ಮಾವು
ಬೆಂಗಳೂರು: ಕೇಂದ್ರ ಸರ್ಕಾರದ ಮಾರುಕಟ್ಟೆ ಮಧ್ಯಸ್ಥಿಕೆ ಬೆಲೆ ಯೋಜನೆ ಅಡಿಯಲ್ಲಿ 2025-26ನೇ ಸಾಲಿಗೆ ಅನ್ವಯ ಆಗುವಂತೆ 2.5 ಲಕ್ಷ ಟನ್ ಮಾವನ್ನು ಪ್ರತೀ ಕ್ವಿಂಟಲ್‌ಗೆ ₹1616 ರಂತೆ ಖರೀದಿ ಮಾಡಲಾಗುವುದು ಎಂದು ಕೇಂದ್ರ ಕೃಷಿ ಸಚಿವ ಶಿವರಾಜ ಸಿಂಗ್ ಚೌಹಾಣ್ ತಿಳಿಸಿದ್ದಾರೆ.
ಮಾವು ಬೆಳೆಗಾರರ ನೆರವಿಗೆ ಧಾವಿಸುವಂತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಚೌಹಾಣ್ ಅವರಿಗೆ ಮಂಗಳವಾರ ಪತ್ರ ಬರೆದಿದ್ದರು. ಸಚಿವರ ಪತ್ರಕ್ಕೆ ಚೌಹಾಣ್ ತಕ್ಷಣ ಸ್ಪಂದಿಸಿ ಎಂಐಎಸ್ ಅಡಿಯಲ್ಲಿ ಮಾವನ್ನು ಖರೀದಿ ಮಾಡುವುದಾಗಿ ಪ್ರಕಟಿಸಿದರು.
‘ಬೆಲೆ ಕುಸಿತದಿಂದ ಕಂಗಾಲಾಗಿದ್ದ ರಾಜ್ಯದ ಮಾವು ಬೆಳೆಗಾರರ ಹಿತದೃಷ್ಟಿಯಿಂದ ಮನವಿ ಮಾಡಿದ ತಕ್ಷಣವೇ ಮಾರುಕಟ್ಟೆ ಮಧ್ಯಸ್ಥಿಕೆ ಬೆಲೆ ಯೋಜನೆ ಅಡಿಯಲ್ಲಿ ಬೆಂಬಲ ಬೆಲೆ ಘೋಷಿಸಿದ್ದಕ್ಕಾಗಿ ಚೌಹಾಣ್ ಅವರಿಗೆ ಕರ್ನಾಟಕದ ಮಾವು ಬೆಳೆಗಾರರ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ’ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ಮಾವು ಕರ್ನಾಟಕದ ಪ್ರಮುಖ ತೋಟಗಾರಿಕಾ ಬೆಳೆಗಳಲ್ಲಿ ಒಂದಾಗಿದೆ. ಮಾವನ್ನು ರಾಜ್ಯದಲ್ಲಿ ಸುಮಾರು 1.39 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ, ಹೆಚ್ಚಾಗಿ ಬೆಂಗಳೂರು ಗ್ರಾಮೀಣ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಕೋಲಾರ ಮತ್ತು ರಾಮನಗರ ಜಿಲ್ಲೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ರಬಿ ಋತುವಿನಲ್ಲಿ ಅಂದಾಜು 8ರಿಂದ 10 ಲಕ್ಷ ಟನ್ ಮಾವು ಈ ಜಿಲ್ಲೆಗಳಲ್ಲಿ ಬೆಳೆಯಲ್ಪಡುತ್ತದೆ. ಹವಾಮಾನ ವೈಪರೀತ್ಯದಿಂದ ರೋಗರುಜಿನ ತಗುಲಿ ಪ್ರಸಕ್ತ ವರ್ಷದಲ್ಲಿ ಮಾವಿನ ಇಳುವರಿ ಶೇ 30ರಷ್ಟು ಕಡಿಮೆಯಾಗಿದೆ ಎಂದ ಅಂಶವನ್ನು ಕುಮಾರಸ್ವಾಮಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.