ADVERTISEMENT

ಒಳನೋಟ| ಕೆಂಡದಂಥ ಬಿಸಿಲಲ್ಲೇ ಖಾತ್ರಿ ಕೆಲಸ!

ಫೆಬ್ರುವರಿಯಿಂದೀಚೆಗೆ ಕಲಬುರಗಿಯಲ್ಲಿ ಮೂವರು ನರೇಗಾ ಕಾರ್ಮಿಕರ ಸಾವು

ಮನೋಜ ಕುಮಾರ್ ಗುದ್ದಿ
Published 25 ಜೂನ್ 2022, 20:37 IST
Last Updated 25 ಜೂನ್ 2022, 20:37 IST
ಕಲಬುರಗಿ ತಾಲ್ಲೂಕಿನ ಹೊನ್ನಕಿರಣಗಿ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಕೆಲಸ ಇತ್ತೀಚೆಗೆ ನಡೆಯಿತು
ಕಲಬುರಗಿ ತಾಲ್ಲೂಕಿನ ಹೊನ್ನಕಿರಣಗಿ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಕೆಲಸ ಇತ್ತೀಚೆಗೆ ನಡೆಯಿತು   

ಕಲಬುರಗಿ: ಕಲ್ಯಾಣ ಕರ್ನಾಟಕದ ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಕೆಂಡದಂಥ ಬಿಸಿಲಿನ ಮಧ್ಯೆಯೇ ಹೊಟ್ಟೆಪಾಡಿಗಾಗಿ ಕಾರ್ಮಿಕರು ಉದ್ಯೋಗ ಖಾತ್ರಿ ಕೆಲಸವನ್ನು ಮಾಡಬೇಕಾದ ಅನಿವಾರ್ಯತೆ ಇದೆ.

ಫೆಬ್ರುವರಿಯಿಂದ ಈವರೆಗೆ ಕಲಬುರಗಿ ಜಿಲ್ಲೆಯ ವಿವಿಧೆಡೆ ಕೆಲಸದ ಸ್ಥಳದಲ್ಲಿ ಮೂವರು ಕೂಲಿ ಕಾರ್ಮಿಕರು ಮೃತಪಟ್ಟಿದ್ದಾರೆ. ಕೆಲಸ ನಡೆಯುವ ಸ್ಥಳದಲ್ಲಿ ಸಂಬಂಧಿಸಿದ ಗ್ರಾಮ ಪಂಚಾಯಿತಿಯು ಟೆಂಟ್ ಹಾಕಿಸಿ ಸೂಕ್ತ ನೆರಳಿನ ವ್ಯವಸ್ಥೆಯ ಜೊತೆಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು. ಕೂಲಿ ಕೆಲಸಕ್ಕೆ ಬಂದ ಮಹಿಳೆಯರೊಂದಿಗೆ ಇರುವ ಮಕ್ಕಳಿಗೆ ಹಾಲು, ಬಿಸ್ಕಟ್ ವ್ಯವಸ್ಥೆ ಮಾಡಬೇಕು. ಜೊತೆಗೆ ವೈದ್ಯಕೀಯ ಕಿಟ್ ಇಡಬೇಕು ಎಂಬುದು ನಿಯಮ. ಆದರೆ, ‘ಪ್ರಜಾವಾಣಿ’ ನರೇಗಾ ಕೆಲಸ ನಡೆಯುವ ಸ್ಥಳಗಳಿಗೆ ಭೇಟಿ ನೀಡಿದಾಗ ನೀರು, ನೆರಳಿನ ವ್ಯವಸ್ಥೆಯನ್ನೂ ಮಾಡದೇ ಇರುವುದು ಕಂಡುಬಂತು.

60 ದಾಟಿದ ವೃದ್ಧರಿಗೆ ಕಡಿಮೆ ಶ್ರಮದ ಕೆಲಸ ಕೊಡಬೇಕು. ಅದರೆ, ಯುವಕರು ಮಾಡುವ ತಗ್ಗು ತೋಡುವ ಕೆಲಸವನ್ನೇ ಹಿರಿಯರೂ ಮಾಡಬೇಕಿದೆ. ನಿಗದಿತ ಅಳತೆಯ ತಗ್ಗು ತೋಡದಿದ್ದರೆ ಕಡಿಮೆ ಕೂಲಿ ನೀಡುವುದಾಗಿ ಬೆದರಿಸುತ್ತಾರೆ ಎಂಬ ಆರೋಪಗಳೂ ಇವೆ.

ADVERTISEMENT

ಚಿತ್ತಾಪುರ ತಾಲ್ಲೂಕಿನ ಹಲಕರ್ಟಿಯ ಮಲ್ಲಣ್ಣ ಇಸಬಾ (68), ಆಳಂದ ತಾಲ್ಲೂಕು ರುದ್ರವಾಡಿಯ ಸೂರ್ಯಕಾಂತ ಕಲ್ಯಾಣಿ ಪಂಚಾಳ (42) ಮತ್ತು ಶಹಾಬಾದ್ ತಾಲ್ಲೂಕು ಹೊನಗುಂಟಾ ಗ್ರಾಮದ ಶಂಕರ ಸಾಯಿಬಣ್ಣ (37) ಕೆಲಸ ಮಾಡುವ ಸಂದರ್ಭದಲ್ಲೇ ಮೃತಪಟ್ಟಿದ್ದಾರೆ.

‘ಶಂಕರ ಅವರ ಸಾವಿಗೆ ಹೃದಯಾಘಾತವೇ ಕಾರಣ ಎಂಬುದು ಅವರ ಮರಣೋತ್ತರ ಪರೀಕ್ಷೆಯಿಂದ ಗೊತ್ತಾಗಿದೆ’ ಎಂದು ವೈದ್ಯ ಡಾ. ಬೀರನಾಥ ತಿಳಿಸಿದ್ದಾರೆ. ‘ಸೂರ್ಯಕಾಂತ ಕಲ್ಯಾಣಿ ಪ್ರಜ್ಞೆ ತಪ್ಪಿ ಕುಸಿದು ಬಿದ್ದರು’ ಎಂದು ವೈದ್ಯರು ತಿಳಿಸಿದ್ದಾರೆ.ಮಲ್ಲಣ್ಣ ಇಸಬಾ ಅವರ ಮರಣೋತ್ತರ ಪರೀಕ್ಷೆಗೆ ಕುಟುಂಬದವರು ಒಪ್ಪಲಿಲ್ಲ.

‘ಕೆಲಸ ನಡೆಯುವ ಸ್ಥಳಗಳಲ್ಲಿ ಆಗಾಗ ಕೂಲಿಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಿದರೆ ಅನುಕೂಲವಾಗುತ್ತದೆ. ನೀರು ಮತ್ತು ನೆರಳಿನ ವ್ಯವಸ್ಥೆ ಮಾಡಬೇಕು. ನರೇಗಾ ಅಧಿಕಾರಿಗಳು ಟೆಂಟ್, ಕುಡಿಯುವ ನೀರಿನ ಬಿಲ್ ಸೇರಿಸಿಯೇ ಅಂದಾಜು ಪಟ್ಟಿ ತಯಾರಿಸಿರುತ್ತಾರೆ. ಆದರೂ, ಕನಿಷ್ಠ ಸೌಲಭ್ಯ ಕಲ್ಪಿಸುವುದಿಲ್ಲ’ ಎಂದು ಮಲ್ಲಣ್ಣ ಇಸಬಾ ಅವರ ಸಂಬಂಧಿ ಈರಣ್ಣ ಇಸಬಾ ಬೇಸರ ವ್ಯಕ್ತಪಡಿಸಿದರು.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.