ADVERTISEMENT

‘ಸಂಕ್ರಾಂತಿ’ ವೇಳೆಗೆ ರಾಜಸ್ಥಾನದಲ್ಲಿ ನಂದಿನಿ ಹಾಲು ಮಾರಾಟ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2024, 14:09 IST
Last Updated 20 ಡಿಸೆಂಬರ್ 2024, 14:09 IST
<div class="paragraphs"><p>ನಂದಿನಿ</p></div>

ನಂದಿನಿ

   

ಬೆಂಗಳೂರು: ‘ಹಲವು ಸವಾಲು’ಗಳ ನಡುವೆಯೂ ದೆಹಲಿಯಲ್ಲಿ ನಂದಿನಿ ಹಾಲಿನ ಮಾರಾಟವನ್ನು ಯಶಸ್ವಿಯಾಗಿ ಮುಂದುವರಿಸಿರುವ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್‌), ಈಗ ಸಂಕ್ರಾಂತಿ ಹಬ್ಬದ‌ ನಂತರ ರಾಜಸ್ಥಾನದಲ್ಲೂ ಹಾಲು ಮಾರಾಟವನ್ನು ವಿಸ್ತರಿಸಲು ಸಿದ್ಧತೆ ನಡೆಸಿದೆ.

ಮೊದಲು ರಾಜಸ್ಥಾನದ ಜೈಪುರದಲ್ಲಿ ಹಾಲು ಮಾರಾಟ ಆರಂಭಿಸಲಾಗುತ್ತದೆ. ಸ್ಥಳೀಯವಾಗಿ ಪ್ಯಾಕಿಂಗ್ ಮಾಡಿಸಿ, ಗ್ರಾಹಕರಿಗೆ ಪೂರೈಸಲಾಗುವುದು ಎಂದು ಕೆಎಂಎಫ್‌ ಮೂಲಗಳು ತಿಳಿಸಿವೆ.

ADVERTISEMENT

‘ದೆಹಲಿಯಲ್ಲಿ ನಂದಿನಿ ಹಾಲಿನ ಪ್ಯಾಕೆಟ್ ತಯಾರಿಸಿಕೊಡುವ ಕಂಪನಿಯ ಮಾಲೀಕರೊಬ್ಬರು ರಾಜಸ್ಥಾನದಲ್ಲಿ ಹಾಲು ಮಾರಾಟ ಮಾಡಲು ಉತ್ಸಾಹ ತೋರಿದ್ದಾರೆ. ಆರಂಭದಲ್ಲಿ ನಿತ್ಯ 20 ಸಾವಿರ ಲೀಟರ್‌ಗಳವರೆಗೆ ಹಾಲು ಮಾರಾಟ ಮಾಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸಂಕ್ರಾಂತಿ ಹಬ್ಬದ ನಂತರ ಆ ಭಾಗದಲ್ಲಿ ಹಾಲು ಪೂರೈಕೆ ಮಾಡಲು ಅಗತ್ಯ ಸಿದ್ಧತೆಗಳು ನಡೆದಿವೆ’ ಎಂದು ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಉತ್ತರ ಭಾರತದ ಅಮೂಲ್‌, ಮದರ್‌ ಡೈರಿಯಂತಹ ಕಂಪನಿಗಳ ಹಾಲಿನ ದರ, ನಂದಿನಿಗಿಂತ ತುಸು ಹೆಚ್ಚಿದೆ. ಹೀಗಾಗಿ, ರಾಜಸ್ಥಾನದಲ್ಲಿ ಸ್ಪರ್ಧಾತ್ಮಕ ಬೆಲೆಯಲ್ಲಿ, ನಂದಿನಿ ಹಾಲು ಮಾರಾಟ ಮಾಡಲು ಸಾಧ್ಯ. ಗ್ರಾಹಕರ ಸ್ಪಂದನೆಯನ್ನು ಗಮನಿಸಿ ದರ ಪರಿಷ್ಕರಣೆ ಬಗ್ಗೆ ಚಿಂತನೆ ನಡೆಸಲಾಗುವುದು’ ಎಂದು ಅವರು ತಿಳಿಸಿದರು.

ನವೆಂಬರ್‌ 21ರಿಂದ ದೆಹಲಿಯಾದ್ಯಂತ ನಂದಿನಿ ಹಾಲು ಪೂರೈಕೆ ಆರಂಭವಾಗಿದೆ. ಮಂಡ್ಯ ಜಿಲ್ಲಾ ಹಾಲು ಒಕ್ಕೂಟ (ಮನ್‌ಮುಲ್‌), ಆಯ್ದ ಸಗಟು ಹಾಲು ಸಂಗ್ರಹ ಕೇಂದ್ರಗಳಿಂದ (ಬಿಎಂಸಿ) ಗುಣಮಟ್ಟದ ಹಾಲು ಸಂಗ್ರಹಿಸಿ, ಶೇ 1 ಡಿಗ್ರಿ ತಾಪಮಾನದಲ್ಲಿ ಇನ್ಸುಲೇಟೆಡ್‌‌ ಟ್ಯಾಂಕರ್‌ ಮೂಲಕ 15 ಸಾವಿರ ಲೀಟರ್‌ ಹಾಲನ್ನು ದೆಹಲಿಗೆ ಸರಬರಾಜು ಮಾಡುತ್ತಿದೆ. ‘ಈಗ ಎರಡು ದಿನಗಳಲ್ಲಿ ನಂದಿನಿ ಹಾಲು ದೆಹಲಿಯನ್ನು ತಲುಪುತ್ತಿದೆ. ಅಲ್ಲಿಂದಲೇ ಹಾಲನ್ನು ಪ್ಯಾಕ್‌ ಮಾಡಿ ಗ್ರಾಹಕರಿಗೆ ತಲುಪಿಸಲಾಗುತ್ತಿದೆ. ರಾಜಸ್ಥಾನದಲ್ಲಿ ಹಾಲಿನ ಮಾರಾಟ ಆರಂಭವಾದರೆ, ಅಲ್ಲಿಗೂ ಇದೇ ಮಾದರಿಯಲ್ಲೇ ಹಾಲು ಪೂರೈಸಲಾಗುವುದು’ ಎಂದು ಮನ್‌ಮುಲ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇನ್ನಷ್ಟು ಮಾದರಿಯ ಹಾಲು: ಸದ್ಯ ದೆಹಲಿಯಲ್ಲಿ ನಾಲ್ಕು ಮಾದರಿಯ ಹಾಲನ್ನು ಮಾರಾಟ ಮಾಡಲಾಗುತ್ತಿದೆ. ಇನ್ನು ಹದಿನೈದು–ಇಪ್ಪತ್ತು ದಿನಗಳಲ್ಲಿ ಇನ್ನೂ ನಾಲ್ಕು ಮಾದರಿಯ ಹಾಲನ್ನು  ಮಾರುಕಟ್ಟೆಗೆ ಪರಿಚಯಿಸಲಾಗುತ್ತದೆ ಎಂದು ಮನ್‌ಮುಲ್ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.