ಬೆಂಗಳೂರು: ಮೇಕೆದಾಟು ಯೋಜನೆಯ ಶೀಘ್ರ ಜಾರಿಯಾಗಬೇಕು ಎಂದು ಒತ್ತಾಯಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆಯುವ ಪಾದಯಾತ್ರೆಯಲ್ಲಿ ನಾನು ಭಾಗವಹಿಸುತ್ತೇನೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, ‘ಮೇಕೆದಾಟು ಯೋಜನೆಯ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿದ್ದೇ ನಮ್ಮ ಸರ್ಕಾರ. ಯೋಜನೆ ಶೀಘ್ರ ಜಾರಿಯಾಗಬೇಕು ಎಂದು ಒತ್ತಾಯಿಸಿ ಪಾದಯಾತ್ರೆ ನಡೆಸಲು ತೀರ್ಮಾನ ಮಾಡಿರುವುದು ಕಾಂಗ್ರೆಸ್ ಪಕ್ಷ. ಪಾದಯಾತ್ರೆಗೆ ನಾನು ಹೋಗ್ತೇನೆ. ಡಿ.ಕೆ. ಶಿವಕುಮಾರ್ ಅವರೂ ಬರುತ್ತಾರೆ. ರಾಜ್ಯದ ಹಿತಾಸಕ್ತಿಯ ಕಾಳಜಿ ಇದ್ದವರು ಯಾರಾದರೂ ಬರಬಹುದು’ ಎಂದು ತಿಳಿಸಿದ್ದಾರೆ.
ಡಿಕೆಶಿ ಆಯೋಜಿಸಿರುವ ಪಾದಯಾತ್ರೆಯಲ್ಲಿ ಸಿದ್ದರಾಮಯ್ಯ ಅವರು ಭಾಗಿಯಾಗುವ ಸಾಧ್ಯತೆ ಇದೆಯೇ? ಎಂದು ಮಂಗಳವಾರ ಬಿಜೆಪಿ ಪ್ರಶ್ನಿಸಿತ್ತು. ಇದೀಗ ತಾವು ಪಾದಯಾತ್ರೆಯಲ್ಲಿ ಭಾಗವಹಿಸುತ್ತೇನೆ ಎಂದು ಖಚಿತಪಡಿಸುವ ಮೂಲಕ ಅವರು ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.