ADVERTISEMENT

‘ಏನೇ ಬಂದರೂ ಸರ್ಕಾರ ನಮ್ಮದೇ’

ಸರ್ಕಾರ ರಚನೆ ಮೂಡ್‌ನಲ್ಲಿ ಬಿಜೆಪಿ ಕ್ಯಾಂಪ್‌

​ಪ್ರಜಾವಾಣಿ ವಾರ್ತೆ
Published 16 ಜುಲೈ 2019, 20:15 IST
Last Updated 16 ಜುಲೈ 2019, 20:15 IST
ಬೆಂಗಳೂರು ಹೊರವಲಯದ ರಮಡಾ ರೆಸಾರ್ಟ್‌ನಲ್ಲಿ ತಂಗಿರುವ ಬಿಜೆಪಿ ಶಾಸಕರೊಂದಿಗೆ ಮಂಗಳವಾರ ಕ್ರಿಕೆಟ್‌ ಆಡಿದ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ
ಬೆಂಗಳೂರು ಹೊರವಲಯದ ರಮಡಾ ರೆಸಾರ್ಟ್‌ನಲ್ಲಿ ತಂಗಿರುವ ಬಿಜೆಪಿ ಶಾಸಕರೊಂದಿಗೆ ಮಂಗಳವಾರ ಕ್ರಿಕೆಟ್‌ ಆಡಿದ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ   

ಬೆಂಗಳೂರು: ಸುಪ್ರೀಂಕೋರ್ಟ್‌ ಬುಧವಾರ ಯಾವುದೇ ಆದೇಶ ನೀಡಿದರೂ ಅದನ್ನು ಜೀರ್ಣಿಸಿಕೊಂಡು ಸರ್ಕಾರ ರಚಿಸುವ ವಿಶ್ವಾಸವನ್ನು ಬಿಜೆಪಿ ನಾಯಕರು ವ್ಯಕ್ತಪಡಿಸಿದ್ದಾರೆ.

‘ರಾಜೀನಾಮೆ ನೀಡಿರುವ ಶಾಸಕರು ತಮ್ಮ ನಿರ್ಧಾರಕ್ಕೆ ಬದ್ಧರಾಗಿ ಮತ್ತು ಗಟ್ಟಿಯಾಗಿ ನಿಂತಿರುವುದೇ ಬಿಜೆಪಿ ನಾಯಕರ ಅದಮ್ಯ ವಿಶ್ವಾಸಕ್ಕೆ ಕಾರಣ. ಒಂದು ವೇಳೆ ತಮ್ಮ ಶಾಸಕ ಸ್ಥಾನದಿಂದ ಅನರ್ಹಗೊಂಡರೂ ತಮ್ಮ ಮಕ್ಕಳು ಅಥವಾ ಪತ್ನಿಯನ್ನು ರಾಜಕೀಯಕ್ಕೆ ತರುತ್ತೇವೆಯೇ ಹೊರತು, ಹಿಂದೆ ಹೆಜ್ಜೆ ಇಡುವ ಪ್ರಶ್ನೆಯೇ ಇಲ್ಲ ಎಂದು ಶಪಥ ಮಾಡಿದ್ದಾರೆ’ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ರಾಜೀನಾಮೆ ಪ್ರಕರಣಗಳನ್ನು ಒಂದೆರಡು ದಿನಗಳಲ್ಲಿಯೇ ಇತ್ಯರ್ಥ ಮಾಡಿ ಎಂದು ಸುಪ್ರೀಂಕೋರ್ಟ್‌ ತನ್ನ ಆದೇಶದಲ್ಲಿ ತಿಳಿಸಬಹುದು. ವಿಪ್‌ ಮತ್ತು ಅನರ್ಹತೆ ಅಸ್ತ್ರಗಳ ಮೂಲಕ ರಾಜೀನಾಮೆ ನೀಡಿದ ಶಾಸಕರನ್ನು ಬೆದರಿಸಲಾಗುತ್ತಿದೆ. ಆದರೆ ಯಾವ ಶಾಸಕರೂ ಸೊಪ್ಪು ಹಾಕುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ ಕುಮಾರಸ್ವಾಮಿ ಸರ್ಕಾರ ಪತನವಾಗುವುದು ನಿಶ್ಚಿತ ಎಂಬ ನಿರಾಳ ಮನಸ್ಥಿತಿಯಲ್ಲಿ ನಾಯಕರು ಇದ್ದಾರೆ ಎನ್ನಲಾಗಿದೆ.

ADVERTISEMENT

ಎಂ.ಟಿ.ಬಿ.ನಾಗರಾಜ್‌ ಅವರು ಕಾಂಗ್ರೆಸ್‌ಗೆ ಕೈಕೊಟ್ಟು ಬಂದ ನಡೆಯಿಂದ ಅತೃಪ್ತ ಶಾಸಕರ ಬಗ್ಗೆ ಬಿಜೆಪಿ ನಾಯಕರಲ್ಲಿ ವಿಶ್ವಾಸ ಇನ್ನಷ್ಟು ಹೆಚ್ಚಾಗಿದೆ. ರಾಜೀನಾಮೆ ಕೊಟ್ಟು ಬೆಂಗಳೂರಿನಲ್ಲಿ ಉಳಿದಿರುವ ರಾಮಲಿಂಗಾರೆಡ್ಡಿ ಅವರು ಒಂದು ವೇಳೆ ಅಧಿವೇಶನಕ್ಕೆ ಹಾಜರಾದರೂ ಸರ್ಕಾರದ ಪರ ಮತ ಚಲಾಯಿಸುವ ಸಾಧ್ಯತೆ ಇಲ್ಲ ಎನ್ನಲಾಗಿದೆ.

ವಿಶ್ವಾಸ ಮತ ಯಾಚನೆ ದಿನ ಹಾಜರಾಗುವುದಾಗಿ ರಾಮಲಿಂಗಾರೆಡ್ಡಿ ಬಹಿರಂಗ ಹೇಳಿಕೆ ನೀಡಿದ್ದಾರೆ. ಬೇರೆ ಯಾವುದೇ ಅತೃಪ್ತ ಶಾಸಕರು ವಿಶ್ವಾಸ ಮತದಲ್ಲಿ ಹಾಜರಾಗುವ ಬಗ್ಗೆ ಇನ್ನೂ ಗುಟ್ಟು ಬಿಟ್ಟುಕೊಟ್ಟಿಲ್ಲ. ವಿಪ್‌ ಅಥವಾ ಅನರ್ಹತೆ ಅಸ್ತ್ರಕ್ಕೆ ಮಣಿದು ವಾಪಸ್‌ ಬರಬಹುದು ಎಂಬ ಕಾಂಗ್ರೆಸ್‌ನ ನಿರೀಕ್ಷೆ ಹುಸಿಯಾಗುತ್ತದೆ ಎಂಬುದು ಬಿಜೆಪಿ ನಾಯಕರ ತರ್ಕ.

ಬಿಎಸ್‌ವೈ ಕ್ರಿಕೆಟ್‌

ಬಿಜೆಪಿ ಸರ್ಕಾರ ರಚನೆ ಖಚಿತ ಎಂದು ನಂಬಿರುವ ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಶಾಸಕರ ಜತೆ ರಮಡಾ ಹೊಟೇಲ್‌ನ ಮೈದಾನದಲ್ಲಿ ಕ್ರಿಕೆಟ್ ಆಡಿದರು.

**

ಗುರುವಾರ ಕುಮಾರಸ್ವಾಮಿ ಭಾಷಣ ಮಾಡಿ ರಾಜೀನಾಮೆ ಸಲ್ಲಿಸುವುದು ಖಚಿತ. ಬಳಿಕ ಬಿಜೆಪಿ ಸರ್ಕಾರ ರಚನೆ ಆಗುತ್ತದೆ
- ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

**

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.