ಚಾಮರಾಜನಗರ: ಮೂಲ ದಾಖಲೆಗಳಿಲ್ಲದೆ ಸರ್ಕಾರದ ಸವಲತ್ತುಗಳಿಂದ ವಂಚಿತರಾಗಿದ್ದ ಜಿಲ್ಲೆಯ ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಜನರ ಮೊಗದಲ್ಲಿ ರಾಜ್ಯ ಸರ್ಕಾರದ ಪ್ರಾಯೋಗಿಕ ಯೋಜನೆ ‘ನನ್ನ ಗುರುತು’ ಅಭಿಯಾನವು ಮಂದಹಾಸ ಮೂಡಿಸಿದೆ.
ಬಡತನ, ಅನಕ್ಷರತೆ ಹಾಗೂ ಇತರೆ ಸಾಮಾಜಿಕ ಕಾರಣಗಳಿಂದ ಮೂಲ ದಾಖಲೆಗಳನ್ನು ಪಡೆಯಲಾಗದೆ ಅಸಹಾಯಕರಾಗಿದ್ದ ಆದಿವಾಸಿಗಳ ಮನೆಯ ಬಾಗಿಲಿಗೆ ಅಭಿಯಾನದಡಿ ಮೂಲ ದಾಖಲೆಗಳ ಸಹಿತ ಸರ್ಕಾರದ ಸೌಲಭ್ಯಗಳು ತಲುಪುತ್ತಿವೆ.
ಬಿಳಿಗಿರಿರಂಗನ ಬೆಟ್ಟ ಪಂಚಾಯಿತಿ ವ್ಯಾಪ್ತಿಯ 9 ಪೋಡುಗಳಲ್ಲಿ 624 ಪರಿಶಿಷ್ಟ ಕುಟುಂಬಗಳಿದ್ದು 1,814 ಜನಸಂಖ್ಯೆ ಇದೆ. ಅವರ ಪೈಕಿ 53 ಮಂದಿಯ ಬಳಿ ಆಧಾರ್ ಕಾರ್ಡ್, ಪಡಿತರ ಚೀಟಿ, ಬ್ಯಾಂಕ್ ಖಾತೆ, ಚುನಾವಣಾ ಗುರುತಿನ ಚೀಟಿ ಸಹಿತ ಯಾವುದೇ ದಾಖಲೆಗಳಿರಲಿಲ್ಲ.
ಅಭಿಯಾನದಡಿ 22 ಮಂದಿಗೆ ಜನನ ಪ್ರಮಾಣ ಪತ್ರ ವಿತರಿಸಿ ಅಗತ್ಯ ದಾಖಲೆಗಳನ್ನು ನೀಡಲಾಗುತ್ತಿದೆ. ಉಳಿದ 31 ಮಂದಿಯ ಶಾಲಾ ದಾಖಲಾತಿಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ಸಲ್ಲಿಸಿ ಜನನ ಪ್ರಮಾಣ ಪತ್ರ ಪಡೆಯುವ ಕಾರ್ಯ ಪ್ರಗತಿಯಲ್ಲಿದೆ.
‘ಅಭಿಯಾನದಡಿ ಗುರುತಿಸಿರುವ 13 ಸೇವೆಗಳ ಪೈಕಿ ಯುಡಿಐಡಿ ಕಾರ್ಡ್, ಭಾಗ್ಯಲಕ್ಷ್ಮೀ, ನರೇಗಾ ಉದ್ಯೋಗ ಚೀಟಿಗಳ ವಿತರಣೆಯಲ್ಲಿ ಶೇ 100 ಗುರಿ ಸಾಧಿಸಿದ್ದು, ಉಳಿಕೆ ಸೇವೆಗಳನ್ನು ತಲುಪಿಸುವ ಕಾರ್ಯ ಪ್ರಗತಿಯಲ್ಲಿದೆ’ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೋನಾ ರೋತ್.
ಏನಿದು ‘ನನ್ನ ಗುರುತು’: ‘ಪರಿಶಿಷ್ಟರ ಶ್ರೇಯೋಭಿವೃದ್ಧಿಗೆ ಜಾರಿಗೊಳಿಸಿರುವ ಕಾರ್ಯಕ್ರಮಗಳು ಅರ್ಹರಿಗೆ ಮುಟ್ಟಬೇಕು, ದಾಖಲಾತಿ ಇಲ್ಲವೆಂಬ ಕಾರಣಕ್ಕೆ ಸೌಲಭ್ಯ ವಂಚಿತರಾಗಬಾರದು’ ಎಂಬ ಉದ್ದೇಶದಿಂದ ಸರ್ಕಾರ ‘ನನ್ನ ಗುರುತು’ ಅಭಿಯಾನಕ್ಕೆ ಚಾಲನೆ ನೀಡಿದೆ.
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆಯು ಸಮಾಜ ಕಲ್ಯಾಣ ಇಲಾಖೆ ಸಹಭಾಗಿತ್ವದಲ್ಲಿ ಬೆಂಗಳೂರು ನಗರ ಜಿಲ್ಲೆಯ ಉತ್ತರ ತಾಲ್ಲೂಕಿನ ಹುಸ್ಕೂರು ಹಾಗೂ ಬಿಳಿಗಿರಿ ರಂಗನಬೆಟ್ಟ ಪಂಚಾಯಿತಿಯಲ್ಲಿ ಯೋಜನೆ ಪ್ರಾಯೋಗಿಕವಾಗಿ ಜಾರಿಯಾಗಿದೆ. ಎರಡೂ ಪಂಚಾಯಿತಿಗಳಲ್ಲಿ ದಾಖಲೆಗಳಿಲ್ಲದವರನ್ನು ಗುರುತಿಸಿ ದಾಖಲೆ ವಿತರಿಸಲಾಗುತ್ತಿದೆ.
ಎರಡೂ ಜಿಲ್ಲೆಗಳಲ್ಲಿ ಅಭಿಯಾನ ಯಶಸ್ವಿಯಾದರೆ ಕಲ್ಯಾಣ ಕರ್ನಾಟಕದ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ವಿಸ್ತರಿಸುವುದು ಸರ್ಕಾರದ ಉದ್ದೇಶ. ಕಾರ್ಯಕ್ರಮದ ಅನುಷ್ಠಾನ ಜವಾಬ್ದಾರಿಯನ್ನು ತಳಮಟ್ಟದಲ್ಲಿ ಕಾರ್ಯ ನಿರ್ವಹಿಸುವ ಪಿಡಿಒಗಳಿಗೆ ವಹಿಸಿ, ಉಸ್ತುವಾರಿಯನ್ನು ಜಿಲ್ಲಾ ಪಂಚಾಯಿತಿ ಸಿಇಒಗಳಿಗೆ ನೀಡಲಾಗಿದೆ.
‘ಹೊಸ ದಾಖಲಾತಿಗಳ ವಿತರಣೆಯ ಜೊತೆಗೆ ಹಳೆಯ ದಾಖಲಾತಿಗಳಲ್ಲಿ ಹೆಸರು ತಿದ್ದುಪಡಿ, ನವೀಕರಣ ಮಾಡಲಾಗುತ್ತಿದೆ. ಸೃಜಿಸಲಾದ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸಂರಕ್ಷಿಸಿಡಲು ಹಾಗೂ ಏಕೀಕೃತ ವ್ಯವಸ್ಥೆಯಲ್ಲಿ ಲಭ್ಯವಾಗುವಂತೆ ಡಿಜಿ ಲಾಕರ್ ಆ್ಯಪ್‌ಗೆ ಅಪ್‌ಲೋಡ್ ಮಾಡಲಾಗುತ್ತಿದೆ’ ಎನ್ನುತ್ತಾರೆ ಅಭಿಯಾನದ ಅನುಷ್ಠಾನದ ಹೊಣೆ ಹೊತ್ತಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಶಿಕಲಾ.
ಅಭಿಯಾನದಡಿ ಮೊದಲಿಗೆ ಬಿ.ಆರ್. ಹಿಲ್ಸ್ ಪಂಚಾಯಿತಿ ವ್ಯಾಪ್ತಿಯಲ್ಲಿ ಪರಿಶಿಷ್ಟ ಕುಟುಂಬಗಳ ಸಮೀಕ್ಷೆ ನಡೆಸಲಾಗಿದೆ. ದಾಖಲೆಗಳಿಲ್ಲದವರ ಮಾಹಿತಿ ಕಲೆ ಹಾಕಿ ಕಂದಾಯ ಆರೋಗ್ಯ ಆಹಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಕಾರ್ಮಿಕ ಯುವ ಸಬಲೀಕರಣ ಇಲಾಖೆ ಅಧಿಕಾರಿಗಳ ಸಹಕಾರದೊಂದಿಗೆ ಗ್ರಾಮಗಳಲ್ಲಿ ವಿಶೇಷ ಶಿಬಿರ ಆಯೋಜಿಸಿ ದಾಖಲೆಗಳನ್ನು ವಿತರಿಸಲಾಗುತ್ತಿದೆ.
ಬಿಆರ್ ಹಿಲ್ಸ್ ಪಂಚಾಯಿತಿಯಲ್ಲಿ ಆದಿವಾಸಿಗಳು ಹೆಚ್ಚಾಗಿ ಕಾಫಿ ತೋಟಗಳಲ್ಲಿ ಕೂಲಿ ಮಾಡುವುದರಿಂದ ಹಗಲಿನಲ್ಲಿ ಸಂಪರ್ಕ ಸವಾಲಾಗಿತ್ತು. ಕೂಲಿ ಮುಗಿಸಿ ಸಂಜೆ ಮನೆಗೆ ಬಂದ ಮೇಲೆ ಭೇಟಿಯಾಗಬೇಕಿತ್ತು. ಕಾಡಂಚಿನಲ್ಲಿ ಚದುರಿದಂತೆ ಮನೆಗಳು ಇರುವುದರಿಂದ ಹಾಗೂ ಕಾಡು ಪ್ರಾಣಿಗಳ ದಾಳಿ ಭೀತಿಯಿಂದ ಫಲಾನುಭವಿಗಳ ಸಂಪರ್ಕ ಕಷ್ಟವಾಗಿತ್ತು. ಸವಾಲುಗಳ ಮಧ್ಯೆಯೂ ‘ನನ್ನ ಗುರುತು’ ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದ್ದು ನೂರಾರು ಮಂದಿಗೆ ದಾಖಲೆಗಳನ್ನು ವಿತರಿಸಲಾಗಿದೆ ಎನ್ನುತ್ತಾರೆ ಬಿ.ಆರ್ ಹಿಲ್ಸ್ ಪಿಡಿಒ ಶಶಿಕಲಾ.
‘ನನ್ನ ಗುರುತು’ ಸರ್ಕಾರದ ಮಹತ್ವಾಕಾಂಕ್ಷಿ ಅಭಿಯಾನವಾಗಿದ್ದು ಜಿಲ್ಲೆಯಲ್ಲಿ ಪರಿಣಾಮಕಾರಿ ಅನುಷ್ಠಾನಕ್ಕೆ ಕ್ರಮ ವಹಿಸಲಾಗಿದೆ. ದಾಖಲೆಗಳಿಲ್ಲದವರಿಗೆ ದಾಖಲೆ ವಿತರಿಸಲಾಗುತ್ತಿದೆ.–ಮೋನಾ ರೋತ್, ಜಿಲ್ಲಾ ಪಂಚಾಯಿತಿ ಸಿಇಒ
ದಾಖಲಾತಿ ಮಾಡಿಸಿಕೊಳ್ಳಲು ಸರ್ಕಾರದ ಕಚೇರಿಗಳಿಗೆ ಅಲೆದು ಸಾಕಾಗಿತ್ತು. ‘ನನ್ನ ಗುರುತು’ ಅಭಿಯಾನದಡಿ ಮನೆ ಬಾಗಿಲಿಗೆ ಸರ್ಕಾರ ದಾಖಲೆ ವಿತರಿಸಿದ್ದು ಸಂತಸವಾಗಿದೆ.–ಬಸವರಾಜ್ ಫಲಾನುಭವಿ
ಅಭಿಯಾನದಡಿ ಲಭ್ಯ ಸೇವೆಗಳು
–ಆಧಾರ್ ಕಾರ್ಡ್
–ಜನನ–ಮರಣ ಜಾತಿ ಆದಾಯ ಪ್ರಮಾಣ ಪತ್ರ
–ಪಡಿತರ ಚೀಟಿ ಗುರುತಿನ ಚೀಟಿ
–ಬ್ಯಾಂಕ್ ಖಾತೆ
–ಪಿಂಚಣಿ
–ಆಯುಷ್ಮಾನ್ ಭಾರತ್ ಕಾರ್ಡ್
–ಪಿಎಂಜೆಜೆಬಿವೈ ಪಿಎಂಎಸ್‌ಬಿವೈ ವಿಮಾ ಸೌಲಭ್ಯ
–ಇ ಶ್ರಮ ಚೀಟಿ
–ಯುಡಿಐಡಿ ಕಾರ್ಡ್
–ಭಾಗ್ಯಲಕ್ಷ್ಮೀ ಯೋಜನೆ
–ನರೇಗಾ ಚೀಟಿ
Highlights - ರಾಜ್ಯದ ಎರಡು ಪಂಚಾಯಿತಿಗಳಲ್ಲಿ ಪ್ರಾಯೋಗಿಕ ಅನುಷ್ಠಾನ ಅಭಿಯಾನ ಯಶಸ್ವಿಯಾದರೆ ಕಲ್ಯಾಣ ಕರ್ನಾಟಕಕ್ಕೆ ವಿಸ್ತರಣೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.