ಸಚಿವ ಸಂಪುಟ ಸಭೆ
ಬೆಂಗಳೂರು: ರಾಜ್ಯದಾದ್ಯಂತ ಸರ್ಕಾರಿ ಕಚೇರಿಗಳು, ಗಾರ್ಮೆಂಟ್ಸ್, ಬಹುರಾಷ್ಟ್ರೀಯ ಕಂಪನಿಗಳು, ಐಟಿ ಮತ್ತು ಇತರ ಖಾಸಗಿ ಕೈಗಾರಿಕೆಗಳು ಸೇರಿ ಎಲ್ಲಾ ವಲಯಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಪ್ರತಿ ತಿಂಗಳು ಒಂದು ದಿನದ ವೇತನ ಸಹಿತ ರಜೆ ನೀಡುವ ‘ಋತು ಚಕ್ರ ರಜೆ ನೀತಿ 2025’ ಕ್ಕೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಕಾನೂನು ಸಚಿವ ಎಚ್.ಕೆ.ಪಾಟೀಲ ಅವರು ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಋತುಚಕ್ರದ ಆರೋಗ್ಯವನ್ನು ಮಹಿಳೆಯರ ಹಕ್ಕುಗಳು ಮತ್ತು ಕೆಲಸದ ಸ್ಥಳದ ಕಲ್ಯಾಣದ ಮೂಲಭೂತ ಅಂಶವೆಂದು ಪರಿಗಣಿಸಿ ಅದರ ಮಹತ್ವವನ್ನು ಗುರುತಿಸಿದೆ. ಋತುಚಕ್ರ ರಜೆ ನೀತಿಯು ಮಹಿಳೆಯರು ಯಾವುದೇ ಕಳಂಕ ಅಥವಾ ಪರಿಣಾಮಗಳ ಭಯವಿಲ್ಲದೆ ತಮ್ಮ ಆರೋಗ್ಯಕ್ಕೆ ಆದ್ಯತೆ ನೀಡಬಹುದಾದ ಸಹಾಯಕ ವಾತಾವರಣವನ್ನು ಸೃಷ್ಟಿಸುವ ಸಕ್ರಿಯ ಹೆಜ್ಜೆಯಾಗಿದೆ ಎಂದರು.
ಋತುಚಕ್ರ ರಜೆಗೆ ದೇಶದಲ್ಲಿ ನಿರ್ದಿಷ್ಟವಾಗಿ ಯಾವುದೇ ಶಾಸನವಿಲ್ಲದಿದ್ದರೂ ಹಲವಾರು ರಾಜ್ಯ ಸರ್ಕಾರಗಳು ಮತ್ತು ಖಾಸಗಿ ಕಂಪನಿಗಳು ತಮ್ಮ ಮಹಿಳಾ ಉದ್ಯೋಗಿಗಳಿಗೆ ಋತುಚಕ್ರ ರಜೆ ನೀಡುವ ನೀತಿಗಳನ್ನು ಅಳವಡಿಸಿಕೊಂಡಿವೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.