ADVERTISEMENT

ಬೆಳಗಾವಿ ಅಧಿವೇಶನ | ‘ನ್ಯಾಷನಲ್ ಹೆರಾಲ್ಡ್‌’ ಪ್ರಕರಣ: ಸದನದಲ್ಲಿ ಕೋಲಾಹಲ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 18:02 IST
Last Updated 17 ಡಿಸೆಂಬರ್ 2025, 18:02 IST
<div class="paragraphs"><p>ಬೆಳಗಾವಿ ಅಧಿವೇಶನ (ಸಂಗ್ರಹ ಚಿತ್ರ)</p></div>

ಬೆಳಗಾವಿ ಅಧಿವೇಶನ (ಸಂಗ್ರಹ ಚಿತ್ರ)

   

ಸುವರ್ಣ ವಿಧಾನಸೌಧ(ಬೆಳಗಾವಿ): ಕಾಂಗ್ರೆಸ್‌ನ ಎ.ಎಸ್.ಪೊನ್ನಣ್ಣ ಅವರು ವಿಧಾನಸಭೆಯಲ್ಲಿ ಶೂನ್ಯ ವೇಳೆಯಲ್ಲಿ ನ್ಯಾಷನಲ್‌ ಹೆರಾಲ್ಡ್‌ ವಿಷಯವನ್ನು ಪ್ರಸ್ತಾಪಿಸಿ, ಕೇಂದ್ರ ಸರ್ಕಾರ ಕೇಂದ್ರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಪ್ರಸ್ತಾಪಿಸಿದ್ದು ಭಾರಿ ಗದ್ದಲಕ್ಕೆ ಕಾರಣವಾಯಿತು.

‘ತನಿಖಾ ಸಂಸ್ಥೆಗಳಾದ ಇಡಿ, ಸಿಬಿಐ, ಐಟಿಗಳನ್ನು ತಮ್ಮ ರಾಜಕೀಯ ವಿರೋಧಿಗಳನ್ನು ಮಟ್ಟ ಹಾಕಲು ಬಳಸಿಕೊಳ್ಳಲಾಗುತ್ತಿದೆ’ ಎಂದು ಪೊನ್ನಣ್ಣ ಹೇಳಿದಾಗ ಇದಕ್ಕೆ ಬಿಜೆಪಿ ಸದಸ್ಯರು ತೀವ್ರವಾಗಿ ಆಕ್ಷೇಪಿಸಿ, ‘ಯಾವುದೇ ಕಾರಣಕ್ಕೂ ಚರ್ಚೆಗೆ ಅವಕಾಶ ನೀಡಬಾರದು’ ಎಂದು ಆಗ್ರಹಿಸಿದರು.

ADVERTISEMENT

ಒಂದು ಹಂತದಲ್ಲಿ ಬಿಜೆಪಿ– ಕಾಂಗ್ರೆಸ್‌ ಸದಸ್ಯರ ಮಧ್ಯೆ ಕಾವೇರಿದ ವಾಗ್ವಾದ ನಡೆದಾಗ ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಕಲಾಪವನ್ನು ಒಂದು ಗಂಟೆಯಷ್ಟು ಕಾಲ ಮುಂದೂಡಿದ ಪ್ರಸಂಗವೂ ನಡೆಯಿತು.

ಪೊನ್ನಣ್ಣ ಅವರ ಪ್ರಸ್ತಾಪವನ್ನು ಬಿಜೆಪಿಯ ಎಸ್‌.ಸುರೇಶ್‌ ಕುಮಾರ್ ಅವರು ಬಲವಾಗಿ ವಿರೋಧಿಸಿದರು. ‘ವಿಧಾನಸಭೆಯ ನಿಯಮಾವಳಿ ಪ್ರಕಾರ ಶೂನ್ಯ ವೇಳೆಯಲ್ಲಿ ಇಂತಹ ವಿಷಯ ಪ್ರಸ್ತಾಪಿಸಲು ಅವಕಾಶವಿಲ್ಲ. ಇದು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ಕೇಂದ್ರ ಸರ್ಕಾರವಾಗಲಿ, ಇ.ಡಿ, ಐಟಿಯವರಾಗಲಿ ಇಲ್ಲಿಗೆ ಬಂದು ಉತ್ತರ ಕೊಡಲು ಸಾಧ್ಯವಿಲ್ಲ. ಹಾಗಿದ್ದರೆ ಸರ್ಕಾರದ ಪರವಾಗಿ ಯಾರು ಉತ್ತರ ಕೊಡುತ್ತಾರೆ’ ಎಂದು ಪ್ರಶ್ನಿಸಿದರು.

ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಮಾತನಾಡಿ, ‘ಇಲ್ಲಿಗೆ ಸಂಬಂಧವಿಲ್ಲದ ವಿಚಾರವನ್ನು ಪ್ರಸ್ತಾಪಿಸಿರುವುದು ಕಾನೂನು ಬಾಹಿರ. ಈ ವಿಷಯ ಪ್ರಸ್ತಾಪಿಸಲು ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಬೇಕಿದ್ದರೆ ಸಂಸತ್ತಿನಲ್ಲಿ ಚರ್ಚೆ ಮಾಡಿ’ ಎಂದು ತರಾಟೆಗೆ ತೆಗೆದುಕೊಂಡರು.

ಆಗ ಮಧ್ಯ ಪ್ರವೇಶಿಸಿದ ಕಾನೂನು ಸಚಿವ ಎಚ್‌.ಕೆ.ಪಾಟೀಲ, ‘ನ್ಯಾಷನಲ್‌ ಹೆರಾಲ್ಡ್‌ ಸ್ವಾತಂತ್ರ್ಯ ಹೋರಾಟದ ವೇಳೆ ಸ್ವಾತಂತ್ರ್ಯದ ಪರ ಇದ್ದ ಪತ್ರಿಕೆ. ಇದರ ಮೇಲೆ ರಾಜಕೀಯ ಗೂಬೆ ಕೂರಿಸುವ ಕೆಲಸ ಆಗಿದೆ. ಇದರ ವಿಚಾರಣೆಗೆ ನ್ಯಾಯಾಲಯ ತಡೆ ನೀಡಿ ಕೇಂದ್ರ ಸರ್ಕಾರಕ್ಕೆ ಕಪಾಳ ಮೋಕ್ಷ ಮಾಡಿದೆ’ ಎಂದು ಹೇಳಿದರು. ಆಗ ಬಿಜೆಪಿ ಸದಸ್ಯರು ‘ವೋಟ್ ಚೋರಿ ಅಲ್ಲ ಹೆರಾಲ್ಡ್‌ ಚೋರಿ’ ಎಂದು ಘೋಷಣೆ ಹಾಕಿದರು.

‘ಸೋನಿಯಾಗಾಂಧಿ ಕುಟುಂಬ ಅಕ್ರಮವಾಗಿ ಹಣ ವರ್ಗಾವಣೆ ಮಾಡಿರುವ ಆರೋಪವನ್ನು ಹೊಂದಿದೆ. ಇದು ವೈಯಕ್ತಿಕ ಪ್ರಕರಣವೇ ಹೊರತು ಸಾರ್ವಜನಿಕ ಹಿತಾಸಕ್ತಿಯ ಪ್ರಕರಣವಲ್ಲ’ ಎಂದು ಬಿಜೆಪಿಯ ಆರಗ ಜ್ಞಾನೇಂದ್ರ ಹೇಳಿದರು.

ಪೊನ್ನಣ್ಣ ಮತ್ತು ಎಚ್‌.ಕೆ.ಪಾಟೀಲ ಅವರ ಪರವಾಗಿ ಪ್ರಿಯಾಂಕ್ ಖರ್ಗೆ, ಎಚ್‌.ಸಿ.ಮಹದೇವಪ್ಪ, ಕೆ.ಎಂ.ಶಿವಲಿಂಗೇಗೌಡ, ಎಚ್‌.ಸಿ.ಬಾಲಕೃಷ್ಣ ಮತ್ತು ಇತರರು ಬಿಜೆಪಿಯ ಶಾಸಕರ ವಿರುದ್ದ ವಾಗ್ದಾಳಿ ನಡೆಸಿದರು. ‘ಡಿ.ಕೆ.ಶಿವಕುಮಾರ್ ಅವರಿಗೆ ಯಾವ ಆಧಾರದ ಮೇಲೆ ನೋಟಿಸ್‌ ನೀಡಲಾಗಿದೆ. ಉದ್ದೇಶ ಪೂರ್ವಕವಾಗಿ ಸಿಲುಕಿಸಲಾಗಿದೆ’ ಎಂದು ಪ್ರಿಯಾಂಕ್ ಹೇಳಿದಾಗ, ‘₹10 ಕೋಟಿ ಕೊಟ್ಟಿದ್ದಕ್ಕೇ ನೋಟಿಸ್ ಬಂದಿರಬಹುದು. ನಿಮಗೆ ಅವರ ಮೇಲೆ ಬಹಳ ಪ್ರೀತಿ ಇದ್ದರೆ, ಅವರನ್ನೇ ಮುಖ್ಯಮಂತ್ರಿ ಮಾಡಿ’ ಎಂದು ಅಶೋಕ ಕಾಲೆಳೆದರು.

ಆರೋಪ –ಪ್ರತ್ಯಾರೋಪ ಜೋರಾದಾಗ ಬಿಜೆಪಿಯ ಸುನಿಲ್‌ಕುಮಾರ್ ಅವರು ಸಭಾಧ್ಯಕ್ಷ ಯು.ಟಿ.ಖಾದರ್ ಅವರನ್ನು ತರಾಟೆಗೆ ತೆಗೆದುಕೊಂಡು, ‘ಲೋಕಸಭೆಯಲ್ಲಿ ಈ ವಿಚಾರ ಚರ್ಚೆ ಮಾಡುವುದು ಬಿಟ್ಟು ರಾಹುಲ್‌ಗಾಂಧಿ ಜರ್ಮನಿಗೆ ಓಡಿ ಹೋಗಿದ್ದಾರೆ. ಸದನವನ್ನು ಸಭಾಧ್ಯಕ್ಷರು ತಮ್ಮ ಖುಷಿಗೆ ತಕ್ಕಂತೆ ನಡೆಸುತ್ತಿದ್ದಾರೆ. ಪೀಠಕ್ಕೆ ಮಾರ್ಯದೆ ಇಲ್ಲವೇ? ನೀವು ಪೀಠಕ್ಕೆ ಅವಮಾನ ಮಾಡುತ್ತಿದ್ದೀರಿ’ ಎಂದು ಅಬ್ಬರಿಸಿದಾಗ, ಸಭಾಧ್ಯಕ್ಷರು ಕಲಾಪ ಮುಂದೂಡಿದರು.

ಬಳಿಕ ತಮ್ಮ ಕೊಠಡಿಗೆ ಆಡಳಿತ ಮತ್ತು ವಿರೋಧ ಪಕ್ಷಗಳ ನಾಯಕರನ್ನು ಕರೆಸಿ ಸಂಧಾನ ಮಾಡಿದರು. ಬಳಿಕ ಕಲಾಪ ಸೇರಿದಾಗ ಎಚ್‌.ಕೆ.ಪಾಟೀಲ ಈ ವಿಷಯದ ಪ್ರಸ್ತಾಪದ ಕುರಿತು ಸಮಜಾಯಿಷಿ ನೀಡಿದರು. ‘ಆದರೆ ಈ ವಿಷಯ ಕಲಾಪದ ವ್ಯಾಪ್ತಿಗೆ ಬರುವುದಿಲ್ಲ’ ಎಂದು ಸಭಾಧ್ಯಕ್ಷರು ಚರ್ಚೆಗೆ ತೆರೆ ಎಳೆದರು.

ಡಿಕೆಶಿಗೆ ನೋಟಿಸ್‌: ಶಾಸಕರ ಚರ್ಚೆ

ಪೊನ್ನಣ್ಣ ಮತ್ತು ಎಚ್‌.ಕೆ.ಪಾಟೀಲ ಅವರ ಪರವಾಗಿ ಪ್ರಿಯಾಂಕ್ ಖರ್ಗೆ, ಎಚ್‌.ಸಿ.ಮಹದೇವಪ್ಪ, ಕೆ.ಎಂ.ಶಿವಲಿಂಗೇಗೌಡ, ಎಚ್‌.ಸಿ.ಬಾಲಕೃಷ್ಣ ಮತ್ತು ಇತರರು ಬಿಜೆಪಿಯ ಶಾಸಕರ ವಿರುದ್ದ ವಾಗ್ದಾಳಿ ನಡೆಸಿದರು. ‘ಡಿ.ಕೆ.ಶಿವಕುಮಾರ್ ಅವರಿಗೆ ಯಾವ ಆಧಾರದ ಮೇಲೆ ನೋಟಿಸ್‌ ನೀಡಲಾಗಿದೆ. ಉದ್ದೇಶ ಪೂರ್ವಕವಾಗಿ ಸಿಲುಕಿಸಲಾಗಿದೆ’ ಎಂದು ಪ್ರಿಯಾಂಕ್ ಹೇಳಿದಾಗ, ‘₹10 ಕೋಟಿ ಕೊಟ್ಟಿದ್ದಕ್ಕೇ ನೋಟಿಸ್ ಬಂದಿರಬಹುದು. ನಿಮಗೆ ಅವರ ಮೇಲೆ ಬಹಳ ಪ್ರೀತಿ ಇದ್ದರೆ, ಅವರನ್ನೇ ಮುಖ್ಯಮಂತ್ರಿ ಮಾಡಿ’ ಎಂದು ಅಶೋಕ ಕಾಲೆಳೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.