ADVERTISEMENT

‘ಮೌಲ್ವಿ’ ಮಗ ಕೋಟ್ಯಧಿಪತಿಯಾದ!

ಶಿವಾಜಿನಗರದಲ್ಲಿ ಬಾಲ್ಯ ಕಳೆದಿದ್ದ ‘ಐಎಂಎ ಸಮೂಹ ಕಂಪನಿ’ ಮಾಲೀಕ 2008ರಲ್ಲೂ ನಷ್ಟ ಅನುಭವಿಸಿದ್ದ

ಸಂತೋಷ ಜಿಗಳಿಕೊಪ್ಪ
Published 15 ಜೂನ್ 2019, 20:16 IST
Last Updated 15 ಜೂನ್ 2019, 20:16 IST
ಮನ್ಸೂರ್ ಖಾನ್
ಮನ್ಸೂರ್ ಖಾನ್   

ಬೆಂಗಳೂರು: ಆತ ಶಿವಾಜಿನಗರದ ಬೀದಿಗಳಲ್ಲಿ ಆಡಿ ಬೆಳೆದ ಹುಡುಗ. ‘ಮೌಲ್ವಿ’ ಆಗಿದ್ದ ತಂದೆ ಮಾರ್ಗದರ್ಶನದಲ್ಲಿ ಧಾರ್ಮಿಕ ಗ್ರಂಥಗಳನ್ನು ಅಭ್ಯಸಿಸಿದ್ದ ಆತ, ಧರ್ಮದ ಹೆಸರಿನಲ್ಲೇ ಅಮಾಯಕ ಜನರಿಂದ ಕೋಟ್ಯಂತರ ರೂಪಾಯಿ ಸಂಗ್ರಹಿಸಿ ಪರಾರಿಯಾಗಿದ್ದಾನೆ.

ಸಾವಿರಾರು ಜನರನ್ನು ವಂಚಿಸಿರುವ ‘ಐಎಂಎ ಸಮೂಹ ಕಂಪನಿ’ ಮಾಲೀಕ ಮಹಮದ್ ಮನ್ಸೂರ್ ಖಾನ್‌ನ ಬಾಲ್ಯ ಕೆದಕಿದಾಗ ರೋಚಕ ಮಾಹಿತಿಗಳು ಹೊರಬರುತ್ತವೆ.

ADVERTISEMENT

‘ಶಿವಾಜಿನಗರದ ಬೈದವಾಡಿಯ ಮನ್ಸೂರ್‌ ಖಾನ್‌ನದ್ದು ಮಧ್ಯಮ ವರ್ಗದ ಕುಟುಂಬ. ಅವರ ತಂದೆ, ಮದರಸಾಗಳಲ್ಲಿ ಪಾಠ ಮಾಡುತ್ತಿದ್ದರು. ಅವರ ಆಶ್ರಯದಲ್ಲಿ ಬೆಳೆದ ಮನ್ಸೂರ್, ಓದಿನಲ್ಲಿ ಮುಂದಿದ್ದ. ಕೋಲ್ಸ್‌ ಪಾರ್ಕ್ ಬಳಿಯ ನೆಹರು ಆಂಗ್ಲ ಮಾಧ್ಯಮ ಶಾಲೆಯಲ್ಲಿ 7ನೇ ತರಗತಿವರೆಗೆ ಓದಿದ್ದ. ನಂತರ ಬೇರೆ ಶಾಲೆಯಲ್ಲಿ ಪ್ರೌಢ ಶಿಕ್ಷಣ, ಬಿ.ಕಾಂ ಹಾಗೂ ಎಂಬಿಎ ಪೂರ್ಣಗೊಳಿಸಿದ್ದ’ ಎಂದು ಆತನನ್ನು ಹತ್ತಿರದಿಂದ ಬಲ್ಲ ನಿವಾಸಿಯೊಬ್ಬರು ಹೇಳುತ್ತಾರೆ.

‘ನಾನು ಮುಂದೊಂದು ದಿನ ದೊಡ್ಡ ಉದ್ಯಮಿ ಆಗುತ್ತೇನೆ. ಸಾವಿರಾರು ಜನರಿಗೆ ಕೆಲಸ ಕೊಡುತ್ತೇನೆ’ ಎಂದು ಸ್ನೇಹಿತರು ಹಾಗೂ ಸಂಬಂಧಿಕರ ಬಳಿ ಹೇಳುತ್ತಿದ್ದ ಮನ್ಸೂರ್, ಉನ್ನತ ಶಿಕ್ಷಣ ಮುಗಿಯುತ್ತಿದ್ದಂತೆ ಸೌದಿ ಅರೇಬಿಯಾಕ್ಕೆ ಹೋಗಿದ್ದ. 5 ವರ್ಷ ಅಲ್ಲಿಯೇ ವಾಸವಿದ್ದು, ಹಲವು ಕಂಪನಿಗಳಲ್ಲಿ ಕೆಲಸ ಮಾಡಿದ್ದ. ಷೇರು ವ್ಯವಹಾರದಲ್ಲಿ ಆಸಕ್ತಿ ಬೆಳೆಸಿಕೊಂಡು 2006ರಲ್ಲಿ ಬೆಂಗಳೂರಿಗೆ ವಾಪಸ್ ಬಂದು ಶಿವಾಜಿನಗರದಲ್ಲಿ ಸಣ್ಣ ಕೊಠಡಿಯೊಂದನ್ನು ಬಾಡಿಗೆ ಪಡೆದು ‘ಐಎಂಎ’ ಕಂಪನಿ ಆರಂಭಿಸಿದ್ದ’.

‘ಸ್ನೇಹಿತರು, ಸಂಬಂಧಿಕರು ಹಾಗೂ ವ್ಯಾಪಾರಿಗಳನ್ನು ಖುದ್ದಾಗಿ ಭೇಟಿ ಮಾಡಿ ಹಣ ಹೂಡಿಕೆ ಮಾಡುವಂತೆ ಕೋರುತ್ತಿದ್ದ. ಅದೇ ಸಮಯಕ್ಕೆ ಬೆಂಗಳೂರಿನಲ್ಲಿ ಹಲವು ಕಂ‍ಪನಿಗಳು ಕಡಿಮೆ ಲಾಭಾಂಶ ನೀಡುತ್ತಿದ್ದವು. ಹೆಚ್ಚಿನ ಲಾಭಾಂಶ ನೀಡುವುದಾಗಿ ಹೇಳಿದ್ದರಿಂದ ಕೆಲ ಗ್ರಾಹಕರು, ’ಐಎಂಎ’ಯಲ್ಲಿ ಹಣ ಹಾಕಿದ್ದರು.’

‘ಎರಡು ವರ್ಷ ಚೆನ್ನಾಗಿ ಕಂಪನಿ ನಡೆಸಿದ್ದ ಮನ್ಸೂರ್, 2008ರಲ್ಲಿ ನಷ್ಟ ಅನುಭವಿಸಿದ್ದ. ಹೂಡಿಕೆ ಮಾಡಿದ್ದ ಜನ ಹಣ ವಾಪಸ್‌ ನೀಡುವಂತೆ ಒತ್ತಾಯಿಸಲಾರಂಭಿಸಿದ್ದರು. ಪುನಃ ಸೌದಿ ಅರೇಬಿಯಾಕ್ಕೆ ಹೋಗಿದ್ದ ಆತ, ವರ್ಷದ ನಂತರ ವಾಪಸ್‌ ಬಂದು ಹಣವನ್ನು ಮರಳಿಸಿದ್ದ. ಇದು ಜನರ ಮನಗೆದ್ದಿತ್ತು’ ಎಂದು ಶಿವಾಜಿನಗರದ ನಿವಾಸಿಯೊಬ್ಬರು ಹೇಳಿದರು.

ಯಶಸ್ಸು ತಂದುಕೊಟ್ಟ ಜ್ಯುವೆಲ್ಸ್‌ ಮಳಿಗೆ: ಷೇರು ವ್ಯವಹಾರವನ್ನು ನಂಬಿಕೊಂಡರೆ ನಷ್ಟ ಉಂಟಾಗಬಹುದು ಎಂದು ಯೋಚಿಸಿದ್ದ ಮನ್ಸೂರ್, 2010ರಲ್ಲಿ ಶಿವಾಜಿನಗರದ ಬಾಡಿಗೆ ಕಟ್ಟಡದಲ್ಲಿ ‘ಐಎಂಎ ಜ್ಯುವೆಲ್ಸ್’ ಮಳಿಗೆ ಶುರು ಮಾಡಿದ್ದ. ಕಂತಿನಲ್ಲಿ ಹಣ ಕಟ್ಟಿ ಚಿನ್ನ ಪಡೆಯುವ ಕೊಡುಗೆಗಳನ್ನು ಘೋಷಿಸಿ ಜನರನ್ನು ಸೆಳೆದಿದ್ದ. ಬಾಡಿಗೆ ಕಟ್ಟಡದ ಜಾಗವನ್ನೇ ಖರೀದಿಸಿ ಅಲ್ಲಿ ಮೂರು ಅಂತಸ್ತಿನ ಕಟ್ಟಡವನ್ನೇ ನಿರ್ಮಿಸಿದ’

‘ಅದರ ಜೊತೆಗೇ ‘ಐಎಂಎ’ ಕಂಪನಿ ವ್ಯವಹಾರವನ್ನೂ ಮುಂದುವರಿಸಿ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿಸಿಕೊಂಡ. ತನ್ನ ಬಳಿ ಬಂದವರಿಗೆಲ್ಲ ಚಿನ್ನವನ್ನು ತೋರಿಸಿ, ‘ನಿಮ್ಮ ಹಣಕ್ಕೆ ಈ ಚಿನ್ನದ ಮಳಿಗೆಯೇ ಗ್ಯಾರಂಟಿ. ನಿಮಗೆ ನಷ್ಟವಾದರೆ ಚಿನ್ನ ಕೊಡುತ್ತೇನೆ’ ಎಂದು ನಂಬಿಸುತ್ತಿದ್ದ. ಹೀಗಾಗಿ ಹೂಡಿಕೆ ಮಾಡುವವರ ಸಂಖ್ಯೆಯೂ ಹೆಚ್ಚಾಗುತ್ತ ಹೋಯಿತು. ₹500 ಕೋಟಿ ಆಸ್ತಿ ಸಂಪಾದಿಸಿ, ₹1,500 ಕೋಟಿಗೂ ಹೆಚ್ಚು ಹೂಡಿಕೆಯುಳ್ಳ ಉದ್ಯಮಿಯಾದ’ ಎಂದು ಶಿವಾಜಿನಗರದ ನಿವಾಸಿಯೊಬ್ಬರು ಹೇಳಿದರು.

ದತ್ತು ಶಾಲೆಯ ಶಿಕ್ಷಕ, ಸಿಬ್ಬಂದಿಗೂ ವಂಚನೆ

‘ವಿಕೆಒ ಶಾಲೆಯನ್ನು ಸರ್ಕಾರದಿಂದ ದತ್ತು ಪಡೆದಿದ್ದ ಮನ್ಸೂರ್‌, ತನ್ನಕಂಪನಿಯ ಹೂಡಿಕೆದಾರರ ಮಕ್ಕಳನ್ನೇ ಅಲ್ಲಿ ಕೆಲಸಕ್ಕೆ ನಿಯೋಜಿಸಿಕೊಂಡಿದ್ದ. ಕಂಪನಿಯಿಂದಲೇ ವೇತನ ಪಾವತಿ ಮಾಡುತ್ತಿದ್ದ’ ಎಂದು ಶಾಲೆಯ ಸಿಬ್ಬಂದಿ ಹೇಳಿದರು.

‘ಕಂಪನಿ ನೀಡಿದ್ದ ವೇತನದ ಬಹುಪಾಲು ಹಣವನ್ನು ಶಿಕ್ಷಕರು ಹಾಗೂ ಸಿಬ್ಬಂದಿ, ಲಾಭಾಂಶದ ಆಸೆಗಾಗಿ ಕಂಪನಿಯಲ್ಲೇ ಹೂಡಿಕೆ ಮಾಡಿದ್ದರು. ಈಗ ಅವರೆಲ್ಲರಿಗೂ ವಂಚನೆಯಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.