ADVERTISEMENT

ಶಾಸಕರ ನಿಧಿಗೂ ಕಾಸಿಲ್ಲ: ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಕೇವಲ ₹50 ಲಕ್ಷ ಬಿಡುಗಡೆ

ಕೆ.ಜೆ.ಮರಿಯಪ್ಪ
Published 24 ಜನವರಿ 2020, 22:45 IST
Last Updated 24 ಜನವರಿ 2020, 22:45 IST
   
""

ಬೆಂಗಳೂರು: ಆರ್ಥಿಕ ವರ್ಷದ ಕೊನೆ ಹಂತಕ್ಕೆ ಕಾಲಿಟ್ಟಿದ್ದರೂ ‘ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ’ಗೆ ವಾರ್ಷಿಕ ನೀಡಬೇಕಾದ ₹2 ಕೋಟಿ ಬಿಡುಗಡೆ ಮಾಡದೇ ಇರುವ ಸರ್ಕಾರದ ಕ್ರಮ ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ.

ಶಾಸಕರನ್ನು ಭೇಟಿ ಮಾಡುವ ಕ್ಷೇತ್ರದ ಜನರು ರಸ್ತೆ, ಕುಡಿಯುವ ನೀರು ಸೇರಿದಂತೆ ತಮ್ಮ ಭಾಗದ ಅಭಿವೃದ್ಧಿ ಕೆಲಸಗಳಿಗೆ ಅನುದಾನ ನೀಡುವಂತೆ ಬೇಡಿಕೆ ಸಲ್ಲಿಸುವುದು ರೂಢಿ. ಈ ವರ್ಷ ಹಣ ಕೊಡದೇ ಇರುವುದರಿಂದ ತಮಗೆ ವೋಟು ಕೊಟ್ಟ ಮತದಾರರ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊಡಲಾಗುತ್ತಿಲ್ಲ. ಜನರಿಗೆ ಏನು ಉತ್ತರ ಹೇಳುವುದು ಎಂಬುದು ಶಾಸಕರು ಪಕ್ಷಾತೀತವಾಗಿ ಕೇಳುತ್ತಿರುವ ಪ್ರಶ್ನೆ.

ಕಳೆದ ಹತ್ತು ತಿಂಗಳಲ್ಲಿ ಮೊದಲ ಕಂತಾಗಿ ಪ್ರತಿ ಶಾಸಕರಿಗೆ ಸುಮಾರು ₹50 ಲಕ್ಷ ಬಿಡುಗಡೆಯಾಗಿದ್ದು, ಇನ್ನೂ ₹1.50 ಕೋಟಿ ನೀಡಬೇಕಿದೆ. ಈಗ ಬಾಕಿ ಹಣ ಬಿಡುಗಡೆಯಾದರೂ ಉಳಿದಿರುವ ಅತ್ಯಲ್ಪ ಸಮಯದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಖರ್ಚು ಮಾಡಲು ಆಗುವುದಿಲ್ಲ ಎಂಬುದು ಜನಪ್ರತಿನಿಧಿಗಳ ಅಳಲು.

ADVERTISEMENT

ಆರ್ಥಿಕ ಹಿಂಜರಿತ ಸೇರಿದಂತೆ ವಿವಿಧ ಕಾರಣಗಳಿಂದಾಗಿ ತೆರಿಗೆ ಸಂಗ್ರಹದಲ್ಲಿ ಹಿನ್ನಡೆಯಾಗಿದ್ದು, ಸಂಪನ್ಮೂಲ ಕೊರತೆಯಿಂದ ಶಾಸಕರ ನಿಧಿಗೂ ಹಣ ಕೊಡಲು ತತ್ವಾರ ಎದುರಾಗಿದೆ ಎಂದು ವಿರೋಧ ಪಕ್ಷದ ಸದಸ್ಯರು ಟೀಕಿಸಿದ್ದಾರೆ.

ಹೆಚ್ಚಿದ ಬೇಡಿಕೆ: ವರ್ಷಕ್ಕೆ ₹1 ಕೋಟಿ ನೀಡುತ್ತಿದ್ದ ಅನುದಾನವನ್ನು ₹2 ಕೋಟಿಗೆ ಹೆಚ್ಚಿಸಲಾಯಿತು. ಈ ಮೊತ್ತವೂ ಸಾಲದಾಗಿದ್ದು, ಮತ್ತಷ್ಟು ಹೆಚ್ಚಳ ಮಾಡಬೇಕು ಎಂದು ಶಾಸಕರು ಸದಾ ಒತ್ತಡ ಹಾಕುತ್ತಲೇ ಇದ್ದಾರೆ. ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಸಿ.ಎಂ ಆಗಿದ್ದಾಗಲೂ ಈ ಮೊತ್ತವನ್ನು ₹5 ಕೋಟಿಗೆ ಏರಿಸುವಂತೆ ಒತ್ತಾಯಿಸಿದ್ದರು. ಈ ಬಗ್ಗೆ ಸದನದ ಒಳಗೆ ಹಾಗೂ ಹೊರಗೆ ಸಾಕಷ್ಟು ಚರ್ಚೆಗಳು ನಡೆದಿದ್ದು, ಅನುದಾನ ಹೆಚ್ಚಳದ ಭರವಸೆ ಸಿಕ್ಕರೂ, ಅದು ಕಾರ್ಯರೂಪಕ್ಕೆ ಬಂದಿಲ್ಲ.

‘ಕ್ಷೇತ್ರದ ಜನರು ಅಭಿವೃದ್ಧಿ ಕೆಲಸಗಳಿಗೆ ಅನುದಾನ ಕೊಡಿಸುವಂತೆ ಕೇಳುತ್ತಿದ್ದು, ಉತ್ತರ ಕೊಡುವುದು ಕಷ್ಟಕರವಾಗಿದೆ’ ಎಂದು ವಿಧಾನ ಪರಿಷತ್‌ನ ಜೆಡಿಎಸ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಹೇಳಿದರು.

ಹಣ ಇದೆ: ‘ಜಿಲ್ಲಾಧಿಕಾರಿಗಳ ವೈಯಕ್ತಿಕ ಖಾತೆಯಲ್ಲಿ (ಪಿ.ಡಿ. ಖಾತೆ) ₹731 ಕೋಟಿ ಹಣ ಬಾಕಿ ಉಳಿದಿದೆ. ಈ ಹಣ ಖರ್ಚು ಮಾಡಬೇಕಿದ್ದು, ಹಂತಹಂತವಾಗಿ ಅನುದಾನ ಬಿಡುಗಡೆ ಮಾಡಲಾಗುವುದು’ ಎಂದು ಹೆಸರು ಹೇಳಲು ಬಯಸದಯೋಜನೆ ಹಾಗೂ ಸಾಂಖ್ಯಿಕ ಇಲಾಖೆ ಹಿರಿಯ ಅಧಿಕಾರಿಯೊಬ್ಬರುತಿಳಿಸಿದರು.

ನಿಧಿ ಬಳಕೆ ಯಾವುದಕ್ಕೆ

* ರಸ್ತೆ ಕಾಮಗಾರಿ, ಕುಡಿಯುವ ನೀರು

* ಶಾಲೆ, ಅಂಗನವಾಡಿ, ಕಾಲೇಜು ಕಟ್ಟಡಗಳ ನಿರ್ಮಾಣ, ದುರಸ್ತಿ

* ಹಾಲಿನ ಡೇರಿ, ಸರ್ಕಾರಿ ಕಟ್ಟಡಗಳ ನಿರ್ಮಾಣ

* ದೇವಸ್ಥಾನಗಳಲ್ಲಿ ಸಭಾಂಗಣ, ಸಮುದಾಯ ಭವನಗಳ ನಿರ್ಮಾಣ (₹10 ಲಕ್ಷ ಮಿತಿ)

* ಸರ್ಕಾರಿ ಜಾಗದಲ್ಲಿ ಸಾರ್ವಜನಿಕ ಬಳಕೆಗೆ ಸಮುದಾಯ ಭವನಗಳ ನಿರ್ಮಾಣ

* ಸರ್ಕಾರದ ವ್ಯಾಪ್ತಿಯಲ್ಲಿ ಬರುವ ವಿವಿಧ ಇಲಾಖೆಗಳು ಕೈಗೊಳ್ಳುವ ಅಭಿವೃದ್ಧಿ ಕಾರ್ಯಗಳಿಗೆ

**
ಶಾಸಕರ ಪ್ರದೇಶಾಭಿವೃದ್ಧಿ ನಿಧಿಗೆ ಸಮರ್ಪಕವಾಗಿ ಹಣ ಬಿಡುಗಡೆ ಮಾಡಿಲ್ಲ. ಸರ್ಕಾರ ದಿವಾಳಿಯಾಗಿರುವುದನ್ನು ತೋರಿಸುತ್ತದೆ
–ಎಸ್.ಆರ್.ಪಾಟೀಲ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ

*
ಹಂತಹಂತವಾಗಿ ಹಣ ಬಿಡುಗಡೆಯಾಗುತ್ತಿದೆ. ಕ್ರಿಯಾಯೋಜನೆ ತಯಾರಿಸಿ ಜಿಲ್ಲಾಧಿಕಾರಿಗೆ ಸಲ್ಲಿಸಿ, ಕೆಲಸ ಆರಂಭಿಸಲು ಯಾವುದೇ ತೊಡಕುಗಳಿಲ್ಲ
–ಎಸ್.ಆರ್.ವಿಶ್ವನಾಥ್, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.