕ ಕಾಂಗ್ರೆಸ್‌ ಸರ್ಕಾರದ ನಾಯಕತ್ವ ಗೊಂದಲ ಶೀಘ್ರ ಬಗೆಹರಿಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ನೇತೃತ್ವದ ನಿಯೋಗಕ್ಕೆ ಭರವಸೆ ನೀಡಿದರು. 

ಎಐಸಿಸಿ ಅಧ್ಯಕ್ಷರ ನಿವಾಸದಲ್ಲಿ ಖರ್ಗೆ ಅವರನ್ನು ಜಾರಕಿಹೊಳಿ, ಶಾಸಕರಾದ ಕೆ.ಎನ್‌. ರಾಜಣ್ಣ,  ಎನ್‌.ಎಚ್‌.ಕೋನರಡ್ಡಿ ಮತ್ತಿತರರು ಶನಿವಾರ ಭೇಟಿ ಮಾಡಿ ಚರ್ಚಿಸಿದರು. ಬಳಿಕ ಜಾರಕಿಹೊಳಿ ಹಾಗೂ ಖರ್ಗೆ ಪ್ರತ್ಯೇಕವಾಗಿ 20 ನಿಮಿಷ ಸಮಾಲೋಚಿಸಿದರು. 

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಾರಕಿಹೊಳಿ, ‘ರಾಜ್ಯದ ನಾಯಕತ್ವ ಗೊಂದಲಗಳು ಹಾಗೂ ಕೆಲವು ವಿಚಾರಗಳನ್ನು ಖರ್ಗೆ ಅವರ ಗಮನಕ್ಕೆ ತರಲಾಯಿತು. ಗೊಂದಲವನ್ನು ಶೀಘ್ರ ಬಗೆಹರಿಸುವಂತೆ ಮನವಿ ಮಾಡಿದ್ದೇನೆ. ಅಧ್ಯಕ್ಷರು ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ. ನಾಯಕತ್ವ ಗೊಂದಲ ಬಗೆಹರಿಸಲು ನಾವೊಂದು ತೀರ್ಮಾನಕ್ಕೆ ಬಂದಿದ್ದೇವೆ ಎಂದು ಖರ್ಗೆಯವರು ಮೊದಲ ಬಾರಿಗೆ ಹೇಳಿದ್ದಾರೆ. ಅವರ ತೀರ್ಮಾನಕ್ಕಾಗಿ ಇಡೀ ಪಕ್ಷ ಹಾಗೂ ಕಾರ್ಯಕರ್ತರು ಎದುರು ನೋಡುತ್ತಿದ್ದಾರೆ‘ ಎಂದರು. 

ADVERTISEMENT

‘ಹೈಕಮಾಂಡ್‌ ನಾಯಕರು ಈಗಾಗಲೇ ಒಂದು ತಾರ್ಕಿಕ ನಿರ್ಧಾರಕ್ಕೆ ಬಂದಿದ್ದಾರೆ. ಆದಷ್ಟು ಬೇಗ ಎಲ್ಲವೂ ಸರಿಯಾಗಬಹುದು‘ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ‘ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಗೊತ್ತಿಲ್ಲ. ಗೊಂದಲವಷ್ಟೇ ಬಗೆಹರಿಸಲು ಮನವಿ ಮಾಡಿದ್ದೇನೆ‘ ಎಂದು ಅವರು ಸ್ಪಷ್ಟಪಡಿಸಿದರು. 

‘ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆ ಮಾಡಿಲ್ಲ. ಮೊದಲು ಈಗಿರುವ ಗೊಂದಲಗಳು ಬಗೆಹರಿಯಲಿ‘ ಎಂದರು. 

ರಾಜಣ್ಣ ಮಾತನಾಡಿ, ‘ಸತೀಶ್ ಅವರ ಅಭಿಪ್ರಾಯಕ್ಕೆ ನಾವೆಲ್ಲ ಸಹಮತ ವ್ಯಕ್ತಪಡಿಸಿದ್ದೇವೆ. ಗೊಂದಲ ಇರುವುದು ಸರ್ಕಾರಕ್ಕೂ ಮತ್ತು ಪಕ್ಷಕ್ಕೂ ಒಳಿತಲ್ಲ‘ ಎಂದರು. ಸಚಿವ ಸಂಪುಟ ಪುನರ್‌ ರಚನೆ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ ಎಂದರು. 

ನಾಯಕತ್ವ ಬದಲಾವಣೆಯ ಗೊಂದಲ ಬಗೆಹರಿಸುವುದಾಗಿ ಸಚಿವ ಸತೀಶ ಜಾರಕಿಹೊಳಿಗೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಭರವಸೆ ನೀಡಿದ್ದರೆ ಬಹಳ ಸಂತೋಷ
-ಡಿ.ಕೆ. ಶಿವಕುಮಾರ್, ಉಪ ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.