ADVERTISEMENT

ಕಾರಿನಲ್ಲಿ ಒಬ್ಬರೇ ಹೋಗುವಾಗ ಮಾಸ್ಕ್ ಅನಗತ್ಯ

ಪರಿಷ್ಕೃತ ಆದೇಶ ಹೊರಡಿಸಿದ ಬಿಬಿಎಂಪಿ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2020, 19:41 IST
Last Updated 2 ನವೆಂಬರ್ 2020, 19:41 IST
   

ಬೆಂಗಳೂರು: ವಾಹನಗಳಲ್ಲಿ ಪ್ರಯಾಣಿಸುವಾಗ ಮಾಸ್ಕ್‌ ಧರಿಸುವುದಕ್ಕೆ ಸಂಬಂಧಿಸಿ ಬಿಬಿಎಂಪಿ ಪರಿಷ್ಕೃತ ಆದೇಶ ಹೊರಡಿಸಿದೆ. ಕಾರಿನಲ್ಲಿ ಕಿಟಕಿಯ ಗಾಜುಗಳನ್ನು ಮುಚ್ಚಿಕೊಂಡು ಒಬ್ಬರೇ ಪ್ರಯಾಣಿಸುವಾಗ ಮಾಸ್ಕ್‌ ಧರಿಸುವುದು ಕಡ್ಡಾಯವಲ್ಲ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್ ಅವರು ಸೋಮವಾರ ಆದೇಶ ಹೊರಡಿಸಿದ್ದಾರೆ.

ಕೋವಿಡ್‌ ನಿಯಂತ್ರಣ ಸಲುವಾಗಿ ಸರ್ಕಾರ ಜಾರಿಗೊಳಿಸಿರುವ ನಿಯಮಗಳ ಪ್ರಕಾರ, ಕಾರಿನಲ್ಲಿ ಕಿಟಕಿ ಗಾಜುಗಳನ್ನು ಮುಚ್ಚಿಕೊಂಡು ಒಬ್ಬರೇ ಪ್ರಯಾಣಿಸುವಾಗಲೂ ಮಾಸ್ಕ್‌ ಧರಿಸುವುದು ಇದುವರೆಗೆ ಕಡ್ಡಾಯವಾಗಿತ್ತು. ಇದಕ್ಕೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿತ್ತು. ಇದರ ಔಚಿತ್ಯವನ್ನೇ ಜನ ಪ್ರಶ್ನಿಸಿದ್ದರು. ಕಾರಿನಲ್ಲಿ ಒಬ್ಬರೇ ಪ್ರಯಾಣಿಸುವಾಗ ಮಾಸ್ಕ್‌ ಧರಿಸದ ಕಾರಣಕ್ಕೆ ಮಾರ್ಷಲ್‌ಗಳು ದಂಡ ವಿಧಿಸಿದಾಗ ಅವರ ಜೊತೆ ಜಗಳಕ್ಕೆ ಇಳಿಯುತ್ತಿದ್ದರು.

ವಾಹನಗಳಲ್ಲಿ ಪ್ರಯಾಣಿಸುವಾಗ ಮಾಸ್ಕ್‌ ಧರಿಸುವ ಕುರಿತ ಗೊಂದಲಗಳಿದ್ದವು. ಕೋವಿಡ್‌ ನಿಯಂತ್ರಣ ಸಲುವಾಗಿ ರಚಿಸಿರುವ ತಾಂತ್ರಿಕ ಸಲಹಾ ಸಮಿತಿಗೆ ಇತ್ತೀಚೆಗೆ ಪತ್ರ ಬರೆದಿದ್ದಬಿಬಿಎಂಪಿ ಆಯುಕ್ತರು ಈ ಬಗ್ಗೆ ಸ್ಪಷ್ಟೀಕರಣ ಕೋರಿದ್ದರು. ಸಮಿತಿಯ ಸ್ಪಷ್ಟೀಕರಣದ ಆಧಾರದಲ್ಲಿ ಬಿಬಿಎಂಪಿ ಮಾಸ್ಕ್‌ ಧರಿಸುವ ನಿಯಮಗಳಲ್ಲಿ ಮಾರ್ಪಾಡು ಮಾಡಿದೆ. ದ್ವಿಚಕ್ರ ವಾಹನಗಳಲ್ಲಿ ಒಬ್ಬರೇ ಪ್ರಯಾಣಿಸುವಾಗ ಮಾಸ್ಕ್ ಧರಿಸುವುದು ಈಗಲೂ ಕಡ್ಡಾಯವಾಗಿದೆ.

ADVERTISEMENT

ಮಾರ್ಷಲ್‌ಗಳಿಗೆ ತರಬೇತಿ:

ಬಿಬಿಎಂಪಿ ಈಗಿನ ನಿಯಮಗಳ ಪ್ರಕಾರ ಮೂಗು ಮತ್ತು ಬಾಯಿಗೆ ಕರವಸ್ತ್ರ ಕಟ್ಟಿಕೊಂಡರೂ ಸಾಕು. ಆದರೆ, ಮುಖಕ್ಕೆ ಕರ್ಚೀಫ್‌ ಕಟ್ಟಿಕೊಂಡವರಿಗೂ ಕೆಲವು ಕಡೆ ಮಾರ್ಷಲ್‌ಗಳು ದಂಡ ವಿಧಿಸುತ್ತಿದ್ದಾರೆ. ಬಿಬಿಎಂಪಿ ಜಾರಿಗೊಳಿಸುತ್ತಿರುವ ಕೋವಿಡ್‌ ನಿಯಂತ್ರಣ ನಿಯಮಗಳ ಬಗ್ಗೆ ಮಾರ್ಷಲ್‌ಗಳಿಗೇ ಸರಿಯಾಗ ಮಾಹಿತಿ ಇಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

‘ಕೋವಿಡ್‌ ನಿಯಂತ್ರಣಕ್ಕಾಗಿ ರೂಪಿಸಿರುವ ನಿಯಮಗಳ ಬಗ್ಗೆ ಕೆಲವು ಮಾರ್ಷಲ್‌ಗಳಿಗೆ ತಿಳಿವಳಿಕೆ ಇಲ್ಲದಿರುವುದು ಗಮನಕ್ಕೆ ಬಂದಿದೆ. ಅವರಿಗೆ ಈ ಬಗ್ಗೆ ತರಬೇತಿ ಏರ್ಪಡಿಸುತ್ತೇವೆ’ ಎಂದು ಬಿಬಿಎಂಪಿ ಆಯುಕ್ತರು ತಿಳಿಸಿದರು.

‘ಸಾರ್ವಜನಿಕ ಪ್ರದೇಶಗಳಲ್ಲಿ ಅಡ್ಡಾಡುವಾಗ ಜನರೂ ಸಮರ್ಪಕವಾಗಿ ಮಾಸ್ಕ್‌ ಧರಿಸಬೇಕು. ಆಗ ಮಾತ್ರ ಕೋವಿಡ್‌ ನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಾಧ್ಯ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.