ADVERTISEMENT

ಸಚಿವ ಸೋಮಣ್ಣ, ಸಂಸದ ಪ್ರತಾಪ ಸಿಂಹ ನಾಪತ್ತೆ!: ಜೆಡಿಎಸ್ ದೂರು

10 ದಿನಗಳ ಒಳಗೆ ಹುಡುಕಿಕೊಡಲು ಎಸ್‌ಪಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2020, 12:28 IST
Last Updated 18 ಮಾರ್ಚ್ 2020, 12:28 IST
ವಿ. ಸೋಮಣ್ಣ ಮತ್ತು ಪ್ರತಾಪ್ ಸಿಂಹ
ವಿ. ಸೋಮಣ್ಣ ಮತ್ತು ಪ್ರತಾಪ್ ಸಿಂಹ   

ಮಡಿಕೇರಿ: ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹಾಗೂ ಮೈಸೂರು–ಕೊಡಗು ಸಂಸದ ಪ್ರತಾಪ ಸಿಂಹ ಅವರು ಜಿಲ್ಲೆಯಲ್ಲಿ ಕಾಣಿಸಿಕೊಳ್ಳದೆ ಹಲವು ತಿಂಗಳು ಕಳೆದಿವೆ. ಅಪಹರಣ ಮಾಡಿರುವ ಸಾಧ್ಯತೆಯಿದ್ದು ಅವರನ್ನು ಹುಡುಕಿಕೊಡಬೇಕು ಎಂದು ಜಿಲ್ಲಾ ಜೆಡಿಎಸ್‌ ಮುಖಂಡರು ಬುಧವಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಮನ್‌ ಡಿ. ಪನ್ನೇಕರ್‌ ಅವರಿಗೆ ದೂರು ನೀಡಿದರು.

‘ಕೊಡಗಿನಲ್ಲೂ ಕೊರೊನಾ ವೈರಸ್ ಆತಂಕ ಸೃಷ್ಟಿಸಿದ್ದರೂ ಸಚಿವ ಹಾಗೂ ಸಂಸದ ಜಿಲ್ಲೆಗೆ ಭೇಟಿ ಕೊಟ್ಟಿಲ್ಲ. ಜಾಗೃತಿ ಕಾರ್ಯಕ್ರಮಗಳನ್ನೂ ನಡೆಸಿಲ್ಲ. ಇಬ್ಬರೂ ನಾಪತ್ತೆ ಆಗಿದ್ದಾರೆಯೋ ಅಥವಾ ಯಾರಾದರೂ ಅಪಹರಣ ಮಾಡಿದ್ದಾರೆಯೋ ಎಂಬುದೂ ತಿಳಿದಿಲ್ಲ. 10 ದಿನಗಳ ಒಳಗೆ ಅವರನ್ನು ಹುಡುಕಿಕೊಡಬೇಕು’ ಎಂದು ಜೆಡಿಎಸ್‌ ಜಿಲ್ಲಾ ಅಧ್ಯಕ್ಷ ಕೆ.ಎಂ.ಬಿ.ಗಣೇಶ್‌ ಕೋರಿದರು.

‘ಪೊಲೀಸ್ ಇಲಾಖೆ ಪ್ರಕರಣ ದಾಖಲಿಸಿಕೊಂಡು ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು. ಇಬ್ಬರು ಜಿಲ್ಲೆಗೆ ಶೀಘ್ರವೇ ಭೇಟಿ ನೀಡದಿದ್ದರೆ ಹೈಕೋರ್ಟ್‌ನಲ್ಲೂ ಅರ್ಜಿ ಸಲ್ಲಿಸುತ್ತೇವೆ’ ಎಂದು ಅವರು ಎಚ್ಚರಿಕೆ ನೀಡಿದರು.

ADVERTISEMENT

‘ಕಳೆದ ಆಗಸ್ಟ್‌ನಲ್ಲಿ ಅತಿವೃಷ್ಟಿಯಿಂದ ಉಂಟಾಗಿದ್ದ ಸಮಸ್ಯೆಗಳಿಗೂ ಇನ್ನೂ ಪರಿಹಾರ ಸಿಕ್ಕಿಲ್ಲ. ಸಂತ್ರಸ್ತರೂ ಸಂಕಷ್ಟದಲ್ಲಿಯೇ ಇದ್ದಾರೆ. ಈಗ ಕೊರೊನಾ ವೈರಸ್ ಜಿಲ್ಲೆಯ ಜನರಿಗೆ ಆತಂಕ ತಂದಿದೆ. ಆದರೆ, ಬಿಜೆಪಿ ಜನಪ್ರತಿನಿಧಿಗಳು ಜಿಲ್ಲೆಯನ್ನೇ ಮರೆತಿದ್ದಾರೆ’ ಎಂದು ಆಪಾಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.