ಸಿದ್ದರಾಮಯ್ಯ
ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮೇಲೆ ಎಫ್‌ಐಆರ್ ದಾಖಲಿಸಿರುವುದು ಬಿಜೆಪಿಯ ದ್ವೇಷ ರಾಜಕೀಯದ ಮುಂದುವರಿದ ಭಾಗವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
'ವಿರೋಧ ಪಕ್ಷದ ಧ್ವನಿಯನ್ನು ಹತ್ತಿಕ್ಕಲು ಸಾಂಸ್ಥಿಕ ಸಂಸ್ಥೆಗಳನ್ನು ಪದೇ ಪದೇ ಬಳಕೆ ಮಾಡಿದಾಗ ಅದು ನಮ್ಮ ಪ್ರಜಾಪ್ರಭುತ್ವದ ಅಡಿಪಾಯವನ್ನೇ ದುರ್ಬಲಗೊಳಿಸುತ್ತದೆ. ಬೆದರಿಕೆ ಹಾಕುವ ಈ ಸ್ವರೂಪ ಬಿಜೆಪಿಯವರ ಭಯವನ್ನು ತೋರಿಸುತ್ತದೆ ವಿನಾ ಧೈರ್ಯವನ್ನಲ್ಲ' ಎಂದು ಹೇಳಿದ್ದಾರೆ.
'ಈ ಸಂದಿಗ್ಧ ಪರಿಸ್ಥಿತಿಯಲ್ಲಿ ತಮ್ಮ ಬದುಕನ್ನೇ ದೇಶದ ಸಾರ್ವಜನಿಕ ಸೇವೆಗೆ ಮುಡಿಪಾಗಿಟ್ಟಿರುವ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರೊಂದಿಗೆ ನಾವು ಅಚಲವಾಗಿ ನಿಲ್ಲುತ್ತೇವೆ' ಎಂದು ಹೇಳಿದ್ದಾರೆ.
'ನ್ಯಾಷನಲ್ ಹೆರಾಲ್ಡ್ ಕೇವಲ ಒಂದು ಪತ್ರಿಕೆಯಲ್ಲ. ಇದು ನಮ್ಮ ಸ್ವಾತಂತ್ರ್ಯ ಹೋರಾಟದ ಸಂಕೇತ. ಧೈರ್ಯ, ತ್ಯಾಗ ಮತ್ತು ದೇಶದ ಜನ ಸಾಮಾನ್ಯರ ಧ್ವನಿಯಾಗಿದೆ. ಆ ಪರಂಪರೆಯನ್ನು ದ್ವೇಷ ರಾಜಕಾರಣದಿಂದ ಅಳಿಸಿ ಹಾಕಲು ಸಾಧ್ಯವಿಲ್ಲ. ಸತ್ಯಕ್ಕೆ ಯಾವಾಗಲೂ ಜಯವಾಗಲಿದೆ' ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.