ADVERTISEMENT

ಪತ್ರಕರ್ತರಿಗೆ ಹಣ ಹಂಚುವಂತೆ ಹೇಳಿಲ್ಲ: ಬಸವರಾಜ ಹೊರಟ್ಟಿ

ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹೊರಟ್ಟಿ ಹೆಸರಿನಲ್ಲಿ ಹಣ ಹಂಚಿಕೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2022, 19:31 IST
Last Updated 6 ಜೂನ್ 2022, 19:31 IST
ಬಸವರಾಜ ಹೊರಟ್ಟಿ
ಬಸವರಾಜ ಹೊರಟ್ಟಿ    

ಗದಗ: ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಹೆಸರಿನಲ್ಲಿ ಅವರ ಬೆಂಬಲಿಗರೊಬ್ಬರು ‘ಪ್ರಜಾವಾಣಿ’ ವರದಿಗಾರರಿಗೆ ಹಣ ನೀಡಲು ಬಂದಿದ್ದು, ಅದನ್ನು ಹಿಂತಿರುಗಿಸಲಾಗಿದೆ.

ಪತ್ರಿಕೆಯ ವರದಿಗಾರನಿಗೆ ಭಾನುವಾರ ಕರೆ ಮಾಡಿದ ವ್ಯಕ್ತಿಯು ಭೇಟಿ ಆಗಬೇಕಿದೆ ಎಂದು ಹೇಳಿದರು. ಚುನಾವಣೆ ಸಂದರ್ಭದಲ್ಲಿ ಹೆಚ್ಚಿನ ಪ್ರಚಾರ ನೀಡುವಂತೆ ಕೋರಿ ಹಣ ನೀಡಲು ಮುಂದಾದರು. ಸುದ್ದಿ ಪ್ರಕಟಿಸಲು ‘ಪ್ರಜಾವಾಣಿ’ ಹಣ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿ ಅವರ ಬೇಡಿಕೆಯನ್ನು ನಿರಾಕರಿಸಲಾಯಿತು.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ‘ಪ್ರಜಾವಾಣಿ’ ಬಸವರಾಜ ಹೊರಟ್ಟಿ ಅವರನ್ನು ಸಂಪರ್ಕಿಸಲಾಗಿ, ‘ನಾನು ಯಾವ ಪತ್ರಕರ್ತರಿಗೂ ಹಣ ಕೊಡುವಂತೆ ತಿಳಿಸಿಲ್ಲ. ಹಣ ಕೊಡಲು ಬಂದ ವ್ಯಕ್ತಿಯ ಜತೆಗೆ ಮಾತನಾಡಿ ಬುದ್ದಿಹೇಳುವೆ’ ಎಂದು ತಿಳಿಸಿದರು.

ADVERTISEMENT

‘ಕೆಲವು ವಾಹಿನಿಗಳು ಹಾಗೂ ಪತ್ರಿಕೆಗಳ ಪ್ರತಿನಿಧಿಗಳು ಹಣಕ್ಕಾಗಿ ಗಂಟು ಬೀಳುವುದನ್ನು ನೋಡಿದ್ದೇನೆ. ಆದರೆ, ಇಷ್ಟು ವರ್ಷಗಳ
ರಾಜಕೀಯ ಜೀವನದಲ್ಲಿ ನಾನು ಯಾರೊಬ್ಬರಿಗೂ ಹಣ ಕೊಟ್ಟಿಲ್ಲ. ಚುನಾವಣೆ ಸಂದರ್ಭದಲ್ಲಿ ನಾನು ಜಾಹೀರಾತನ್ನಷ್ಟೇ ಕೊಡುತ್ತೇನೆ’ ಎಂದು ಸ್ಪಷ್ಟಪಡಿಸಿದರು.

‘ಪತ್ರಿಕೋದ್ಯಮದಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ವ್ಯಕ್ತಿಗಳನ್ನು ಕಂಡು ಸಂತೋಷವಾಯಿತು. ಹತ್ತು ಮಂದಿಯಲ್ಲಿ ಒಬ್ಬರು ಪ್ರಾಮಾಣಿಕರು ಸಿಕ್ಕರೂ ನನಗೆ ಹೆಚ್ಚಿನ ಖುಷಿ ಆಗುತ್ತದೆ. ಹೊರಟ್ಟಿ ಅವರ ಹೆಸರಿನಲ್ಲಿ ಹಣ ಹಂಚಿಕೆ ಮಾಡಲು ಬಂದಿದ್ದರು ಎಂದು ಸುದ್ದಿ ಬರೆಯಿರಿ. ನನ್ನ ಅಭ್ಯಂತರವಿಲ್ಲ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.